ಮುಕ್ತ ವ್ಯಾಪಾರ: ಪಾಕ್ ಹಿಂದೇಟು

7

ಮುಕ್ತ ವ್ಯಾಪಾರ: ಪಾಕ್ ಹಿಂದೇಟು

Published:
Updated:

ಇಸ್ಲಾಮಾಬಾದ್ (ಪಿಟಿಐ): ಭಾರತದ ಜತೆಗಿನ ವಾಣಿಜ್ಯ ವಹಿವಾಟನ್ನು ಸಹಜ ಸ್ಥಿತಿಗೆ ತರಲು ಎದುರಾಗಿರುವ ಅಡಚಣೆಗಳನ್ನು ನಿವಾರಿಸಲು ಪಾಕಿಸ್ತಾನ ಸರ್ಕಾರ ಮನಸ್ಸು ಮಾಡದಿರುವುದು, ಇಲ್ಲಿಗೆ ಭೇಟಿ ನೀಡಿರುವ ಉದ್ಯಮಿಗಳ ನಿಯೋಗಕ್ಕೆ ನಿರಾಶೆ ಉಂಟು ಮಾಡಿದೆ.ಭಾರತಕ್ಕೆ `ಪರಮಾಪ್ತ ಸ್ಥಾನಮಾನ~ ನೀಡುವ ಪ್ರಕ್ರಿಯೆಗೆ ಚಾಲನೆ ನೀಡುವುದನ್ನೂ ಪಾಕಿಸ್ತಾನದ ಸಚಿವ ಸಂಪುಟವು ಮುಂದೂಡಿದೆ.ವಾಣಿಜ್ಯ ಬಾಂಧವ್ಯ ವೃದ್ಧಿಸಲು ಸರಕು - ಸೇವೆಗಳ `ನಕಾರಾತ್ಮಕ ಪಟ್ಟಿ~ ವ್ಯವಸ್ಥೆಗೆ ಬದಲಾಗುವುದನ್ನು ಸಂಪುಟವು ಮುಂದೂಡಿದೆ. ವಾಣಿಜ್ಯ ಸಚಿವಾಲಯವು ಸಿದ್ಧಪಡಿಸಿದ್ದ `ನಕಾರಾತ್ಮಕ ಪಟ್ಟಿ~ ಅಂತಿಮಗೊಳಿಸುವುದನ್ನು ಸದ್ಯಕ್ಕೆ ಕೈಬಿಡಲಾಗಿದೆ. ಸಂಬಂಧಿಸಿದ ಸಚಿವಾಲಯಗಳು ಮತ್ತು ಉದ್ದಿಮೆ ಪ್ರತಿನಿಧಿಗಳು ಸಭೆಯಲ್ಲಿ ಇಲ್ಲದ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಜವಳಿ ಮತ್ತು ಆಂತರಿಕ ವ್ಯವಹಾರ ಸಚಿವಾಲಯಗಳು ಆಕ್ಷೇಪ ಸಲ್ಲಿಸಿವೆ. ಮುಕ್ತ ವ್ಯಾಪಾರ ಆರಂಭಿಸುವ ಬಗ್ಗೆ ಇನ್ನಷ್ಟು ಸಂಗತಿಗಳನ್ನು ವಿವರವಾಗಿ ಚರ್ಚಿಸಬೇಕಾಗಿರುವುದರಿಂದ ಪ್ರಧಾನಿ ಯುಸೂಫ್ ರಜಾ ಗಿಲಾನಿ ಅವರು ನಿರ್ಧಾರ ಮುಂದೂಡಿದರು.`ನಕಾರಾತ್ಮಕ ಪಟ್ಟಿ~ ಅಂತಿಮಗೊಳಿಸುವ ಮುನ್ನ, ಈ ವಿಷಯಕ್ಕೆ ಸಂಬಂಧಿಸಿದ ಎಲ್ಲರ ಅಭಿಪ್ರಾಯ ಪಡೆಯಲು ಗಿಲಾನಿ ಅವರು ವಾಣಿಜ್ಯ ಸಚಿವಾಲಯಕ್ಕೆ ಸೂಚಿಸಿದ್ದಾರೆ.ಆನಂದ ಶರ್ಮಾ ನಿರಾಶೆ: ವಾಣಿಜ್ಯ ಬಾಂಧವ್ಯ ವೃದ್ಧಿಗೆ ಅಡ್ಡಿಯಾಗಿದ್ದ ಅಡಚಣೆಗಳನ್ನು ನಿವಾರಿಸಲು ಪಾಕಿಸ್ತಾನವು ಹಿಂದೇಟು ಹಾಕಿರುವುದನ್ನು ಕಂಡು ತಮಗೆ ನಿರಾಶೆಯಾಗಿದೆ ಎಂದು ವಾಣಿಜ್ಯ ಸಚಿವ ಆನಂದ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.ಎಲ್ಲ ದೇಶಗಳಲ್ಲಿ ರಾಜಕೀಯ ಆಕ್ಷೇಪಗಳು ಇದ್ದೇ ಇರುತ್ತವೆ. ಅವುಗಳನ್ನು ಮೊದಲು ಬಗೆಹರಿಸಿಕೊಳ್ಳಬೇಕು. ದ್ವಿಪಕ್ಷೀಯ ವಾಣಿಜ್ಯ ಬಾಂಧವ್ಯ ವೃದ್ಧಿಸಲು ರಾಜಕೀಯ ಇಚ್ಛಾಶಕ್ತಿ ಇರಬೇಕು ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷ ಬಿ. ಮುತ್ತುರಾಮನ್ ಪ್ರತಿಕ್ರಿಯಿಸಿದ್ದಾರೆ.

 

ಪೂರಕ ಕ್ರಮ: ಶರ್ಮಾ ನಿರೀಕ್ಷೆ
ವಾಣಿಜ್ಯ ಬಾಂಧವ್ಯ ವೃದ್ಧಿಸಲು ಭಾರತ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಅದಕ್ಕೆ ಪೂರಕವಾಗಿ ಪಾಕಿಸ್ತಾನವೂ ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದೆ  ಎಂದು ಆನಂದ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.ವಾಣಿಜ್ಯ ವಹಿವಾಟಿನಲ್ಲಿ ಭಾರತಕ್ಕೆ `ಪರಮಾಪ್ತ ದೇಶ~ದ ಸ್ಥಾನಮಾನ ನೀಡುವ ಪ್ರಕ್ರಿಯೆಗೆ ಪಾಕಿಸ್ತಾನವು ಚಾಲನೆ ನೀಡದ ನಿರ್ಧಾರಕ್ಕೆ ಬಂದ ಮರುದಿನ, ಭಾರತ ಈ ಪ್ರತಿಕ್ರಿಯೆ ನೀಡಿದೆ.ಉಭಯ ದೇಶಗಳ ವಾಣಿಜ್ಯ ಬಾಂಧವ್ಯ ವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪೂರ್ವಭಾವಿಯಾಗಿ ಸಾಕಷ್ಟು ಸಲ ಚರ್ಚಿಸಲಾಗಿದೆ.

 

ಈಗ ಪಾಕಿಸ್ತಾನವು ಪೂರಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ. ದ್ವಿಪಕ್ಷೀಯ ಬಾಂಧವ್ಯಕ್ಕೆ ಅಗತ್ಯವಾದ ಎಲ್ಲ ವಿಷಯಗಳನ್ನು ಚರ್ಚಿಸಲು ಭಾರತ ಬದ್ಧವಾಗಿದೆ ಎಂದು ಶರ್ಮಾ ಹೇಳಿದ್ದಾರೆ.ಪಾಕಿಸ್ತಾನದ ವಾಣಿಜ್ಯ ನಗರಗಳಾದ ಲಾಹೋರ್ ಮತ್ತು ಕರಾಚಿಗಳ ಉದ್ದಿಮೆದಾರರ ಜತೆ ಚರ್ಚೆ ನಡೆಸಿದ ನಂತರ ಇಸ್ಲಾಮಾಬಾದ್‌ಗೆ ಭೇಟಿ ನೀಡಿರುವ ಶರ್ಮಾ, ಬುಧವಾರ ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry