ಸೋಮವಾರ, ಮೇ 25, 2020
27 °C

ಮುಕ್ತ ಆಲೋಚನೆ ಅಗತ್ಯ: ನಾಗಭೂಷಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ತಲ್ಲಣಗಳಿಲ್ಲದ ಸಮಾಜ ಮುಂದುವರಿಯಲು ಸಾಧ್ಯವಿಲ್ಲ. ಉರ್ದು ಶಾಲೆಯಲ್ಲಿ ಕನ್ನಡ ಕಲಿಕೆ ವಿಚಾರ ಮುಕ್ತವಾಗಿ ಆಲೋಚನೆ ಮಾಡುವುದನ್ನು ಕಲಿಯಬೇಕು. ಉರ್ದು ಮತ್ತು ಕನ್ನಡ ಬೋಧನೆ ಸರಿಯಾಗಿ ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಮುಸ್ಲಿಮರು ಸರಾಗವಾಗಿ ಕನ್ನಡ ಮಾತನಾಡಲು ಆಗುತ್ತಿಲ್ಲ. ಕನ್ನಡ ಪ್ರಧಾನವಾದ ರಾಜ್ಯದಲ್ಲಿ ಕನ್ನಡ ಕಷ್ಟವಾಗುತ್ತಿರುವುದರ ಕಾರಣ ಅರಿಯಬೇಕಾಗಿದೆ ಎಂದು ಚಿಂತಕ ಡಿ.ಎಸ್. ನಾಗಭೂಷಣ ಅಭಿಪ್ರಾಯಪಟ್ಟರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕಾರಿಪುರದ ಸುನ್ನಾ ಶಿಕ್ಷಣ ಸಂಸ್ಥೆ ಸಂಯುಕ್ತವಾಗಿ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಉರ್ದು ಶಾಲೆಗಳಲ್ಲಿ ಕನ್ನಡ-ಉರ್ದು ಭಾಷಾ ಕಲಿಕೆ ಚಿಂತನಾ ಸಮಾವೇಶ’ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕನ್ನಡ ಮುಸ್ಲಿಮರ ಸಂಬಂಧ ನಾವು ತಿಳಿದುಕೊಂಡಷ್ಟು ಕಷ್ಟವಾಗಿಲ್ಲ. ನಮ್ಮ ಫಕೀರರು, ಮೋಹರಂ ಹಾಡುಗಳು ಕನ್ನಡದಲ್ಲಿ ಸೊಗಸಾಗಿ ಮೂಡಿಬಂದಿವೆ. ಮುಸ್ಲಿಂ ಸಂವೇದನೆ ಬರೆಯಲು ಶುರುಮಾಡಿದ ನಂತರ ಉಂಟಾದ ಸಮಸ್ಯೆ ಅಲ್ಲ. ಉರ್ದು ಮಾಧ್ಯಮದ ಅನಾಹುತದ ಚರ್ಚೆ ವಿದ್ಯುತ್ ತಂತಿ ಮುಟ್ಟಿದ ಆತಂಕ, ಅಘಾತ ಸಹಜ ಎಂದರು.ಭಾಷೆ ಒಂದು ಸಂಸ್ಕೃತಿ. ಆದರೆ, ಆಸಕ್ತಿ ವಹಿಸಿ ಕಲಿಯುವುದು, ಕಲಿಸುವುದು ಬಹಳ ಮುಖ್ಯ. ಕರ್ನಾಟಕದ ಮುಸ್ಲಿಂ ಕನ್ನಡವನ್ನು ಸರಾಗವಾಗಿ ಮಾತನಾಡುವುದನ್ನು ಕಲಿತರೆ ಅರ್ಧ ಸಮಸ್ಯೆ ಬಗೆಹರಿಯುತ್ತದೆ. ಉರ್ದು ಸುಂದರ, ಶ್ರೇಷ್ಠ ಭಾಷೆ. ಅದನ್ನು ಭಾಷೆಯಾಗಿ ಉಳಿಸಿಕೊಂಡು ಮಾಧ್ಯಮ ಯಾವುದಾಗಬೇಕು ಎನ್ನುವ ಪ್ರಶ್ನೆಗೆಉತ್ತರ ನೀವೇ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.ಉರ್ದು ಶಾಲೆಯ ಕನ್ನಡ ಪಠ್ಯ ಬೇರೆಯೇ ಇರಬೇಕು. ಕಲಿಸಲು ಸುಲಭವಾಗಿರಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ ನಾ. ಡಿಸೋಜ ಮಾತನಾಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡದ ಜತೆಗೆ, ಇತರೆ ಉಪ ಭಾಷೆಗಳ ಅಭಿವೃದ್ಧಿಯಲ್ಲೂ ಶ್ರಮಿಸುವ ಯೋಜನೆ ರೂಪಿಸಿದೆ. ಭಾಷಾ ಬಾಂಧವ್ಯ ದೇಶದ ದೃಷ್ಟಿಯಿಂದ ಅತ್ಯಂತ ಮಹತ್ವವಾಗಿದೆ. ಚಲನಚಿತ್ರದಲ್ಲಿ ಕೆಟ್ಟ ಭಾಷೆ ಮಾತನಾಡಿಸಿ ನಗಿಸುವ ಕೆಲಸ ಮಾಡುತ್ತಾರೆ. ಈ ಪರಿಸ್ಥಿತಿ ಹೋಗಬೇಕು. ಕನ್ನಡ ಚೆನ್ನಾಗಿ ಮಾತನಾಡುವ ಕೆಲಸ ಆಗಬೇಕು. ಗ್ರಹಿಕೆ ತಪ್ಪಿಂದ ಗೊಂದಲಕ್ಕೆ ಕಾರಣ ಆಗಬಾರದು ಎಂದರು.ಇದೇ ಸಂದರ್ಭದಲ್ಲಿ ಲೇಖಕಿ ಸಾರಾ ಅಬೂಬಕರ್ ಮತ್ತು ಕರ್ನಾಟಕ ಉರ್ದು ಅಕಾಡೆಮಿಯ ನೂತನ ಅಧ್ಯಕ್ಷ ಅಮ್ಜದ್ ಹುಸೇನ್ ಹಾಫೀಜ್ ಕರ್ನಾಟಕಿ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ ಅಭಿನಂದಿಸಿದರು.ಅಭಿನಂದನೆ ಸ್ವೀಕರಿಸಿದ ಅಮ್ಜದ್ ಹುಸೇನ್ ಹಾಫೀಜ್ ಕರ್ನಾಟಕಿ ಮಾತನಾಡಿ, ಉರ್ದುವನ್ನು ಧರ್ಮಕ್ಕೆ ಹೋಲಿಸಬೇಡಿ. ಉರ್ದು ಮತ್ತು ಕನ್ನಡವನ್ನು ನಮ್ಮ ಮಕ್ಕಳಿಗೆ ಚೆನ್ನಾಗಿ ಕಲಿಸುವ ವ್ಯವಸ್ಥೆ ಆಗಬೇಕು.ಕನ್ನಡದ ಶ್ರೀಮಂತ ಸಾಹಿತ್ಯವನ್ನು ಉರ್ದುಗೆ ತರುವ ಪ್ರಯತ್ನ ಮಾಡುವ ಯೋಜನೆ ಕುರಿತು ವಿವರಿಸಿದರು.ತಾಲ್ಲೂಕು ಕಸಾಪ ಅಧ್ಯಕ್ಷ ಆರ್. ರತ್ನಯ್ಯ ಸ್ವಾಗತಿಸಿದರು. ಶಿಕ್ಷಕ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್. ಶಿವಮೂರ್ತಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.