ಸೋಮವಾರ, ನವೆಂಬರ್ 18, 2019
23 °C

ಮುಕ್ತ ಚುನಾವಣೆಗೆ ಸಿದ್ಧತೆ

Published:
Updated:

ಕೊಪ್ಪಳ: ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಚುನಾವಣಾ ವೀಕ್ಷಕರಿಗೆ ಮನವರಿಕೆ ಮಾಡಿಕೊಟ್ಟರು.ಚುನಾವಣೆ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸಲು ಶುಕ್ರವಾರ ಇಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೀಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚಲು ಪ್ರತಿ 8-10 ಮತಗಟ್ಟೆಗಳಿಗೆ ಒಬ್ಬರಂತೆ ಒಟ್ಟು 109 ಸೆಕ್ಟರ್ ಅಧಿಕಾರಿಗಳನ್ನು ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 3 ತಂಡಗಳಂತೆ ಫ್ಲೈಯಿಂಗ್ ಸ್ಕ್ವ್ಯಾಡ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸಭೆಗೆ ವಿವರಿಸಿದರು.ಪ್ರತಿ ಫ್ಲೈಯಿಂಗ್ ಸ್ಕ್ವ್ಯಾಡ್ ತಂಡದಲ್ಲಿ ವಿಡಿಯೋ ಸರ್ವೆಲನ್ಸ್ ತಂಡ ಸಹ ಕಾರ್ಯನಿರ್ವಹಿಸಿ, ಅಕ್ರಮಗಳ  ವಿಡಿಯೋ ಚಿತ್ರೀಕರಣ ನಡೆಸಲಿದೆ. ಈ ವಿಡಿಯೋ ಚಿತ್ರಗಳನ್ನು ವೀಕ್ಷಿಸಿ ವರದಿ ಸಲ್ಲಿಸಲು ವಿಡಿಯೋ ವೀಕ್ಷಣಾ ತಂಡವನ್ನು ಸಹ ರಚಿಸಲಾಗಿದೆ.ಯಾವುದೇ ಕಾರಣಕ್ಕೂ ಮದ್ಯ ಹಾಗೂ ಹಣ ಹಂಚಿಕೆ ಪ್ರಕರಣಗಳು ನಡೆಯದಂತೆ ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಗಡಿ ಭಾಗಗಳಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಹಣ, ಮದ್ಯ ಹಾಗೂ ಇತರೆ ಸಾಮಗ್ರಿಗಳು ಬರುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಮೊಬೈಲ್ ಚೆಕ್‌ಪೋಸ್ಟ್ ಪ್ರಾರಂಭಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 62.87ರಷ್ಟು ಮತದಾನವಾಗಿತ್ತು. ಮತದಾನ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲೆಯಲ್ಲಿ ಮತದಾರರ ಜಾಗೃತಿಗಾಗಿ `ಸ್ವೀಪ್' ಕಾರ್ಯಕ್ರಮದಡಿ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಈ ಬಾರಿ ಮತದಾನದ ಪ್ರಮಾಣವನ್ನು ಶೇ 80ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಚುನಾವಣೆಗೆ ನೇಮಿಸಲಾಗಿರುವ ಅಧಿಕಾರಿಗಳಿಗೆ ಏ. 23ರಂದು ಮೊದಲ ಹಂತದ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಮಾತನಾಡಿ, ಚುನಾವಣೆ ಸಂದರ್ಭದಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಪ್ರಭಾತ್ ಶಂಕರ್, ಚುನಾವಣಾ ಪೊಲೀಸ್ ವೀಕ್ಷಕ ಎ. ಪಾರಿ, ಕೊಪ್ಪಳ ವಿಧಾನಸಭಾ ಚುನಾವಣಾ ವೀಕ್ಷಕಿ ನೀಲಂ ಗುಪ್ತಾ, ಕನಕಗಿರಿ ಕ್ಷೇತ್ರದ ಚುನಾವಣಾ ವೀಕ್ಷಕ ವಿ.ವಿ. ಶಾಜಿಮೋನ್, ಕುಷ್ಟಗಿ ಕ್ಷೇತ್ರ ಚುನಾವಣಾ ವೀಕ್ಷಕ ಎ.ಎಸ್.ಕೆ.ಸಿನ್ಹಾ, ಯಲಬುರ್ಗಾ ಕ್ಷೇತ್ರ ಚುನಾವಣಾ ವೀಕ್ಷಕ ಭರತ್‌ಲಾಲ್ ರಾಯ್, ಅಬಕಾರಿ ಡಿಸಿ ಆಬೀದ್ ಹುಸೇನ್, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಂಡುರಂಗ ಶೆಟ್ಟಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)