ಮುಖ್ಯನಾಲೆ: ದುರಸ್ತಿ ಬಿರುಸು
ಕಾರಟಗಿ: ತುಂಗಭದ್ರಾ ಎಡದಂಡೆ ಮುಖ್ಯನಾಲೆಯ ಮೈಲ್ 41ರ ಬಳಿ ನೀರು ಹೊರಕ್ಕೆ ಬರುತ್ತಿದ್ದ ನಾಲೆಯ ಬಲ ಭಾಗದಲ್ಲಿ ಭಾರಿ ಯಂತ್ರಗಳ ಸಹಾಯದಿಂದ ದುರಸ್ತಿ ಕಾರ್ಯ ಭರದಿಂದ ನಡೆದಿರುವುದು ಮಂಗಳವಾರ ಕಂಡುಬಂತು.
ನಾಲೆಗೆ 1500 ಕ್ಯೂಸೆಕ್ಸ್ ನೀರು ಕಡಿಮೆ ಮಾಡಲಾಗಿದ್ದು, 750 ಕ್ಯೂಸೆಕ್ಸ್ ನೀರನ್ನು ಮೇಲ್ಬಾಗದಲ್ಲಿಯ ಕಾಲುವೆಗಳಿಗೆ ಹೆಚ್ಚುವರಿಯಾಗಿ ಬಿಟ್ಟು ದುರಸ್ತಿ ಕಾರ್ಯ ಆರಂಭಿಸಲಾಗಿದೆ.ನಾಲೆ ಸೋರಿಕೆಗೆ ಕಾರಣವಾಗಿರುವ ರಂಧ್ರ ಪತ್ತೆಯಾಗಿದೆ. ಅಕ್ವಡೆಕ್ಟ್ ಹಾಗೂ ನಾಲೆಯ ಕಾಂಕ್ರೀಟ್ ಭಾಗದ ಮಧ್ಯೆಯ ಜೋಡಣೆಯಲ್ಲಿ ಸೋರಿಕೆಯೂ ಇದೆ. ಇದರ ದುರಸ್ತಿಯನ್ನೂ ಮಾಡಲಾಗುವುದು.
ದುರಸ್ತಿ ಕಾರ್ಯ ನಿರಂತರವಾಗಿ ನಡೆದು, ರಾತ್ರಿಯೇ ಮುಗಿಸುವುದಾಗಿ ಸ್ಥಳದಲ್ಲೆ ಬಿಡಾರ ಹೂಡಿರುವ ಚೀಫ್ ಎಂಜಿನಿಯರ್ ಮಲ್ಲಿಕಾರ್ಜುನ ಗುಂಗೆ ತಿಳಿಸಿದರು.ನೀರು ಸೋರಿಕೆಯಾಗಿರುವ ಸ್ಥಳದಲ್ಲಿ 18 ಅಡಿ ಆಳ, 30 ಮೀಟರ್ ಉದ್ದದಲ್ಲಿ ಮೊದಲ ಮಣ್ಣನ್ನು ತಗೆದು ಕರಿ ಮಣ್ಣನ್ನು ನೀರಿನೊಂದಿಗೆ ಹಾಕಿ ಗಟ್ಟಿಗೊಳಿಸಲಾಗುವುದು.
ಜೊತೆಗೆ ಕೆಂಪು ಮಣ್ಣನ್ನು ಹಾಕಿ ಭದ್ರಪಡಿಸುವ ಕೇಸಿಂಗ್ ವರ್ಕ್ ಮಾಡಲಾಗುವುದು ಎಂದು ಅವರು ವಿವರಿಸಿದರು.ಇನ್ನೊಂದು ಕಡೆಯ ರಂಧ್ರದ ಪ್ರಮಾಣ ಕಡಿಮೆ ಇದ್ದು, ಇನ್ನೊಂದು ಯಂತ್ರ ತರಿಸಿ, ದುರಸ್ತಿಯನ್ನು ಸಮರೋಪಾಧಿಯಲ್ಲಿ ಮಾಡಲಾಗುವುದು. ಬುಧವಾರದ ಸಂಜೆಯೊಳಗೆ ದುರಸ್ತಿ ಮುಗಿಸಿ, ನಾಲೆಯಲ್ಲಿ ಪೂರ್ಣ ಪ್ರಮಾಣದ ನೀರು ಹರಿಯುವಿಕೆಗೆ ಅನುಕೂಲ ಮಾಡುವುದಾಗಿ ಅವರು ತಿಳಿಸಿದರು.
ಭಾನುವಾರ ಮೈಲ್ 41ರ ಬಳಿ ನೀರು ಹೊರಕ್ಕೆ ಸೋರಿಕೆಯಾಗುವುದು ಕಂಡುಬಂದಿದ್ದು, ಸ್ಥಳಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು, ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಸಾವಿರಾರು ರೈತರು ಇಂದಿನವರೆಗೆ ಭೇಟಿ ನೀಡುತ್ತಿದ್ದಾರೆ. ಮಂಗಳವಾರ ದುರಸ್ತಿ ಕಾರ್ಯ ಆರಂಭವಾಗಿದೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿಯ ಚೀಫ್ ಎಂಜನೀಯರ್ ಮಲ್ಲಿಕಾರ್ಜುನ ಗುಂಗೆ, ಸೂಪರಿಂಡೆಂಟ್ ಎಂಜನೀಯರ್ ಮಂಜಪ್ಪ, ಕಾರ್ಯಪಾಲಕ ಎಂಜಿನಿಯರ್ ನಾಗಭೂಷಣ, ಸಹಾಯಕ ಕಾರ್ಯಪಾಲಕ ಎಂಜಿನೀಯರ್ ಸೂಗಪ್ಪ, ಅಧಿಕಾರಿಗಳಾದ ವಿಜಯಕುಮಾರ, ನಾಗಪ್ಪ, ಶಿವಮೂರ್ತಿ, ಬಸವರಾಜ್ ಮೊದಲಾದವರು ದುರಸ್ತಿ ಕಾರ್ಯ ನಡೆಯುವಲ್ಲಿಯೆ ಉಪಸ್ಥಿತರಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.