ಮುಕ್ತ ವಾಣಿಜ್ಯ ಒಪ್ಪಂದ ವಿಸ್ತರಣೆಗೆ ಒತ್ತಾಯ

ಬುಧವಾರ, ಜೂಲೈ 24, 2019
27 °C

ಮುಕ್ತ ವಾಣಿಜ್ಯ ಒಪ್ಪಂದ ವಿಸ್ತರಣೆಗೆ ಒತ್ತಾಯ

Published:
Updated:

ನಾಮ್ ಫೆನ್ಹ್ (ಪಿಟಿಐ): ಸೇವಾ ಕ್ಷೇತ್ರ, ಬಂಡವಾಳ ಹೂಡಿಕೆ, ಸಂಪರ್ಕ ಜಾಲಗಳ ವಿಸ್ತರಣೆಗೆ ಸಂಬಂಧಿಸಿದಂತೆ ತನ್ನೊಂದಿಗಿನ ಮುಕ್ತ ವಾಣಿಜ್ಯ ಒಪ್ಪಂದ ಪ್ರಕ್ರಿಯೆಯನ್ನು ಶೀಘ್ರವೇ ಆಖೈರುಗೊಳಿಸಲು 10 ದೇಶಗಳ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆಗೆ ಭಾರತವು ಸಂದೇಶ ರವಾನಿಸಿದೆ.`ಆಸಿಯಾನ್~ ರಾಷ್ಟ್ರಗಳ ಹಾಗೂ ಭಾರತದ ಸಚಿವರ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮಾತನಾಡಿ, `ಈ ವಲಯದಲ್ಲಿ ಖಾಸಗಿ ಸಹಭಾಗಿತ್ವವನ್ನು ಸದೃಢಗೊಳಿಸುವ ಅಗತ್ಯವಿದೆ; `ಆಸಿಯಾನ್~ ರಾಷ್ಟ್ರಗಳು ಹಾಗೂ ಭಾರತದ ನಡುವಿನ ಸಂಪರ್ಕಜಾಲ ಸುಧಾರಿಸುವ ದಿಸೆಯಲ್ಲಿ ವಿವಿಧ ರಾಷ್ಟ್ರಗಳ ಖಾಸಗಿ ಸಂಸ್ಥೆಗಳು- ಸರ್ಕಾರಗಳ ನಡುವೆ ಸಹಭಾಗಿತ್ವವನ್ನು ಉತ್ತೇಜಿಸಬೇಕಿದೆ~ ಎಂದು ಪ್ರತಿಪಾದಿಸಿದರು.`ಜಾಗತಿಕ ಆರ್ಥಿಕ ಹಿನ್ನಡೆಯ ಮಧ್ಯೆಯೂ ನಮ್ಮ ಸಹಭಾಗಿತ್ವವು ಜನರ ನಿರೀಕ್ಷೆಗಳಿಗೆ ಸ್ಪಂದಿಸುತ್ತಿದೆ. 2011-12ರಲ್ಲಿ ಆಸಿಯಾನ್- ಭಾರತದ ನಡುವೆ ಒಟ್ಟು 8000 ಕೋಟಿ ಡಾಲರ್ ವಹಿವಾಟು ನಡೆದಿದೆ. ಅಭಿವೃದ್ಧಿಯ ಮೇಲೆ ಗುರಿ ನೆಟ್ಟಿರುವ ನಾವು ಪೂರ್ವ ರಾಷ್ಟ್ರಗಳೊಂದಿಗಿನ ವಾಣಿಜ್ಯ ಬಾಂಧವ್ಯಕ್ಕೆ ಆದ್ಯತೆ ನೀಡಿದ್ದೇವೆ. ಜಾಗತಿಕ ಆರ್ಥಿಕ ಬೆಳವಣಿಗೆಗೆ ಇದು ಎಂಜಿನ್ ಎಂದು ಭಾವಿಸಿದ್ದೇವೆ~ ಎಂದು ಕೃಷ್ಣ ಒತ್ತಿ ಹೇಳಿದರು.ಮುಂಬರುವ ದಿನಗಳಲ್ಲಿ ಆಸಿಯಾನ್ ಹಾಗೂ ಭಾರತದ ನಡುವೆ ಭೌಗೋಳಿಕವಾಗಿ, ಸಾಂಸ್ಥಿಕ ಮಟ್ಟದಲ್ಲಿ ಹಾಗೂ ಪರಸ್ಪರ ಜನರ ನಡುವೆ ಸಂಪರ್ಕ ವೃದ್ಧಿಗೊಳಿಸಲು ಗಮನ ನೀಡಬೇಕಿದೆ. ಹಾಗೆಯೇ, ಇ-ಸಂಪರ್ಕ, ಬಾಹ್ಯಾಕಾಶ ತಂತ್ರಜ್ಞಾನ, ಕೃಷಿ, ಇಂಧನ, ಪರಿಸರ ಮತ್ತು ಜೈವಿಕ ವೈವಿಧ್ಯ ಕ್ಷೇತ್ರಗಳಲ್ಲಿಯೂ ಸಹಕಾರ ಗಟ್ಟಿಯಾಗಬೇಕಿದೆ ಎಂದು  ಅಭಿಪ್ರಾಯಪಟ್ಟರು.ಭಾರತ- ಆಸಿಯಾನ್ ರಾಷ್ಟ್ರಗಳ ನಡುವೆ ಚಾರಿತ್ರಿಕ ಬಾಂಧವ್ಯ ಬಲು ಹಿಂದಿನಿಂದಲೂ ಇದೆ. ಅದನ್ನು ಈಗ ರಸ್ತೆ, ಸಾಗರ, ರೈಲು, ಡಿಜಿಟಲ್, ಪರಸ್ಪರ ಜನರ ಮಟ್ಟಕ್ಕೆ ಕೊಂಡೊಯ್ಯಬೇಕಿದೆ. ಸಂಘಟಿತ ಪ್ರಗತಿಗೆ ಇದು ಪೂರಕ ಎಂದರು.ಇದಕ್ಕೆ ಪೂರಕವಾಗಿ, ಭಾರತದಿಂದ ಮ್ಯಾನ್ಮಾರ್, ಲಾವೋಸ್ ಮೂಲಕ ವಿಯೆಟ್ನಾಂಗೆ ರಸ್ತೆ ಸಂಪರ್ಕ ಕಲ್ಪಿಸುವ ಕುರಿತು ಕಳೆದ ವಾರ ಚರ್ಚೆ ನಡೆದಿರುವುದನ್ನು ಕೂಡ ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಮುಕ್ತ ವಾಣಿಜ್ಯ ಒಪ್ಪಂದ ಪ್ರಕ್ರಿಯೆ ಮುಗಿಸುವ ಸಂಬಂಧ ಭಾರತ ನೀಡಿದ ಕರೆಗೆ ವಿಯೆಟ್ನಾಂ, ಸಿಂಗಪುರ ಸೇರಿದಂತೆ ಹಲವು ಆಗ್ನೇಯ ಏಷ್ಯಾ ರಾಷ್ಟ್ರಗಳು  ಸಹಮತ ವ್ಯಕ್ತಪಡಿಸಿದವು.`ಆಸಿಯಾನ್~- ಭಾರತದ ನಡುವೆ ಸರಕು ವಹಿವಾಟಿಗೆ ಸಂಬಂಧಿಸಿದಂತೆ  ಮುಕ್ತ ವಾಣಿಜ್ಯ ಒಪ್ಪಂದ 2011ರ ಜನವರಿ 1ರಿಂದ ಜಾರಿಯಲ್ಲಿದೆ. ಇದೀಗ ಅದನ್ನು ಸೇವಾ ಕ್ಷೇತ್ರ ಮತ್ತು ಬಂಡವಾಳ ಹೂಡಿಕೆಗೂ ವಿಸ್ತರಿಸುವ ಪ್ರಯತ್ನ ನಡೆದಿದೆ.

 

ಭಾರತಕ್ಕೆ ಯುರೇನಿಯಂ:ಆಸ್ಪ್ರೇಲಿಯಾ ಉತ್ಸುಕ

ಭಾರತಕ್ಕೆ ಯುರೇನಿಯಂ ಸರಬರಾಜನ್ನು ಸ್ಥಗಿತಗೊಳಿಸಿದ್ದ ಆಸ್ಟ್ರೇಲಿಯಾವು, ಇದೀಗ ಅದನ್ನು ರಫ್ತು ಮಾಡುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಆಂತರಿಕವಾಗಿ ಮಾಡಿಕೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿದೆ.

ನಾಮ್ ಫೆನ್ಹ್‌ನಲ್ಲಿ ನಡೆಯುತ್ತಿರುವ `ಆಸಿಯಾನ್~ ಸಭೆಯ ಸಂದರ್ಭದಲ್ಲಿ, ಆಸ್ಪ್ರೇಲಿಯಾದ ವಿದೇಶಾಂಗ ಸಚಿವ ಬಾಬ್ ಕ್ಯಾರ್ ಅವರು ಎಸ್. ಎಂ.ಕೃಷ್ಣ ಜತೆ ನಡೆಸಿದ ಮಾತುಕತೆ ವೇಳೆ ಈ ವಿಷಯ ತಿಳಿಸಿದ್ದಾರೆ.ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗ್ಲ್ಲಿಲಾರ್ಡ್ ವರ್ಷಾಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಸೇರಿದಂತೆ ಹಲವು ದ್ವಿಪಕ್ಷೀಯ ಸಂಗತಿಗಳ ಕುರಿತು ಈ ಇಬ್ಬರ ನಡುವೆ ಮಾತುಕತೆ ನಡೆಯಿತು ಎಂದು ವಿದೇಶಾಂಗ  ಇಲಾಖೆ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಬಾಬ್ ಕ್ಯಾರ್ ಕೂಡ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಕಂಡುಬಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry