ಮಂಗಳವಾರ, ಜೂನ್ 15, 2021
26 °C

ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ: ರಾವತ್ ಬಂಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಸಂಸದ ವಿಜಯ್ ಬಹುಗುಣ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಕೇಂದ್ರ ಸಚಿವ ಹರೀಶ್ ರಾವತ್ ಮತ್ತು ಅವರ ಬೆಂಬಲಿಗರಾದ ಹೆಚ್ಚಿನ ಸಂಖ್ಯೆ ಶಾಸಕರು ಸಮಾರಂಭವನ್ನು ಬಹಿಷ್ಕರಿಸಿದ್ದರು.

ಇದಕ್ಕೆ ಕೆಲವು ಸಂಸದರು ಮತ್ತು ರಾಜ್ಯ ಕಾಂಗ್ರೆಸ್‌ನ ಪ್ರಮುಖರ ಒತ್ತಾಸೆಯೂ ಇತ್ತು. ಇದರಿಂದಾಗಿ ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲವೇನೋ ಎಂಬ ಅನುಮಾನ ವ್ಯಕ್ತವಾಗಿದ್ದು ವಿಶ್ವಾಸ ಮತ ಯಾಚನೆ ವೇಳೆ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.

ಇಲ್ಲಿನ ಪರೇಡ್ ಗ್ರೌಂಡ್‌ನಲ್ಲಿ ಸಂಜೆ ನಡೆದ ಸರಳ ಸಮಾರಂಭದಲ್ಲಿ ಬಹುಗುಣ ಅವರೊಬ್ಬರೇ ಅಧಿಕಾರ ಮತ್ತು ಗೋಪ್ಯತೆ  ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲರಾದ ಮಾರ್ಗರೆಟ್ ಆಳ್ವ ಪ್ರಮಾಣ ವಚನ ಬೋಧಿಸಿದರು. ಕಾಂಗ್ರೆಸ್‌ನ 32 ಶಾಸಕರ ಪೈಕಿ ಕೇವಲ 11 ಮತ್ತು ಮೂವರು ಸ್ವತಂತ್ರ ಶಾಸಕರು ಮಾತ್ರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಮುಖ್ಯಮಂತ್ರಿ ಸ್ಥಾನ ನೀಡದೇ ಇರುವ ಕಾರಣ ಬೇಸತ್ತು ರಾವತ್ ಅವರು ಕೇಂದ್ರ ಕೃಷಿ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ರವಾನಿಸಿದ್ದಾರೆ ಎಂದು ಅವರ ಬೆಂಬಲಿಗರು ನವದೆಹಲಿಯಲ್ಲಿ ಹೇಳಿದ್ದಾರೆ.  ಆದರೆ ರಾವತ್ ಸ್ವತಃ ಇದನ್ನು ದೃಢಪಡಿಸಿಯೂ ಇಲ್ಲ, ನಿರಾಕರಿಸಿಯೂ ಇಲ್ಲ.

ಬೆಂಬಲಿಗರೊಂದಿಗೆ ಸಭೆ: ಅತ್ತ ಬಹುಗುಣ ಪ್ರಮಾಣ ವಚನ ಸ್ವೀಕರಿಸುತ್ತಿರುವಾಗ ಇತ್ತ ನವದೆಹಲಿಯಲ್ಲಿ ರಾವತ್ ಅವರು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚಿಸಿದರು.

`ಬಹುಗುಣ ಅವರು ಪ್ರಮಾಣ ವಚನ ಸ್ವೀಕರಿಸಿದರೂ ಅವರನ್ನು ನಮ್ಮ ನಾಯಕರೆಂದು ಒಪ್ಪಿಕೊಳ್ಳುವುದಿಲ್ಲ. ಚುನಾವಣೆಯಲ್ಲಿ ಅವರು ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ~ ಎಂದು ರಾವತ್ ಆಪ್ತ ಮತ್ತು ಸಂಸದ ಪ್ರದೀಪ್ ತಮ್ಟ ಹೇಳಿದರು.

ರಾವತ್ ಬೆಂಬಲಿಗರು ವಿಶ್ವಾಸ ಮತ ಯಾಚನೆ ವೇಳೆ ಯಾವ ತಂತ್ರ ಅನುಸರಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ತಮ್ಟ, ಸೂಕ್ತ ಸಮಯದಲ್ಲಿ ಇದನ್ನು ಬಹಿರಂಗಪಡಿಸುವುದಾಗಿ ಹೇಳಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೊಂದಿಗೆ ರಾವತ್ ಮಾತುಕತೆ ನಡೆಸಿದ್ದಾರೆ ಎಂಬ ವರದಿಯನ್ನು ಅವರು ನಿರಾಕರಿಸಿದರು.

ಪಕ್ಷದಲ್ಲಿ ಉಲ್ಬಣಗೊಂಡಿರುವ ಭಿನ್ನಮತದ ಬಗ್ಗೆ ಕಾಂಗ್ರೆಸ್ ಜಾಣತನದಿಂದ ಪ್ರತಿಕ್ರಿಯಿಸಿದ್ದು, ನಾಯಕತ್ವ ಎಂದರೆ ವೈಯಕ್ತಿಕ ಭಾವನೆಗಳನ್ನು ಮೀರಬೇಕಾಗುತ್ತದೆ ಎಂದು ಪಕ್ಷದ ವಕ್ತಾರ ಮನೀಶ್ ತಿವಾರಿ ಹೇಳಿದ್ದಾರೆ.

ನೂತನ ಮುಖ್ಯಮಂತ್ರಿ ಬಹುಗುಣ ಅವರ ಸರ್ಕಾರ ಭವಿಷ್ಯ ಬಹಳ ನಿರಾಶಾದಾಯಕವಾದ್ದು, ಬಹು ಕಾಲ ಬಾಳದು ಎಂದು ರುದ್ರಪ್ರಯಾಗ್‌ನ ಕಾಂಗ್ರೆಸ್ ಶಾಸಕ ಮತ್ತು ರಾವತ್ ಆಪ್ತ ಹರಕ್ ಸಿಂಗ್ ಹೇಳಿದ್ದಾರೆ.

ಬಹುಗುಣ ಅವರು ಹಿರಿಯ ಕಾಂಗ್ರೆಸ್ಸಿಗರಾಗಿದ್ದ ದಿವಂಗತ ಹೇಮವತಿ ನಂದನ್ ಬಹುಗುಣ ಅವರ ಪುತ್ರ. ರೀಟಾ ಬಹುಗುಣ ಜೋಶಿ ಅವರ ಸೋದರ. 65 ವರ್ಷದ ಬಹುಗುಣ ಅವರು ತೆಹ್ರಿ ಗಡವಾಲ್ ಕ್ಷೇತ್ರದ ಸಂಸದರಾಗಿದ್ದಾರೆ.

ಮುಖ್ಯಮಂತ್ರಿ ಗಾದಿಯ ಪ್ರಮುಖ ಆಕಾಂಕ್ಷಿ ಹರೀಶ್ ರಾವತ್ ಅವರು ಬಿಜೆಪಿಯೊಂದಿಗೆ ಕೈಜೋಡಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು, `ಅವರು ಕಾಂಗ್ರೆಸ್ಸಿಗರು. ಕೋಮುವಾದಿ ಶಕ್ತಿಗಳೊಂದಿಗೆ ಹೋಗುವುದಿಲ್ಲ~ ಎಂದರು.

ಇದು ಪಕ್ಷದ ಆಂತರಿಕ ವಿಷಯ. ಮಾತುಕತೆ ಮೂಲಕ ಈ ಸಮಸ್ಯೆಯನ್ನು ಹೈಕಮಾಂಡ್ ಬಗೆಹರಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಎನ್. ಡಿ. ತಿವಾರಿ, ಪಕ್ಷದ ಕೇಂದ್ರೀಯ ವೀಕ್ಷಕರಾದ ಗುಲಾಂ ನಬಿ ಆಜಾದ್ ಮತ್ತು ಬೀರೇಂದ್ರ ಸಿಂಗ್, ಸಂಸದ ಸತ್ಪಾಲ್ ಮಹಾರಾಜ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಯಶ್‌ಪಾಲ್ ಆರ್ಯ, ರೀಟಾ ಬಹುಗುಣ ಅವರು ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಒಟ್ಟು 70 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 32 ಶಾಸಕರಿದ್ದು, ಪಕ್ಷೇತರ ಮತ್ತು ಬಿಎಸ್‌ಪಿಯ ತಲಾ ಮೂವರು ಶಾಸಕರ ಬೆಂಬಲ ಪಡೆದಿದೆ.

ಎಲ್ಲ ಮಾರ್ಗಗಳು ಮುಕ್ತ: ಬಿಜೆಪಿ

ಕಾಂಗ್ರೆಸ್ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸುತ್ತಿರುವ ಬಿಜೆಪಿ, ಭವಿಷ್ಯದ ಎಲ್ಲ ಮಾರ್ಗಗಳು ಮುಕ್ತವಾಗಿದ್ದು, ಕಾಂಗ್ರೆಸ್ ಮತ್ತು ಬಿಎಸ್‌ಪಿಯ ಕೆಲವು ಶಾಸಕರೊಂದಿಗೆ ಪಕ್ಷ ಸಂಪರ್ಕದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ, ಪಕ್ಷದ ಮುಖಂಡ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.

ಉತ್ತರಾಖಂಡ ಕಾಂಗ್ರೆಸ್‌ನಲ್ಲಿ ಭಿನ್ನಮತ

ವಿಜಯ್ ಬಹುಗುಣ ಅವರು ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಭಿನ್ನಮತ ಕಾಣಿಸಿಕೊಂಡಿದೆ.

ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಕೇಂದ್ರ ಸಚಿವ ಹರಿಶ್ ರಾವತ್ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್  ತ್ಯಜಿಸಿ ಹೊಸ ಪಕ್ಷ ಆರಂಭಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.

`ನಾವು ಇಲ್ಲಿಗೆ ಬಂದು ಬರಿಗೈಯಲ್ಲಿ ವಾಪಸಾಗಲು ಸಾಧ್ಯವಿಲ್ಲ, ಆದ್ದರಿಂದ ಪಕ್ಷದ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಇಲ್ಲದಿದ್ದರೆ ನಾವು ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ~ ಎಂದು ರಾವತ್ ನಿವಾಸದಲ್ಲಿ ಸೇರಿರುವ ಸುಮಾರು ಒಂದು ಡಜನ್ ಶಾಸಕರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ. ಹೊಸ ಪಕ್ಷ ಸ್ಥಾಪಿಸುವ ಉದ್ದೇಶವಿದೆಯೇ ಎಂದು ಕೇಳಿದಾಗ, `ಬೇರೆ ಆಯ್ಕೆ ಇಲ್ಲದಿದ್ದಾಗ ಏನು ಮಾಡುವುದು~ ಎಂದು ಶಾಸಕರೊಬ್ಬರು ಮರುಸವಾಲು ಹಾಕಿದರು.

ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಹಿರಿಯ ಮುಖಂಡರು ಸೋನಿಯಾ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ ಶಾಸಕರೊಬ್ಬರು ರಾವತ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರವನ್ನು ಖಚಿತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.