ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣು

7

ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣು

Published:
Updated:

ಬೆಂಗಳೂರು: ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಆಪ್ತ ಸಚಿವರು ಮತ್ತು ಶಾಸಕರ ಸಭೆ ಕರೆಯಲು ತಯಾರಿ ನಡೆಸಿದ್ದು, ಪೂರ್ವಭಾವಿಯಾಗಿ ಬೆಂಗಳೂರು ನಗರದ ಬಿಜೆಪಿ ಶಾಸಕರ ಸಭೆಯನ್ನು ಮಂಗಳವಾರ ಸಂಜೆ ನಡೆಸಿದರು.ಗದಗ ಕಾರ್ಯಕ್ರಮ ಮುಗಿಸಿಕೊಂಡು ಸಂಜೆ ನಗರಕ್ಕೆ ವಾಪಸಾದ ಅವರು ತಮ್ಮ ಡಾಲರ್ಸ್‌ ಕಾಲೊನಿ ನಿವಾಸದಲ್ಲಿ ಬೆಂಗಳೂರಿನ ಬಿಜೆಪಿ ಶಾಸಕರ ಸಭೆ ಕರೆದಿದ್ದರು. ಇದರಲ್ಲಿ ಗೃಹ ಸಚಿವ ಆರ್.ಅಶೋಕ, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ವಸತಿ ಸಚಿವ ವಿ.ಸೋಮಣ್ಣ ಸೇರಿದಂತೆ ನಗರದ ಬಹುತೇಕ ಎಲ್ಲ ಶಾಸಕರು ಭಾಗವಹಿಸಿದ್ದರು.

 

ಸಚಿವರಾದ ಎಸ್.ಸುರೇಶ್‌ಕುಮಾರ್, ನಾರಾಯಣಸ್ವಾಮಿ, ಶಾಸಕ ಹೇಮಚಂದ್ರ ಸಾಗರ್ ಮಾತ್ರ ಸಭೆಗೆ ಗೈರುಹಾಜರಾಗಿದ್ದರು.ಇದೇ ಗುರುವಾರ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ನಗರಕ್ಕೆ ಬರುತ್ತಿದ್ದು, ಆ ಸಂದರ್ಭದಲ್ಲಿ ಎಲ್ಲ ಶಾಸಕರೂ ತಮ್ಮ ಪರ ವಕಾಲತ್ತು ವಹಿಸಬೇಕು. ಮತ್ತೆ ಮುಖ್ಯಮಂತ್ರಿ ಮಾಡುವಂತೆ ಒತ್ತಡ ಹೇರಬೇಕೆನ್ನುವ ಸೂಚನೆಯನ್ನು ಯಡಿಯೂರಪ್ಪ ಅವರು ಎಲ್ಲ ಶಾಸಕರಿಗೆ ನೀಡಿದ್ದಾರೆ ಎನ್ನಲಾಗಿದೆ.ಇದರ ಸಲುವಾಗಿ 23ರಂದು ನಡೆಯುವ ಆಪ್ತ ಸಚಿವರ ಮತ್ತು ಶಾಸಕರ ಸಭೆಗೆ ಬರುವಂತೆಯೂ ಎಲ್ಲರಿಗೂ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಅಶೋಕ ಸೇರಿದಂತೆ ಇತರ ಬಿಜೆಪಿ ಶಾಸಕರು ಮಾತನಾಡಿ, `ಪಕ್ಷ ಮತ್ತೆ ನಿಮ್ಮನ್ನು ಸಿಎಂ ಮಾಡಿದರೆ ಅದಕ್ಕೆ ನಮ್ಮದೇನೂ ವಿರೋಧ ಇರುವುದಿಲ್ಲ. ಅದಕ್ಕೆ ಪೂರ್ಣ ಬೆಂಬಲ ನೀಡುತ್ತೇವೆ~ ಎಂದು ಹೇಳಿದರು ಎಂದು ಗೊತ್ತಾಗಿದೆ.ಪಕ್ಷ ಬಿಡಬೇಡಿ: `ಇತ್ತೀಚಿನ ಬೆಳವಣಿಗೆಗಳಿಂದ ಬೇಸತ್ತು ಪಕ್ಷ ಬಿಡುವ ಯೋಚನೆ ಮಾಡಬೇಡಿ. ಎಲ್ಲ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ತೀರ್ಮಾನಗಳನ್ನು ತೆಗೆದುಕೊಳ್ಳಿ. ನೀವು ಎಲ್ಲರಿಗೂ ಬೇಕು. ಪಕ್ಷ ಬಿಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ~ ಎಂದು ಬಹುತೇಕ ಶಾಸಕರು ತಮ್ಮ ಅಭಿಪ್ರಾಯವನ್ನು ಯಡಿಯೂರಪ್ಪ ಅವರಿಗೆ ತಿಳಿಸಿದರು ಎನ್ನಲಾಗಿದೆ.`ನಾನು ಬೇಕಾ, ಬೇಡವಾ ಹೇಳಿ. ಬೇಕಿದ್ದರೆ 23ರ ಸಭೆಗೆ ಬಂದು ನನಗೆ ಬೆಂಬಲ ಕೊಡಿ. ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ಇಲ್ಲದಿದ್ದರೆ ರಾಜಕೀಯವಾಗಿ ಕಷ್ಟವಾಗುತ್ತದೆ~ ಎಂದೂ ಯಡಿಯೂರಪ್ಪ ಶಾಸಕರ ಜತೆ ಮುಕ್ತವಾಗಿ ಮಾತನಾಡಿದ್ದಾರೆ.ಸಭೆ ನಂತರ ಸಚಿವ ಅಶೋಕ ಸುದ್ದಿಗಾರರ ಜತೆ ಮಾತನಾಡಿ, `ಪಕ್ಷ ಮತ್ತು ಸರ್ಕಾರದಲ್ಲಿ ಕೆಲ ಗೊಂದಲಗಳು ಇವೆ. ಅವುಗಳನ್ನು ಬಗೆಹರಿಸಿಕೊಳ್ಳುವ ಸಂಬಂಧ ಮಾತುಕತೆ ನಡೆಯಿತು~ ಎಂದು ಪ್ರತಿಕ್ರಿಯೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry