ಮುಖ್ಯಮಂತ್ರಿ ಆಸ್ತಿ ಮೌಲ್ಯ 3.60 ಕೋಟಿ

7

ಮುಖ್ಯಮಂತ್ರಿ ಆಸ್ತಿ ಮೌಲ್ಯ 3.60 ಕೋಟಿ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಐದು ಕಟ್ಟಡಗಳು, 20 ಎಕರೆ ಭೂಮಿ ಸೇರಿದಂತೆ 3.60 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಮುಖ್ಯಮಂತ್ರಿಯವರ ಪತ್ನಿ ಡಾಟಿ ಅವರ ಬಳಿ ರೂ 1.50 ಕೋಟಿ ಮೌಲ್ಯದ ಆಸ್ತಿ ಇದೆ.ಸೆಪ್ಟೆಂಬರ್ 3ರಂದು ಸದಾನಂದ ಗೌಡ ಅವರು ಲೋಕಾಯುಕ್ತಕ್ಕೆ ಸಲ್ಲಿಸಿರುವ 2010-11ನೇ ಸಾಲಿನ ಆಸ್ತಿ ವಿವರದಲ್ಲಿ ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಮೂರು ಮನೆ, ಎರಡು ಕಟ್ಟಡಗಳನ್ನು ಹೊಂದಿರುವ ಅವರ ಆಸ್ತಿಯಲ್ಲಿ ಹೆಚ್ಚಿನ ಪ್ರಮಾಣ ಸ್ಥಿರಾಸ್ತಿಯೇ ಆಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಕದ್ರಿ ಮತ್ತು ಮರೋಳಿಯಲ್ಲಿ ಮನೆಗಳಿವೆ. ಬೆಂಗಳೂರು ನಗರ ಮತ್ತು ಮಂಗಳೂರಿನ ಬಂಗ್ರ ಕೂಳೂರಿನಲ್ಲಿ ಕಟ್ಟಡಗಳನ್ನು ಹೊಂದಿದ್ದು, ಅವರ ಬಳಿ ಇರುವ ಸ್ಥಿರಾಸ್ತಿಗಳ ಒಟ್ಟು ಮೌಲ್ಯ ರೂ 3.01 ಕೋಟಿ.ಎರಡು ಕಟ್ಟಡಗಳ ಖಚಿತ ವಿಳಾಸವನ್ನು ಅವರು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿಲ್ಲ. ಪುತ್ತೂರು ಮತ್ತು ಮಂಡೆಕೋಲು ಗ್ರಾಮಗಳಲ್ಲಿ ಸದಾನಂದ ಗೌಡ ಅವರು ಹೊಂದಿರುವ ಭೂಮಿ, ಅಕ್ರಮ-ಸಕ್ರಮ ಯೋಜನೆಯಡಿ ಸರ್ಕಾರವೇ ಮಂಜೂರು ಮಾಡಿರುವುದು.13 ಲಕ್ಷ ರೂಪಾಯಿ ಮೌಲ್ಯದ ಸ್ಕಾರ್ಪಿಯೋ ವಾಹನ ಮುಖ್ಯಮಂತ್ರಿಯವರ ಬಳಿ ಇದೆ. ಸುಮಾರು 10 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗಳಲ್ಲಿದೆ. ಖರೀದಿ ಸಂದರ್ಭದಲ್ಲಿ ರೂ 65,000 ಮೌಲ್ಯವಿದ್ದ 50 ಗ್ರಾಂ ಚಿನ್ನವೂ ಇದೆ. ಜೀವ ವಿಮಾ ಪಾಲಿಸಿಗಳ ಮೇಲೆ ರೂ 1.50 ಲಕ್ಷ ಹೂಡಿಕೆ ಮಾಡಿದ್ದಾರೆ. 0.32 ರಿವಾಲ್ವರ್ ಮತ್ತು ಒಂದು ನಳಿಕೆಯ ಬಂದೂಕು ಕೂಡ ಸದಾನಂದ ಗೌಡ ಅವರಲ್ಲಿದೆ.ಮುಖ್ಯಮಂತ್ರಿಯವರು 1.68 ಕೋಟಿ ರೂಪಾಯಿ ಸಾಲವನ್ನೂ ಹೊಂದಿದ್ದಾರೆ. ಕಾರ್ಪೊರೇಷನ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ಗಳಿಂದ ಅವರು ಸಾಲ ಪಡೆದಿದ್ದಾರೆ.

ಡಾಟಿ ಸದಾನಂದ ಗೌಡ ಅವರು ಬೆಂಗಳೂರಿನ ಜಾಲ ಹೋಬಳಿಯಲ್ಲಿ 7 ಗುಂಟೆ ಭೂಮಿಯೂ ಸೇರಿದಂತೆ ಒಟ್ಟು ರೂ 1.50 ಕೋಟಿ ಮೌಲ್ಯದ ಆಸ್ತಿಯ ಒಡೆತನ ಹೊಂದಿದ್ದಾರೆ.ಸುಮಾರು 1.17 ಕೋಟಿ ರೂಪಾಯಿ ಮೌಲ್ಯದ ಕಟ್ಟಡ ಮತ್ತು ಭೂಮಿಯನ್ನು ಅವರು ಹೊಂದಿದ್ದಾರೆ. ಬ್ಯಾಂಕ್ ಖಾತೆಗಳಲ್ಲಿ ರೂ 4 ಲಕ್ಷವಿದ್ದರೆ, ಜೀವ ವಿಮಾ ಪಾಲಿಸಿಗಳ ಮೇಲೆ ರೂ 6 ಲಕ್ಷ ಹೂಡಿಕೆ ಮಾಡಿದ್ದಾರೆ.ಮುಖ್ಯಮಂತ್ರಿಯವರ ಪತ್ನಿ ಬಳಿ 422 ಗ್ರಾಂ ಚಿನ್ನ ಮತ್ತು 1.25 ಕೆ.ಜಿ. ಬೆಳ್ಳಿ ಇದೆ. ಅವುಗಳ ಮೌಲ್ಯ ರೂ 6.60 ಲಕ್ಷ ಎಂದು ಪ್ರಮಾಣಪತ್ರದಲ್ಲಿ      ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry