ಬುಧವಾರ, ಮೇ 18, 2022
28 °C

ಮುಂಬೈ ಮಾದರಿ ಪಥ ಶಿಸ್ತು ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈ ವರ್ಷದ ಅಂತ್ಯದೊಳಗೆ ನಗರದ ಎಲ್ಲಾ ಪ್ರಮುಖ ಜಂಕ್ಷನ್‌ಗಳಲ್ಲೂ ಮುಂಬೈ ಮಹಾನಗರದ ಮಾದರಿಯಲ್ಲಿ ಪಥ ಶಿಸ್ತನ್ನು ಅಳವಡಿಸಲಾಗುವುದು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ ಸಲೀಂ ತಿಳಿಸಿದರು.`ಮುಂಬೈ ಮಹಾನಗರವು ದೇಶದಲ್ಲೇ ಉತ್ತಮ ಪಥಶಿಸ್ತನ್ನು ಹೊಂದಿದ್ದು, ಬೆಂಗಳೂರು ನಗರದಲ್ಲೂ ಮುಂದಿನ ಆರು ತಿಂಗಳೊಳಗೆ ಅದೇ ರೀತಿಯ ಪಥಶಿಸ್ತನ್ನು ಜಾರಿಗೆ ತರಲಾಗುವುದು. ಈ ಪಥಶಿಸ್ತು ಯೋಜನೆಯ ಅಳವಡಿಕೆಯಿಂದ ಶೇ 15ರಿಂದ 20ರಷ್ಟು ವಾಹನ ದಟ್ಟಣೆ ಕಡಿಮೆಯಾಗಲಿದೆ. ಅಲ್ಲದೇ ರಸ್ತೆ ಅಪಘಾತಗಳನ್ನು ತಪ್ಪಿಸಲು ಈ ಯೋಜನೆ ಸಹಕಾರಿಯಾಗಲಿದೆ~ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.`ಪಥಶಿಸ್ತಿನ ಮಹತ್ವದ ಬಗ್ಗೆ ವಾಹನ ಸವಾರರಲ್ಲಿ ಜಾಗೃತಿ ಇಲ್ಲ. ಆದ್ದರಿಂದ ನಿಯಮ ಉಲ್ಲಂಘಿಸಿದವರ ವಿರುದ್ಧ ದೂರು ದಾಖಲಿಸಿಕೊಳ್ಳುವುದಕ್ಕಿಂತ ಅವರಲ್ಲಿ ಅರಿವು ಮೂಡಿಸುವುದು ಉತ್ತಮ ಎಂಬ ನಿರ್ಧಾರಕ್ಕೆ ಸಂಚಾರ ಪೊಲೀಸರು ಬಂದಿದ್ದಾರೆ. ಒಂದು ತಿಂಗಳು ಪಥಶಿಸ್ತಿನ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತೇವೆ. ಆ ನಂತರವೂ ನಿಯಮ ಪಾಲಿಸದ ಸವಾರರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು~ ಎಂದು ಎಚ್ಚರಿಕೆ ನೀಡಿದರು.ಪ್ರಾಥಮಿಕ ಕಾರ್ಯ ಪ್ರಗತಿಯಲ್ಲಿದೆ: `ವಾಹನ ಸವಾರರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಂಭವಿಸುತ್ತಿರುವ ಅಪಘಾತಗಳು ನಗರದಲ್ಲಿ ಹೆಚ್ಚುತ್ತಿವೆ. ಆದ್ದರಿಂದ ಸಂಚಾರ ಪೊಲೀಸರು ವಾಹನ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ರಬ್ಬರ್ ಕೋನ್ (ವಿಭಜಕ) ಅಳವಡಿಸುತ್ತಿದ್ದಾರೆ. ಇದರಿಂದ ತೀವ್ರತರದ ಅಪಘಾತಗಳು ಸಂಭವಿಸುವುದಿಲ್ಲ~ ಎಂದು ಅಭಿಪ್ರಾಯಪಟ್ಟರು.`2 ಕೋನ್‌ಗಳ ನಡುವೆ ಬೈಕ್ ಸವಾರರು ಬೈಕ್ ನುಗ್ಗಿಸಿಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ಅಧ್ಯಯನ ಮಾಡಿ ಮುಂದಿನ ದಿನಗಳಲ್ಲಿ ಬೈಕ್‌ಗಳು ಪಕ್ಕದ ರಸ್ತೆಗೆ ಹೋಗದಂತೆ ಲೋಹದ ವಿಭಜಕವನ್ನು ಅಳವಡಿಸಲಾಗುವುದು~ ಎಂದರು.`ಇಂದಿನ ತಂತ್ರಜ್ಞಾನ ಯುಗದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ಬಗ್ಗೆ ವಿವರ ತಿಳಿಯಲು ಸಂಚಾರ ಪೊಲೀಸರಿಗೆ ಕಷ್ಟವಾಗುವುದಿಲ್ಲ ಎಂಬುದನ್ನು ವಾಹನ ಸವಾರರು ಗಮನದಲ್ಲಿಟ್ಟುಕೊಳ್ಳಬೇಕು. ಕೆಲವು ರಸ್ತೆಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳು, ಪೊಲೀಸ್ ಸಿಬ್ಬಂದಿ ಬಳಿ ಇರುವ ಡಿಜಿಟಲ್ ಕ್ಯಾಮೆರಾ ಹಾಗೂ ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ನಿಯಮ ಉಲ್ಲಂಘಿಸಿದ ಚಾಲಕನ ಹಾಗೂ ವಾಹನದ ದೃಶ್ಯಗಳು ದಾಖಲಾಗಿರುತ್ತವೆ. ಆ ಮಾಹಿತಿಯ ಆಧಾರದ ಮೇಲೆ ನಿಯಮ ಉಲ್ಲಂಘಿಸಿದ ಸವಾರರಿಗೆ ನೋಟಿಸ್ ಕಳುಹಿಸಿ ದಂಡ ವಸೂಲಿ ಮಾಡಲಾಗುವುದು. ಜತೆಗೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು~ ಎಂದು ಎಚ್ಚರಿಕೆ ನೀಡಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.