ಶುಕ್ರವಾರ, ಮೇ 7, 2021
27 °C

ಮುಕ್ಕುಂದಾ ಗ್ರಾಮಸ್ಥರಿಂದ ಜೆಸ್ಕಾಂ ಕಚೇರಿ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ಮೂರು ತಿಂಗಳಿನಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಕಾರಣ ತಾಲ್ಲೂಕಿನ ಮುಕ್ಕುಂದಾ ಗ್ರಾಮಸ್ಥರು ಮಂಗಳವಾರ ಬೆಳಿಗ್ಗೆ ಪಿ.ಡಬ್ಲೂ.ಡಿ.ಕ್ಯಾಂಪಿನಲ್ಲಿರುವ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಟ್ರ್ಯಾಕ್ಟರ್‌ನಲ್ಲಿ ಆಗಮಿಸಿದ ನೂರಾರು ಗ್ರಾಮಸ್ಥರು ಜೆಸ್ಕಾಂ ಕಚೇರಿಯ ಕಾರ್ಯಾಲಯದ ಗೇಟ್‌ಗೆ ಅಡ್ಡವಾಗಿ ಟ್ರ್ಯಾಕ್ಟರ್ ನಿಲ್ಲಿಸಿ ಪ್ರತಿಭಟಿಸಿದರು.ದೊಡ್ಡ ಗ್ರಾಮವಾದ ಮುಕ್ಕುಂದಾದಲ್ಲಿ 4 ವಿದ್ಯುತ್ ಪರಿವರ್ತಕಗಳು ಅವಶ್ಯವಿದ್ದು, ಕೇವಲ ಒಂದೇ ಪರಿವರ್ತಕ ಅಳವಡಿಸಲಾಗಿರುವುದರಿಂದ ಪದೇ ಪದೇ ದುರಸ್ತಿಗೆ ಬರುತ್ತಿದೆ. ಎನ್.ಟಿ.ಸಿ. ಎನ್ನುವ ಕಂಪನಿಯವರಿಗೆ ವಹಿಸಲಾಗಿದ್ದು ದುರಸ್ತಿ ಮಾಡಿದ ಎರಡ್ಮೂರು ದಿನಗಳಲ್ಲೇ ವಿದ್ಯುತ್ ಪರಿವರ್ತಕ ಕೈಕೊಡುವುದು ಸಾಮಾನ್ಯ. ವಿದ್ಯುತ್ ಸಮಸ್ಯೆಯಿಂದಾಗಿ ಹಿಟ್ಟು ಬೀಸುವುದು ಸೇರಿದಂತೆ ಇನ್ನಿತರ ಸಣ್ಣಪುಟ್ಟ ಕೆಲಸಗಳಿಗೆ ಹುಡಾ, ಸಿಂಗಾಪೂರ ಮತ್ತಿತರ ಗ್ರಾಮಗಳನ್ನು ಜನತೆ ಅವಲಂಬಿಸಬೇಕಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಮತ್ತಷ್ಟು ಉಲ್ಬಣಿಸುತ್ತಿದೆ.ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ರಾತ್ರಿ ಬೀದಿ ದೀಪಗಳ ಬೆಳಕು ಇಲ್ಲದಿರುವುದರಿಂದ ಓಣಿಗಳಲ್ಲಿ ಸಂಚರಿಸಲು ಭಯಪಡುವಂತಾಗಿದೆ ಎಂದು ಪ್ರತಿಭಟನಾ ನಿರತರು ದೂರಿದರು. ದುರಸ್ತಿ ಕೆಲಸವನ್ನು ಎನ್.ಟಿ.ಸಿ.ಕಂಪನಿಗೆ ವಹಿಸದಿರುವಂತೆ ಆಗ್ರಹಿಸಿದರು.ಗ್ರಾಮಸ್ಥರ ಅಹವಾಲು ಆಲಿಸಿದ ಎ.ಇ.ಇ. ಚಂದ್ರಶೇಖರ ದೇಸಾಯಿ ವಿದ್ಯುತ್ ಪರಿವರ್ತಕಗಳ ಅಳವಡಿಕೆಗೆ ಶೀಘ್ರ ಕಾರ್ಯಪ್ರವೃತ್ತರಾಗುವುದಾಗಿ ಭರವಸೆ ನೀಡಿದರು. ಗ್ರಾಮಸ್ಥರು ಶಾಸಕ ವೆಂಕಟರಾವ್ ನಾಡಗೌಡ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಈಗಾಗಲೇ ಜೆಸ್ಕಾಂ ಇಲಾಖೆ ಎಂ.ಡಿ. ಅವರೊಂದಿಗೆ ಮಾತನಾಡಿದ್ದು, ಹೊಸಪೇಟೆಯಿಂದ 1, ಕೊಪ್ಪಳದಿಂದ 2 ವಿದ್ಯುತ್ ಪರಿವರ್ತಕಗಳನ್ನು ತರಿಸಿ ಅಳವಡಿಸುವ ವ್ಯವಸ್ಥೆ ಮಾಡಲಾಗುವುದಾಗಿ ತಿಳಿಸಿದರೆಂದು ಗ್ರಾಮದ ಖಾಜಾವಲಿ ಹೇಳಿದರು.ಮುತ್ತಿಗೆ ಹಾಕಿದ ಗ್ರಾಮಸ್ಥರನ್ನು ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ ನಾಡಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಜಿಲ್ಲಾ ಪಂಚಾಯಿತಿ ಸದಸ್ಯ ಚಂದೂಸಾಬ ಮುಳ್ಳೂರು, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ, ಯುವ ಮೋರ್ಚಾದ ಶಂಕರಗೌಡ ಜೋಳದರಾಶಿ ಮನವೊಲಿಸಲು ಪ್ರಯತ್ನಿಸಿದರು. ಪ್ರತಿಭಟನೆಯ ನೇತೃತ್ವವನ್ನು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಾಗೋಡಿ ಈರಣ್ಣ, ಚನ್ನಮಲ್ಲಯ್ಯ, ವೆಂಕಟರಾಮರೆಡ್ಡಿ ವಹಿಸಿದ್ದರು. ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.