ಮುಕ್ತಾಯ ಹಂತಕ್ಕೆ ಪರಿಶಿಷ್ಟ ಜಾತಿ ಜನಗಣತಿ

7

ಮುಕ್ತಾಯ ಹಂತಕ್ಕೆ ಪರಿಶಿಷ್ಟ ಜಾತಿ ಜನಗಣತಿ

Published:
Updated:

ಮಡಿಕೇರಿ: ಪರಿಶಿಷ್ಟ ಜಾತಿ ಜನಾಂಗದಲ್ಲಿ ಉಪ ಜಾತಿವಾರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಚಿತ್ರಣ ಪಡೆಯುವ ಉದ್ದೇಶದಿಂದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಪರಿಶಿಷ್ಟ ಜಾತಿ ಜನಾಂಗದ ಜನಗಣತಿ ಪ್ರಕ್ರಿಯೆ ಬಹುತೇಕ ಮುಕ್ತಾಯ ಹಂತದಲ್ಲಿದೆ.ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳಿವೆ. ಅದರಲ್ಲಿ ಯಾವ ಉಪ ಜಾತಿಯ ಜನಸಂಖ್ಯೆ ಎಷ್ಟಿದೆ? ಯಾವ ಭಾಗದಲ್ಲಿ ಯಾವ ಉಪ ಜಾತಿ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರದ ಸವಲತ್ತುಗಳನ್ನು ಯಾವ ಉಪ ಜಾತಿ ಎಷ್ಟು ಪ್ರಮಾಣದಲ್ಲಿ ಪಡೆದುಕೊಂಡಿದೆ ಎಂಬ ಬಗ್ಗೆ ಉಪ ಜಾತಿವಾರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ಚಿತ್ರಣ ಪಡೆಯುವುದೇ ಈ ಜನಗಣತಿಯ ಮುಖ್ಯ ಉದ್ದೇಶವಾಗಿದೆ.ಮೂಲಗಳ ಪ್ರಕಾರ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಉಪ ಜಾತಿವಾರು ಮೀಸಲಾತಿ ಪ್ರಮಾಣ ಹಂಚಿಕೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಇದರಿಂದ ಅಧಿಕ ಪ್ರಮಾಣದಲ್ಲಿ ಮೀಸಲಾತಿ ಸೌಲಭ್ಯವನ್ನು ಕಬಳಿಸುವಂತಹ ನಿರ್ದಿಷ್ಟ ಉಪ ಜಾತಿಗಳಿಗೆ ಕಡಿವಾಣ ಹಾಕಿ, ಉಪ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ನಿಗದಿಪಡಿಸಿ ಸವಲತ್ತು ಕಲ್ಪಿಸುವುದು ಜನಗಣತಿಯ ಒಟ್ಟಾರೆ ಒಳನೋಟ.2001ರ ಜನಗಣತಿ ಪ್ರಕಾರ, ಜಿಲ್ಲೆಯಲ್ಲಿ ಸುಮಾರು 67 ಸಾವಿರ ಪರಿಶಿಷ್ಟ ಜಾತಿ ಜನಾಂಗದವರಿದ್ದಾರೆ. ಈ ಜನಗಣತಿ ಕಾರ್ಯ ಮುಗಿದ ನಂತರ ಜಿಲ್ಲೆಯಲ್ಲಿ ಈ ಜಾತಿಯ ಜನಸಂಖ್ಯೆ ಎಷ್ಟು ಹೆಚ್ಚಾಗಿದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ದೊರೆಯಲಿದೆ. ಪರಿಶಿಷ್ಟ ಜಾತಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಪಾಲೆ ಉಪ ಜಾತಿಗಳ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ನಗರ ಪ್ರದೇಶದಲ್ಲಿ ಆದಿ ಆಂಧ್ರ ಉಪ ಜಾತಿ ಜನಾಂಗದವರೂ ಅಲ್ಪಸ್ವಲ್ಪ ಸಂಖ್ಯೆಯಲ್ಲಿದ್ದಾರೆ.‘ಜಿಲ್ಲೆಯಲ್ಲಿ ಎಲ್ಲಾ ಚಾರ್ಜ್ ಅಧಿಕಾರಿಗಳಿಗೆ ನೀಡಿದ ನಿರ್ದೇಶನದ ಮೇರೆಗೆ 1, 2, 2(ಎ), 3, 4 ಮತ್ತು 5 ನಮೂನೆಗಳನ್ನು ಭರ್ತಿ ಮಾಡುವ ಕೆಲಸ ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಚಾರ್ಜ್ ಅಧಿಕಾರಿಯಾಗಿರುವ ತಹಶೀಲ್ದಾರ್ ತಮ್ಮ ತಾಲ್ಲೂಕು ವ್ಯಾಪ್ತಿಗೆ ಬರುವ ಆರು ಹೋಬಳಿಗಳ ಪೈಕಿ ಎರಡು ಹೋಬಳಿಗಳ ಮಾಹಿತಿಯನ್ನು ಈಗಾಗಲೇ ಸಂಗ್ರಹಿಸಿದ್ದಾರೆ. ಇನ್ನು ನಾಲ್ಕು ಹೋಬಳಿಗಳ ಪ್ರಕ್ರಿಯೆ ಇನ್ನೆರಡು-ಮೂರು ದಿನಗಳಲ್ಲಿ ಮುಗಿಯಲಿದೆ. ಭರ್ತಿ ಮಾಡಿದ ಎಲ್ಲಾ ನಮೂನೆಗಳನ್ನು ಸಂಗ್ರಹಿಸಲಾಗುತ್ತಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಮಾತ್ರ ನಮೂನೆ 2 (ಎ)ರಲ್ಲಿ ಅಲ್ಪಸ್ವಲ್ಪ ತಿದ್ದುಪಡಿ ಮಾಡಬೇಕಿದ್ದು, ಅದು ತಹಶೀಲ್ದಾರ್ ಹಂತದಲ್ಲಿ ಪರಿಶೀಲನೆಯಲ್ಲಿದೆ’ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜೇಶ್ ಜಿ. ಗೌಡ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.ಜಾರ್ಚ್ ಅಧಿಕಾರಿಗಳಾದ ಮೂರು ತಾಲ್ಲೂಕಿನ ತಹಶೀಲ್ದಾರರು, ನಗರಸಭೆ ಪೌರಾಯುಕ್ತರು, ಮೂರು ಪಟ್ಟಣ ಪಂಚಾಯ್ತಿಗಳ ಮುಖ್ಯಾಧಿಕಾರಿಗಳು ಸರ್ವೆ ಕಾರ್ಯವನ್ನು ಬಹುತೇಕ ಪೂರ್ಣಗೊಳಿಸಿದ್ದು, ಆಯೋಗದಿಂದ ನಿರ್ದೇಶನ ಬಂದ ನಂತರ ಅದನ್ನು ಪ್ರಕಟಿಸಲಾಗುವುದು. ಈ ಸಂದರ್ಭದಲ್ಲಿ ಲೋಪದೋಷಗಳಿದ್ದಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅವರು ತಿಳಿಸಿದರು.2010ರ ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಜನಾಂಗದ ಜನಗಣತಿ ಕಾರ್ಯ ಪ್ರಾರಂಭವಾಗಿದ್ದು, ಆಯೋಗದ ನಿರ್ದೇಶನದಂತೆ ಡಿಸೆಂಬರ್ ಅಂತ್ಯಕ್ಕೆ ಮುಗಿಸಲಾಗಿದೆ. ಆಯೋಗ ಅಂತಿಮ ದಿನಾಂಕ ನಿಗದಿಪಡಿಸಿದ ನಂತರ ಜನಗಣತಿಯ ಮಾಹಿತಿಯನ್ನು ಸಲ್ಲಿಸಲಾಗುತ್ತದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry