ಮುಕ್ತಾಯದತ್ತ ಕಪಿಲಾ ಸೇತುವೆ ಕಾಮಗಾರಿ

7

ಮುಕ್ತಾಯದತ್ತ ಕಪಿಲಾ ಸೇತುವೆ ಕಾಮಗಾರಿ

Published:
Updated:

ತಿ.ನರಸೀಪುರ: ತಾಲ್ಲೂಕಿನ ಪ್ರಗತಿಗೆ ಪೂರಕವಾದ ಬೃಹತ್ ಅಭಿವೃದ್ಧಿ ಯೋಜನೆ ಎನ್ನಲಾಗುವ ಬೃಹತ್  ಕಬಿನಿ (ಕಪಿಲಾ) ನದಿ ನೂತನ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಜುಲೈ- ಆಗಸ್ಟ್ ವೇಳೆಗೆ ಸಾರ್ವಜನಿಕ ಬಳಕೆಗೆ ಲೋಕಾರ್ಪಣೆಯಾಗಲಿದೆ.ಪಟ್ಟಣಕ್ಕೆ ಹೊಂದಿಕೊಂಡಿರುವ ಕಪಿಲಾ ನದಿಗೆ ಅಡ್ಡಲಾಗಿ ವರುಣಾ ಕ್ಷೇತ್ರದ ವ್ಯಾಪ್ತಿಯ ಹೊಸ ಮತ್ತು ಹಳೆ ತಿರುಮಕೂಡಲಿನ ಮಧ್ಯೆ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಸುಮಾರು ರೂ 53.43 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ.ಮುಂದಿನ 50 ವರ್ಷಗಳ ಜನಸಂಖ್ಯೆ ಮತ್ತು ವಾಹನಗಳ ಸಂಚಾರದ ದೂರದೃಷ್ಟಿಯಿಂದ ಯೋಜನೆ ರೂಪಿಸಲಾಗಿದೆ. ಇದರ ಹೊಸ ವಿನ್ಯಾಸದಿಂದ ಈ ಭಾಗದಲ್ಲಿ ಎಂದಿಗೂ ಸಂಚಾರ ಸಮಸ್ಯೆ ಉದ್ಭವ ಆಗುವುದಿಲ್ಲ. ಮೇಲುಸೇತುವೆ, ಅಂಡರ್ ಪಾಸ್ ಹಾಗೂ ಸಂಪರ್ಕ ರಸ್ತೆಗಳು ನಿರ್ಮಾಣವಾಗುತ್ತಿರುವುದರಿಂದ ವಾಹನ ಚಾಲಕರಿಗೆ ಹಾಗೂ ಸವಾರರಿಗೆ ಬಹು ಆಯ್ಕೆಗಳೊಂದಿಗೆ ಸಂಚರಿಸಲು ಹೆಚ್ಚಿನ ಅನುಕೂಲ ಸಿಗಲಿದೆ.ಯೋಜನೆಯಲ್ಲಿ ಒಟ್ಟು ಸಂಪರ್ಕ ರಸ್ತೆಗಳು ಸೇರಿದಂತೆ 4.4 ಕಿ.ಮೀ. ರಸ್ತೆ ಡಾಂಬರೀಕರಣ ಮಾಡಲಾಗುತ್ತಿದೆ. ಹಳೆ ತಿರುಮಕೂಡಲಿನ ಪಿಟೀಲು ಚೌಡಯ್ಯ ವೃತ್ತದ ಬಳಿ ಅಂಡರ್ ಪಾಸ್ ಹಾಗೂ ಬಿಎಚ್‌ಎಸ್ ಐಟಿಐ ಕಾಲೇಜು ಹಿಂಬದಿ ಮತ್ತೊಂದು ಅಂಡರ್ ಪಾಸ್ ನಿರ್ಮಾಣವಾಗಿದೆ. ಜತೆಗೆ ಮೇಲುಸೇತುವೆ ನಿರ್ಮಾಣವಾಗುತ್ತಿದೆ. ಎರಡೂ ಬದಿಯಲ್ಲೂ ಸಂಪರ್ಕ ರಸ್ತೆಗಳು ನಿರ್ಮಾಣವಾಗುತ್ತಿದೆ.ಸೇತುವೆ ನಿರ್ಮಾಣಕ್ಕೆ ಕಾರಣ : ಪಟ್ಟಣದಲ್ಲಿ ಹರಿಯುವ ಕಪಿಲಾ ಮತ್ತು  ಕಾವೇರಿ ನದಿಗಳಿಗೆ  ಅಡ್ಡಲಾಗಿ ಪ್ರತ್ಯೇಕ ಸೇತುವೆಗಳಿವೆ. ಸುಮಾರು 7-8 ದಶಕಗಳ ಹಿಂದೆ ನಿರ್ಮಾಣವಾದ ಸೇತುವೆಗಳ ಮೇಲೆ ಆ ದಿನಗಳಲ್ಲಿ ಕಡಿಮೆ ಜನಸಂದಣಿ ಹಾಗೂ ವಾಹನ ಸಂಚಾರ ಇತ್ತು. ಪಟ್ಟಣ ವಿಸ್ತರಣೆಯಾದಂತೆ ಜನಸಂಖ್ಯೆ ಹಾಗೂ ವಾಹನಗಳ ವಿಪರೀತ ಜನಸಂದಣಿಯಿಂದ ಕಿರಿದಾದ ಕಪಿಲಾ ಸೇತುವೆ ಮೇಲೆ ನಿರಂತರವಾಗಿ ಸಂಚಾರ ಬಂದ್ ಸಮಸ್ಯೆ ಶುರುವಾಯಿತು. ಕೆಲವೊಮ್ಮೆ ದಿನಕ್ಕೆ 3-4 ಬಾರಿಯಂತೆ ಗಂಟೆಗಟ್ಟಲೆ ವಾಹನ ಸಂಚಾರ ಬಂದ್ ಆಗತೊಡಗಿತು.ಇದರಿಂದ ಬಸವಳಿದ ಜನರು ಕಪಿಲಾ ನದಿಗೆ ಪರ್ಯಾಯ ಸೇತುವೆ ಅಗತ್ಯ ಇರುವ ಬಗ್ಗೆ ನಿರಂತರ ಬೇಡಿಕೆ ಹಾಗೂ ಹೋರಾಟ ಮಾಡಿದರು. ಅದರ ಫಲವಾಗಿ ಆರಂಭದಲ್ಲಿ ಸುಮಾರು ರೂ 36 ಕೋಟಿ ವೆಚ್ಚದಲ್ಲಿ ಯೋಜನೆಗೆ ಚಾಲನೆ ಸಿಕ್ಕಿತು. ನಂತರ ಕಾಮಗಾರಿಯ ವಿನ್ಯಾಸ ಹಾಗೂ ದೂರದೃಷ್ಟಿಯ ಚಿಂತನೆಯಿಂದಾಗಿ ನಿರ್ಮಾಣವಾಗುತ್ತಿದೆ.`ಇದರಿಂದ ವ್ಯಾಪಾರ ವಹಿವಾಟು, ಜನಸಂದಣಿ ಮತ್ತಷ್ಟು ಹೆಚ್ಚಾಗಬಹುದು. ಪ್ರವಾಸಿಗರ ಸಂಖ್ಯೆಯೂ ವೃದ್ಧಿಸಬಹುದು ಎಂದು ನಿಲಸೋಗೆ ಗ್ರಾಮದ ಕೆ.ಎನ್. ಸುಬ್ರಮಣ್ಯ ಅಭಿಪ್ರಾಯಪಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry