ಮುಂಬೈ ದಾಳಿಯಲ್ಲಿ ಕೈವಾಡ ಇಲ್ಲ ಪಾಕ್ ಪುನರುಚ್ಚಾರ
ನವದೆಹಲಿ (ಪಿಟಿಐ): ಮುಂಬೈ ದಾಳಿಯ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದರೆ ಭಾರತ ಹಾಗೂ ಪಾಕ್ ಮಧ್ಯೆ ಸದೃಢ ಬಾಂಧವ್ಯ ಬೆಳೆಯಲಿದೆ ಎಂದು ಭಾರತ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯಲ್ಲಿ ಬಲವಾಗಿ ಪ್ರತಿಪಾದಿಸಿದರೆ ಪಾಕಿಸ್ತಾನ ಮುಂಬೈ ದಾಳಿಯಲ್ಲಿ ತನ್ನ ಕೈವಾಡ ಇಲ್ಲ ಎಂದು ಪುನರುಚ್ಚರಿಸಿತು.
ಇಂದಿಲ್ಲಿ ಮುಕ್ತಾಯಗೊಂಡ ಎರಡು ದಿನಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್ ಹಾಗೂ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಜಲೀಲ್ ಅಬ್ಬಾಸ್ ಜಿಲಾನಿ ಅವರು ಮಾತುಕತೆಯು ಮುಕ್ತ ಹಾಗೂ ರಚನಾತ್ಮಕವಾಗಿತ್ತು ಎಂದು ತಿಳಿಸಿದರು.
ಮುಂಬೈ ದಾಳಿಯ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಪಾಕ್ ಕ್ರಮ ತೆಗೆದುಕೊಂಡಲ್ಲಿ ಭಾರತ ಹಾಗೂ ಪಾಕ್ ನಡುವೆ ವಿಶ್ವಾಸ ಇನ್ನಷ್ಟು ವೃದ್ದಿಸುತ್ತದೆ ಎಂದು ಮಥಾಯ್ ಒತ್ತಿ ಹೇಳಿದರು.
ಆದರೆ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಜಲೀಲ್ ಅಬ್ಬಾಸ್ ಜಿಲಾನಿ ಅವರು ಈ ಸಂಬಂಧ ಇನ್ನಷ್ಟು ಸಾಕ್ಷ್ಯ ಒದಗಿಸಬೇಕೆಂಬ ತಮ್ಮ ಹಳೆಯ ನಿಲುವಿಗೆ ಅಂಟಿ ಕೊಂಡರು.
ಇತ್ತೀಚೆಗಷ್ಟೆ ಸೆರೆಯಾದ ಉಗ್ರ ಅಬು ಜುಂದಾಲ್ ಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಜಿಲಾನಿ ಅವರು ಪಾಕಿಸ್ತಾನ ಸರ್ಕಾರವಾಗಲಿ ಅಥವಾ ಏಜನ್ಸಿಯಾಗಲಿ ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿಲ್ಲ ಎಂದು ಪುನರುಚ್ಚರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.