ಸೋಮವಾರ, ಏಪ್ರಿಲ್ 12, 2021
24 °C

ಮುಖ್ತರ್ ಮಾಯಿ ಪ್ರಕರಣ : ಐವರು ಖುಲಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ) : ಪಾಕಿಸ್ತಾನದಲ್ಲಿ ಮಹಿಳಾ ಪರ ಚಳವಳಿಯ ನಾಯಕಿಯಾಗಿದ್ದ ಮುಖ್ತಾರ್ ಮಾಯಿ ಅವರ ಮೇಲೆ ಆತ್ಯಾಚಾರವೆಸಗಿದ್ದ ಆರು ಮಂದಿ ಆರೋಪಿಗಳಲ್ಲಿ ಐವರು ತಪ್ಪಿತಸ್ಥರಲ್ಲ ಎಂದು ಹೈಕೋರ್ಟ್ ನೀಡಿದ್ದ ತೀರ್ಪನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್ ಗುರುವಾರ ಎತ್ತಿಹಿಡಿದಿದೆ.ನ್ಯಾಯಾಧೀಶ ಶಕಿರುಲ್ಲಾ ಜಾನ್ ಒಬ್ಬನಿಗೆ ಮಾತ್ರ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದಾರೆ. ಕಳೆದ 2002 ರಲ್ಲಿ ಬುಡಕಟ್ಟು ಪ್ರದೇಶದಲ್ಲಿ ಮುಖ್ತರ್ ಮಾಯಿ ಸಾಮೂಹಿಕ ಆತ್ಯಾಚಾರಕ್ಕೆ ಒಳಗಾಗಿದ್ದರು.

 

ತೀರ್ಪಿನ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿರುವ ಮುಖ್ತರ್ ಮಾಯಿ ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಡುವಂತಿಲ್ಲ ಎಂದಿದ್ದಾರೆ. ಕಳೆದ 5 ವರ್ಷಗಳಲ್ಲಿ ತಾವು ಬಹಳಷ್ಟು ನೊಂದಿದ್ದು, ಈಗ ಏನನ್ನು ಹೇಳಲಾರೆ, ತಮ್ಮ ವಕೀಲರೊಂದಿಗೆ ಚರ್ಚಿಸುವೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇಲ್ಲ ಆದರೆ, ದೇವರ ನ್ಯಾಯಾಲಯದಲ್ಲಿ ನಂಬಿಕೆ ಇದೆ ಎಂದು ಮಾದ್ಯಮಗಳಿಗೆ ತಿಳಿಸಿದ್ದಾರೆ.

2002 ರಲ್ಲಿ ಎಫ್ಐಆರ್ ದಾಖಲಿಸುವ ವೇಳೆ ನಾನು ಅನಕ್ಷರಸ್ಥಳಾಗಿದ್ದೆ, ಅದನ್ನೇ ಕೋರ್ಟ್ ಮುಂದಿಟ್ಟುಕೊಂಡು ಆರೋಪಿಗಳನ್ನು ಬಿಡುಗಡೆ ಮಾಡುತ್ತಿದೆ. ಇದು ಜೀವ ಭಯಕ್ಕೆ ಕಾರಣವಾಗಿದೆ ಎಂದು ಮಾಯಿ ಆತಂಕ ವ್ಯಕ್ತಪಡಿಸಿದ್ದಾರೆ. ನನ್ನದೇನು ತಪ್ಪು, ಕೋರ್ಟ್ ನನ್ನನ್ನು ಶಿಕ್ಷಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಸರ್ಕಾರೇತರ ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದು, ಪಾಕಿಸ್ತಾನದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲ ಎಂಬುದನ್ನು ಈ ತೀರ್ಪು ತೋರಿಸುತ್ತದೆ ಎಂದು ಸಂಘಸಂಸ್ಥೆಗಳು ಹೇಳಿವೆ.ತನ್ನ ಮೇಲೆ ನಡೆದ ದೌರ್ಜನ್ಯಕ್ಕೆ ಕೆಳ ಹಂತದ ನ್ಯಾಯಾಲಯಗಳು ನೀಡಿದ ಪರಿಹಾರದ ಹಣದಲ್ಲಿ ಮಾಯಿ ತನ್ನ ಹಳ್ಳಿಯಲ್ಲಿ ಮೊದಲ ಬಾಲಕಿಯರ ಶಾಲೆಯನ್ನು ತೆರೆದಿದ್ದು, ಮುಖ್ತಾರ್ ಮಾಯಿ ಮಹಿಳೆಯರ ಕಲ್ಯಾಣ ಸಂಸ್ಥೆಯನ್ನು ಸ್ಥಾಪಿಸಿ, ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.