ಮುಕ್ತಿಧಾಮಕ್ಕೆ `ಮುಕ್ತಿ' ಎಂದು?

7

ಮುಕ್ತಿಧಾಮಕ್ಕೆ `ಮುಕ್ತಿ' ಎಂದು?

Published:
Updated:

ಶನಿವಾರಸಂತೆ: ಪಟ್ಟಣದ ಬಳಿ ಸುಳುಗಳಲೆ ಹಾಗೂ ಬಿದರೂರು ಗ್ರಾಮದಲ್ಲಿ ಸಾರ್ವಜನಿಕ ಹಿಂದೂ ಸ್ಮಶಾನ ಅಭಿವೃದ್ಧಿ ಸಮಿತಿ ವತಿಯಿಂದ ಸಾರ್ವಜನಿಕ ಮುಕ್ತಿಧಾಮವೊಂದು (ಚಿತಾಗಾರ) ನಿರ್ಮಾಣಗೊಂಡು ಹಲವು ವರ್ಷಗಳು ಕಳೆದರೂ ಇದಕ್ಕೆ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ.ಈ ಹಿಂದೂ ಸ್ಮಶಾನಕ್ಕೆ ನೂರು ವರ್ಷಗಳ ಇತಿಹಾಸವಿದೆ. ಸುಮಾರು 5.83 ಎಕರೆ ಜಾಗದಲ್ಲಿ ಸುಸಜ್ಜಿತ ಚಿತಾಗಾರ ನಿರ್ಮಿಸಲು ಸಾರ್ವಜನಿಕ ಹಿಂದೂ ಸ್ಮಶಾನ ಅಭಿವೃದ್ಧಿ ಸಮಿತಿ 2005ರಲ್ಲಿ ಅಸ್ತಿತ್ವಕ್ಕೆ ಬಂದಿತು. ಕೆ.ಪಿ.ಶಿವಪ್ಪ ಅಧ್ಯಕ್ಷತೆಯ ಸಮಿತಿಯಲ್ಲಿ 20ಕ್ಕೂ ಅಧಿಕ ಸ್ಥಳೀಯ ಪ್ರಮುಖರಿದ್ದಾರೆ. ಸ್ಮಶಾನ ಜಾಗದ ಸಮೀಪದಲ್ಲಿ ಕಾಫಿ ತೋಟ ಹೊಂದಿರುವ ಮಾಲೀಕರ ವೈಯಕ್ತಿಕ ಹಿತಾಸಕ್ತಿಯಿಂದಾಗಿ ಮುಕ್ತಿಧಾಮದ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಜಾಗ ಒತ್ತುವರಿ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿತ್ತು.

ಎಲ್ಲಾ ಅಡ್ಡಿಗಳು ನಿವಾರಣೆಯಾದ ನಂತರ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಚಿತಾಗಾರದಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಇಲ್ಲದಿರುವ ಕಾರಣ ಕಾಸ್ಟ್ ಐಯರ್ನ್ ತಳಭಾಗ ಕಳುವುವಾಗಿದೆ. ಇದಕ್ಕಾಗಿ ಶೋಧ ಕಾರ್ಯ ನಡೆದಿದೆ.ಹರಿದುಬಂದ ಅನುದಾನ

ಡಿ.ವಿ.ಸದಾನಂದಗೌಡ ಅವರು ಈ ಭಾಗದ ಸಂಸದರಾಗಿದ್ದಾಗ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಲಕ್ಷ ರೂಪಾಯಿ, ವಿಧಾನ ಪರಿಷತ್ ಸದಸ್ಯರಾಗಿದ್ದ ಸಿ.ಎಸ್.ಅರುಣ್ ಮಾಚಯ್ಯ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ 2.75 ಲಕ್ಷ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿಯಿಂದ ರೂ 1.50 ಲಕ್ಷ ಅನುದಾನ ಸ್ಮಶಾನ ಸಮಿತಿಗೆ ಸಂದಾಯವಾಗಿದೆ.ಸ್ಮಶಾನದ ಸುತ್ತ ತಡೆಗೋಡೆ ನಿರ್ಮಾಣ, ನೀರಿನ ವ್ಯವಸ್ಥೆ, ಕಾವಲುಗಾರನ ನೇಮಕ, ಕಾವಲುಗಾರನಿಗೆ ವಾಸದ ಮನೆ ನಿರ್ಮಾಣ ಹಾಗೂ ವಿದ್ಯುತ್ ದೀಪದ ಸೌಕರ್ಯ ಮೊದಲಾದ ಅಭಿವೃದ್ಧಿ ಕಾರ್ಯಗಳು ಇನ್ನೂ ನಡೆಯಬೇಕಾಗಿದೆ.ಆದಷ್ಟು ಶೀಘ್ರ ಮುಕ್ತಿಧಾಮ ಉದ್ಘಾಟನೆಗೊಂಡು, ಸಾರ್ವಜನಿಕರ ಬಳಕೆಗೆ ಶೀಘ್ರ ಲಭ್ಯವಾಗಲಿ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.                                                                

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry