ಬುಧವಾರ, ನವೆಂಬರ್ 20, 2019
21 °C
ಮಹಿಳಾ ಆತ್ಮಾಹುತಿ ದಳದ ಸದಸ್ಯರಿಂದ ದಾಳಿ ಸಾಧ್ಯತೆ

ಮುಂಬೈ, ಪುಣೆಯಲ್ಲಿ ಕಟ್ಟೆಚ್ಚರಕ್ಕೆ ಸೂಚನೆ

Published:
Updated:

ಮುಂಬೈ: ಪಾಕಿಸ್ತಾನದಲ್ಲಿ ತರಬೇತಿ ಪಡೆದ ಮಹಿಳಾ ಆತ್ಮಾಹುತಿ ದಳದ ಸದಸ್ಯರು ಮುಂಬೈ ಅಥವಾ ಪುಣೆ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರೀಯ ಬೇಹುಗಾರಿಕಾ ಸಂಸ್ಥೆ ಶಂಕೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಆ ನಗರಗಳಲ್ಲಿ ವಿಶೇಷ ನಿಗಾ ವಹಿಸಲಾಗುವುದು ಎಂದು ಮಹಾರಾಷ್ಟ್ರ ಗೃಹಸಚಿವ ಆರ್.ಆರ್. ಪಾಟೀಲ್ ತಿಳಿಸಿದ್ದಾರೆ.ಭಾರತಕ್ಕೆ ಭೇಟಿ ನೀಡುವ ವಿದೇಶಿ ಮಹಿಳಾ ಪ್ರವಾಸಿಗರು ಮತ್ತು ಬಟ್ಟೆ ಸುತ್ತಿಕೊಂಡು ಮುಖ ಮರೆಮಾಚುವ ಮಾನಿನಿಯರ ಮೇಲೆ ವಿಶೇಷ ನಿಗಾ ಇಡುವಂತೆ ಭದ್ರತಾ ಸಂಸ್ಥೆಗಳು ಸೇರಿದಂತೆ ವಿಚಕ್ಷಣಾ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಸೋಮವಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.ಮುಂಬೈ ಪೊಲೀಸರು, ರೈಲ್ವೆ ಪೊಲೀಸರು, ಜಿಲ್ಲಾ ಪೊಲೀಸರು ಮತ್ತು ವಿಮಾನ ನಿಲ್ದಾಣಗಳಲ್ಲಿ ಭದ್ರತೆಯ ಜವಾಬ್ದಾರಿ ಹೊತ್ತಿರುವ ಭದ್ರತಾ ಸಂಸ್ಥೆಗಳು, ಯಾವುದೇ ಅಹಿತಕರ ಘಟನೆ ನಡೆಯದಂತೆ ತೀವ್ರ ಕಟ್ಟೆಚ್ಚರದ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿಸಿಲು ಮತ್ತಷ್ಟು ಹೆಚ್ಚಾಗಲಿದ್ದು, ಬಹುತೇಕ ಯುವತಿಯರು ಮತ್ತು ಮಹಿಳೆಯರು ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ತಲೆ ಮತ್ತು ಮುಖದ ಅರ್ಧಭಾಗವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಮಹಿಳಾ ಆತ್ಮಾಹುತಿ ದಳದ ಸದಸ್ಯೆಯರ ಮೇಲೆ ನಿಗಾ ಇಡುವುದು ಭದ್ರತಾ ಸಂಸ್ಥೆಗಳಿಗೆ ಸವಾಲಿನ ಕೆಲಸವಾಗಿದೆ.

ಪ್ರತಿಕ್ರಿಯಿಸಿ (+)