ಮುಖ್ಯಮಂತ್ರಿ ಬದಲು ಸಂಭವ

ಶನಿವಾರ, ಜೂಲೈ 20, 2019
22 °C

ಮುಖ್ಯಮಂತ್ರಿ ಬದಲು ಸಂಭವ

Published:
Updated:

ನವದೆಹಲಿ: ಮುಖ್ಯಮಂತ್ರಿ ಸದಾನಂದಗೌಡರನ್ನು ಬದಲಾವಣೆ ಮಾಡಿ, ಜಗದೀಶ್ ಶೆಟ್ಟರ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸುವ ಇಂಗಿತವನ್ನು ಕೆಲವು ಬಿಜೆಪಿ ವರಿಷ್ಠರು ವ್ಯಕ್ತಪಡಿಸಿದ್ದಾರೆ.`ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಅಧಿಕಾರ ಬಿಡಲು ಮಾನಸಿಕವಾಗಿ ಸಿದ್ಧರಾಗಿ~ ಎಂಬ ಸುಳಿವನ್ನು  ಮುಖ್ಯಮಂತ್ರಿಗೆ ನೀಡಿದ್ದಾರೆ. ನಾಯಕತ್ವ ಬದಲಾವಣೆ ತೀರ್ಮಾನ ಕೈಗೊಳ್ಳಲು ಪ್ರಮುಖರ ಸಮಿತಿ ಹಾಗೂ ಸಂಸದೀಯ ಮಂಡಳಿ ಸಭೆಯನ್ನು ಕರೆಯುವುದು ಹೇಗೆಂಬ ವಿಧಿವಿಧಾನ ಕುರಿತು ಚಿಂತಿಸುತ್ತಿದ್ದಾರೆ.ಸೋಮವಾರ ದೆಹಲಿಗೆ ಸ್ಥಳಾಂತರಗೊಂಡ ಕಮಲ ಪಾಳೆಯದ `ಬಣ ರಾಜಕಾರಣ~ ಮಂಗಳವಾರ ಸಂಜೆಯ ಹೊತ್ತಿಗೆ ಒಂದು ಹಂತಕ್ಕೆ ತಲುಪಿದೆ. ಮಧ್ಯಾಹ್ನ ಎರಡು ಗಂಟೆಗೆ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮನೆಯಲ್ಲಿ ಸೇರಿದ ವರಿಷ್ಠರು ಸದಾನಂದಗೌಡ, ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರನ್ನು ಕರೆಸಿಕೊಂಡು ಪ್ರತ್ಯೇಕವಾಗಿ ಮತ್ತು ಒಟ್ಟಾಗಿ ಕೂರಿಸಿಕೊಂಡು ಅಭಿಪ್ರಾಯ ಕೇಳಿದರು. ಎರಡು ಗಂಟೆ ಸಭೆ ಕೊನೆಯಲ್ಲಿ ಮೂವರು ಮುಖಂಡರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಹೇಳಿ ಹೊರಬಂದರು.ಬಿಜೆಪಿ ಮುಖಂಡರಾದ ಅರುಣ್ ಜೇಟ್ಲಿ, ರಾಜ್ಯದ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್, ರಾಂಲಾಲ್, ಸತೀಶ್, ಸಂತೋಷ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು. ಮುಖ್ಯಮಂತ್ರಿ ಬದಲಾವಣೆಗೆ ಚರ್ಚೆಯಲ್ಲಿದ್ದ ಬಹುತೇಕ ಮುಖಂಡರು ಒಲವು ತೋರಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.ವಾರದಲ್ಲಿ ಪೂರ್ಣ: ಗಡ್ಕರಿ ತಮ್ಮ ಕುಟುಂಬ ಸದಸ್ಯರ ಜತೆ ತೀರ್ಥಯಾತ್ರೆಗೆ ತೆರಳಲಿದ್ದಾರೆ. ಅವರು ಹಿಂತಿರುಗಿದ ಬಳಿಕ ನಾಯಕತ್ವ ಬದಲಾವಣೆ ಚಿಂತನೆಗೆ ಸ್ಪಷ್ಟ ರೂಪ ಪಡೆಯುವ ಸಾಧ್ಯತೆಯಿದೆ. ಒಂದು ವಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಮುಗಿಯಲಿದೆ ಎಂದು ಮೂಲಗಳು ತಿಳಿಸಿವೆ.ಗಡ್ಕರಿ, ಜೇಟ್ಲಿ ಚಿಂತೆ: ಸದಾನಂದಗೌಡ ಸೋಮವಾರ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಜತೆ ಮಾತುಕತೆ ನಡೆಸಿದ ಬಳಿಕ ಗಡ್ಕರಿ, ಜೇಟ್ಲಿ ಅವರನ್ನು ಭೇಟಿ ಮಾಡಿದರು. ಇಬ್ಬರೂ ನಾಯಕರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ದೃಷ್ಟಿಯಿಂದ ನೀವು ಕುರ್ಚಿ ಬಿಡಬೇಕಾಗಬಹುದು.

 

ಇದಕ್ಕೆ ಮಾನಸಿಕವಾಗಿ ಸಿದ್ಧರಾಗಿ ಎಂದು ಸೂಚ್ಯವಾಗಿ ಹೇಳಿದ್ದಾರೆ. ಆದರೆ, ಇದಕ್ಕೆ ಬದಲಾವಣೆಗೆ ಅಡ್ವಾಣಿ ಒಪ್ಪಿಗೆ ಅಗತ್ಯವಾಗಿದ್ದು ಅವರನ್ನು ಮನವೊಲಿಸುವುದು ಹೇಗೆ. ಪ್ರಮುಖರ ಸಮಿತಿ ಹಾಗೂ ಸಂಸದೀಯ ಮಂಡಳಿ ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಿರ್ಣಯ ಮಾಡುವುದು ಹೇಗೆ ಎಂಬ ಚಿಂತೆ ಗಡ್ಕರಿ, ಜೇಟ್ಲಿ ಅವರನ್ನು ಕಾಡುತ್ತಿದೆ.ಬಿಜೆಪಿ ಪ್ರಮುಖರ ಸಮಿತಿ ಮತ್ತು ಸಂಸದೀಯ ಮಂಡಳಿ ಸಭೆಗೆ ುನ್ನ ಅಡ್ವಾಣಿ ಮನವೊಲಿಸಲು ಪ್ರಯತ್ನ ನಡೆಯಲಿದೆ. ಈ ಮಹತ್ವದ  ಹೊಣೆ ಜೇಟ್ಲಿ ಹೊರುವ ಸಾಧ್ಯತೆಯಿದೆ.`ಬಿಜೆಪಿ ಬಿಕ್ಕಟ್ಟು ಕೊನೆಗಾಣಿಸುವ ನಿಟ್ಟಿನಲ್ಲಿ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ತಲೆ ಬಾಗುವೆ. ಆದರೆ, ಯಾವ ತಪ್ಪು ಮಾಡಿದ್ದಕ್ಕೆ ನನ್ನನ್ನು ಬದಲಾವಣೆ ಮಾಡಲಾಗುತ್ತಿದೆ. ಲಿಂಗಾಯತ ಸಮಾಜಕ್ಕೆ ಸೇರಿದವನಲ್ಲ ಎಂಬ ಒಂದೇ ಕಾರಣವೇ. ಬಿಜೆಪಿಗೆ ಲಿಂಗಾಯತರು ಇದ್ದರೆ ಸಾಕೇ. ಉಳಿದ ಜಾತಿಗಳು ಬೇಡವೇ ಎಂದು ಸದಾನಂದಗೌಡ ಕೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ಎಲ್ಲ ಜಾತಿಗಳ ಮತಗಳೂ ಪಕ್ಷಕ್ಕೆ ಬಿದ್ದಿವೆ~ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.ಸದಾನಂದಗೌಡರ ಬದಲಾವಣೆಗೆ ಒತ್ತಡ ಹೇರಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಶ್ ಶೆಟ್ಟರ್ ಅವರನ್ನು ಗಡ್ಕರಿ ತರಾಟೆಗೆ ತೆಗೆದುಕೊಂಡರು. ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಿಲ್ಲ ಎಂದು ಈಶ್ವರಪ್ಪ ಅವರಿಗೆ ಕಿವಿ ಹಿಂಡಿದ್ದಾರೆ. ದೆಹಲಿಗೆ ಬಂದಿರುವ ಬಸವರಾಜ ಬೊಮ್ಮಾಯಿ, ಉದಾಸಿ,  ನಿರಾಣಿ ಮತ್ತಿತರ ಸಚಿವರಿಗೂ ರಾಜೀನಾಮೆ ಕೊಟ್ಟ ಬಗ್ಗೆ ವರಿಷ್ಠರು ಪ್ರಶ್ನಿಸಿದ್ದಾರೆ.ಮುಖ್ಯಮಂತ್ರಿ ಬದಲಾವಣೆಗೆ ಪಟ್ಟು ಹಿಡಿದಿರುವ ಯಡಿಯೂರಪ್ಪನವರ ಬಣ ಹಾಗೂ ವಿರೋಧ ಮಾಡುತ್ತಿರುವ ಜಾರಕಿಹೊಳಿ ಬಣದ ಜತೆಗೂ ವರಿಷ್ಠರು ಪ್ರತ್ಯೇಕವಾಗಿ ಚರ್ಚಿಸಿದ್ದಾರೆ. ಮುಖ್ಯಮಂತ್ರಿ ಸದಾನಂದಗೌಡರನ್ನು ಹೊರತುಪಡಿಸಿದರೆ ಈಶ್ವರಪ್ಪ ಅವರಾಗಲೀ ಅಥವಾ ಶೆಟ್ಟರ್ ಅವರಾಗಲೀ ಅಡ್ವಾಣಿ ಅವರನ್ನು ಭೇಟಿ ಮಾಡಲಿಲ್ಲ. ಹಿರಿಯ ಮುಖಂಡ ಎಲ್ಲಿ ತಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಾರೋ ಎಂಬ ಭಯದಿಂದ ದೂರವೇ ಉಳಿದರೆಂದು ಮೂಲಗಳು ಖಚಿತಪಡಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry