ಬುಧವಾರ, ಜೂನ್ 16, 2021
27 °C

ಮುಖ್ಯಕೊಳವೆಗೆ ಧಕ್ಕೆ ಕೃಷ್ಣಾ ನೀರು ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಪಟ್ಟಣಕ್ಕೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯಕೊಳವೆ ಪದೇಪದೇ ಒಡೆಯುತ್ತಿರುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕಳೆದ ಮೂರು ದಿನಗಳಿಂದಲೂ ಪೈಪ್ ದುರಸ್ತಿಯಲ್ಲಿ ತೊಡಗಿರುವ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಜಿನಿಯರ್‌ರು ಶುಕ್ರವಾರ ದುರಸ್ತಿಕಾರ್ಯ ಮುಗಿದು ನೀರು ಸರಬರಾಜು ಕೆಲಸ ಪುನರಾಂಭಗೊಳ್ಳಲಿದೆ ಎಂದು ಸಹಾಯಕ ಎಂಜಿನಿಯರ್ ತಿಮ್ಮಪ್ಪ ತಿಳಿಸಿದ್ದಾರೆ.ಕೆಲ ದಿನಗಳ ಹಿಂದೆ ಕ್ಯಾದಿಗುಪ್ಪಾ ಬಳಿ ಒಡೆದಿದ್ದ ಇದೇ ಮುಖ್ಯಕೊಳವೆಯನ್ನು ಬುಧವಾರ ಸರಿಪಡಿಸಲಾಗಿತ್ತು. ಅದೇ ದಿನ ರಾತ್ರಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಲ್ಲಿ ತೊಡಗಿರುವ ಓರಿಯಂಟಲ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿಯು ರಸ್ತೆ ಬದಿ ಜೆಸಿಬಿ ಯಂತ್ರದಿಂದ ನೆಲ ಬಗೆಯುವಾಗ ಮುಖ್ಯಕೊಳವೆ ಹಾಳಾಗಿದೆ. ಗುರುವಾರ ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿದ ಕೆಯುಡಬ್ಲೂಎಸ್ ಎಂಜಿನಿಯರ್‌ರು ದುರಸ್ತಿ ಕೆಲಸದಲ್ಲಿ ತೊಡಗಿದ್ದರು.ಪುರಸಭೆ ಸದಸ್ಯರಾದ ಅಮೀನುದ್ದೀನ ಮುಲ್ಲಾ, ಶಿವಶಂಕರ ಹೊಸೂರು ಪ್ರಮುಖರಾದ ದೇವೇಂದ್ರಪ್ಪ ಬಡಿಗೇರ ಇತರರು ಸ್ಥಳದಲ್ಲಿದ್ದು ದುರಸ್ತಿ ಕೆಲಸದ ಉಸ್ತುವಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅಮೀನುದ್ದೀನ ಮುಲ್ಲಾ, ಬೇಸಿಗೆ ಸಮಯದಲ್ಲೇ ಈ ರೀತಿ ಪೈಪ್ ಒಡೆದು ನೀರು ಪೂರೈಕೆಯಲ್ಲಿ ತೊಂದರೆ ಎದುರಾಗಿದೆ, ನಾಳೆ ಎಲ್ಲಿ ಒಡೆಯುತ್ತದೆಯೊ ಎಂಬ ಆತಂಕ ಎದುರಾಗಿದೆ.ಏನೇ ಆದರೂ ಪುರಸಭೆ ನೀರು ಸರಬರಾಜು ವಿಷಯದಲ್ಲಿ ಮುತುವರ್ಜಿ ವಹಿಸಿದ್ದು ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಿದೆ ಎಂದರು.ನೋಟಿಸ್: ರಸ್ತೆ ಬದಿ ನೆಲ ಬಗೆಯುವ ವಿಷಯವನ್ನು ಗಮನಕ್ಕೆ ತಂದಿದ್ದರೆ ಪೈಪ್ ಒಡೆಯುತ್ತಿರಲಿಲ್ಲ, ದುರಸ್ತಿಗೆ ಅಂದಾಜು ರೂ 20 ಸಾವಿರ ಖರ್ಚಾಗಲಿದೆ, ಸದ್ಯ ನೀರು ಸರಬರಾಜು ಮಂಡಳಿಯೇ ಕೆಲಸ ನಿರ್ವಹಿಸುತ್ತಿದ್ದು ಸತತ ನಿಗಾವಹಿಸಿದೆ ಎಂದು ಎಂಜಿನಿಯರ್ ತಿಮ್ಮಪ್ಪ ವಿವರಿಸಿದರು.

 

ಅಲ್ಲದೇ ಹೇಳದೇ ಕೇಳದೇ ಈ ರೀತಿ ಮನಬಂದಂತೆ ಯಂತ್ರಗಳಿಂದ ಕೆಲಸ ನಡೆಸಿರುವ ಓರಿಯಂಟಲ್ ಕಂಪೆನಿಗೆ ನೋಟಿಸ್ ನೀಡಲಾಗುತ್ತದೆ ಎಂದು ಹೇಳಿದರು. ಇನ್ನೊಬ್ಬ ಎಂಜಿನಿಯರ್ ಎಚ್.ಡಿ.ಹೂಲಗೇರಿ ಮತ್ತು ಸಿಬ್ಬಂದಿ  ಸ್ಥಳದಲ್ಲಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.