ಮುಂಬೈ ಮೇಲೆ ದಾಳಿ: ಐ.ಎಂ ಎಚ್ಚರಿಕೆ

ಬುಧವಾರ, ಜೂಲೈ 24, 2019
27 °C

ಮುಂಬೈ ಮೇಲೆ ದಾಳಿ: ಐ.ಎಂ ಎಚ್ಚರಿಕೆ

Published:
Updated:

ಮುಂಬೈ (ಪಿಟಿಐ): ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ದಾಳಿ ನಡೆಸುವುದಾಗಿ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ (ಐಎಂ) ಟ್ವಿಟರ್‌ನಲ್ಲಿ ಬೆದರಿಕೆ ಒಡ್ಡಿದೆ.ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಗರದಾದ್ಯಂತ ಬಿಗಿ ಭದ್ರತೆ ಕೈಗೊಂಡಿದೆ. ಆದರೆ, ಟ್ವಿಟರ್ ಖಾತೆಯ ವಿಶ್ವಾಸಾರ್ಹತೆಯ ಬಗ್ಗೆ ಸಂಶಯ ಮೂಡಿದೆ.`ಬೆದರಿಕೆ ಸಂದೇಶವನ್ನು ಪ್ರಕಟಿಸಿರುವ ಟ್ವಿಟರ್ ಖಾತೆಯ ಸಾಚಾತನದ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಸಂದೇಹ ಬಂದಿದ್ದರೂ, ತನಿಖಾಧಿಕಾರಿಗಳು ಈ ವಿಷಯವನ್ನು ಹಗುರವಾಗಿ ಪರಿಗಣಿಸಿಲ್ಲ' ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಅಧಿಕಾರಿಯೊಬ್ಬರು ಹೇಳಿದ್ದಾರೆ.`ಎಚ್ಚರಿಕೆ ವಹಿಸುವಂತೆ ಎಟಿಎಸ್‌ನ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಗರದ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಪೊಲೀಸರಿಗೂ ಸೂಚಿಸಲಾಗಿದೆ' ಎಂದು ಅವರು ಹೇಳಿದ್ದಾರೆ.ಭಾನುವಾರ ಬಿಹಾರದ ಬೋಧ ಗಯಾದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳ ನಂತರ ಐಎಂನ ಅಧಿಕೃತ ಟ್ವಿಟರ್ ಖಾತೆ ಎಂದು ಹೇಳಲಾಗಿರುವ `ಇಂಡಿಯನ್ ಮುಜಾಹಿದ್ದೀನ್' ತನ್ನ ಪುಟದಲ್ಲಿ, `9 ಧಮಾಕೆ ಹಮ್ನೆ ಕರಾಯೆ' (ಒಂಬತ್ತು ಸ್ಫೋಟಗಳನ್ನು ನಾವು ಮಾಡಿದ್ದು) ಎಂದು ಬರೆದುಕೊಂಡಿತ್ತು.ಬಿಹಾರದಲ್ಲಿ ಸ್ಫೋಟ ನಡೆಯುವುದಕ್ಕೂ ಎರಡು ದಿನ ಮೊದಲು ಅಂದರೆ ಜುಲೈ 5ರಂದು,  `ಹಮಾರಾ ಅಗ್‌ಲಾ ಟಾರ್ಗೆಟ್ ಮುಂಬೈ ಹೈ. ರೋಕ್ ಸಕೆ ತೊ ರೋಕ್ ಲೋ, 7 ಡೇಸ್ ಲೆಫ್ಟ್' (ನಮ್ಮ ಮುಂದಿನ ಗುರಿ ಮುಂಬೈ. ನಮ್ಮನ್ನು ತಡೆಯಲು ಸಾಧ್ಯವಾದರೆ ತಡೆಯಿರಿ. ಕೇವಲ ಏಳು ದಿನಗಳು ಬಾಕಿ ಉಳಿದಿವೆ) ಎಂದೂ ಅದು ಬರೆದಿತ್ತು.ಈ ಟ್ವಿಟರ್ ಖಾತೆಯ ವಿಶ್ವಾಸಾರ್ಹತೆ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೂಡ ತನಿಖೆ ನಡೆಸುತ್ತಿದೆ. ಟ್ವಿಟರ್‌ನಲ್ಲಿ ಪ್ರಕಟಕೊಂಡಿರುವ ಸಂದೇಶದ ಬಗ್ಗೆ ಪ್ರತಿಕ್ರಿಯಿಸಲು ಹೆಚ್ಚುವರಿ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ಸದಾನಂತ ದಾಟೆ ನಿರಾಕರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry