ಬುಧವಾರ, ಮೇ 18, 2022
23 °C

ಮುಖ್ಯಮಂತ್ರಿ ಯಡಿಯೂರಪ್ಪ ಹಠಾತ್ ದೆಹಲಿಗೆ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಗುರುವಾರ ರಾತ್ರಿ ಹಠಾತ್ ದೆಹಲಿಗೆ ಆಗಮಿಸಿದ್ದು, ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ ಈ ಭೇಟಿಗೆ  ಯಾವುದೇ ರಾಜಕೀಯ ಮಹತ್ವ ಇಲ್ಲ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.ಯಡಿಯೂರಪ್ಪ ಅವರನ್ನು ಬಿಜೆಪಿ ಸಂಸದೀಯ ಪಕ್ಷದ ಅಧ್ಯಕ್ಷ ಎಲ್. ಕೆ. ಅಡ್ವಾಣಿ ಕರೆದಿದ್ದಾರೆ. ಭೂ ಹಗರಣ ಮತ್ತು ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕುಗ್ಗಿರುವ ಸರ್ಕಾರದ ವರ್ಚಸ್ಸನ್ನು ಮರಳಿ ಪಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಸ್ಪಷ್ಟನೆ ಪಡೆಯಲು ಬಯಸಿದ್ದಾರೆ.‘ಕರ್ನಾಟಕದಲ್ಲೂ ಗುಜರಾತ್ ಮಾದರಿ ಆಡಳಿತ ಜಾರಿಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ಯಡಿಯೂರಪ್ಪ ಅಡ್ವಾಣಿ ಅವರಿಗೆ ವಿವರಿಸಲಿದ್ದಾರೆ. ಜನ ಪರವಾದ ತೀರ್ಮಾನಗಳು, ವೈಮಾನಿಕ ಪ್ರದರ್ಶನ ಆಯೋಜನೆ, ವೈಮಾನಿಕ ತಯಾರಿಕ ಉದ್ಯಮಗಳ ಸ್ಥಾಪನೆಗೆ ನಡೆಸಿರುವ ಪ್ರಯತ್ನ ಮುಂತಾದ ವಿಷಯಗಳನ್ನು ಮುಖ್ಯಮಂತ್ರಿ ವಿವರಿಸಲಿದ್ದಾರೆ.ಯಡಿಯೂರಪ್ಪ ಅವರನ್ನು ಅಡ್ವಾಣಿ ಅವರು ಕರೆಸಿಕೊಂಡಿರುವುದಕ್ಕೆ ಮಹತ್ವ ನೀಡುವ ಅಗತ್ಯ ಇಲ್ಲ. ರಾಜ್ಯದಲ್ಲಿ ಪರಿಸ್ಥಿತಿ ಈಗ ತಣ್ಣಗಿದೆ. ಪಕ್ಷದೊಳಗಿನ ಹಾಗೂ ಹೊರಗಿನ ಶತ್ರುಗಳೆಲ್ಲರೂ ಮೌನ ವಹಿಸಿದ್ದಾರೆ.ಹೀಗಾಗಿ ಯಡಿಯೂರಪ್ಪ ಅವರ ನಾಯಕತ್ವ ಅಭಾದಿತ ಎಂದು ವಿಶ್ವಸನೀಯ ಮೂಲಗಳು ಹೇಳಿವೆ. ರಾತ್ರಿ ದೆಹಲಿಗೆ ಬಂದ ಮುಖ್ಯಮಂತ್ರಿ ಬಿಜೆಪಿ ಉಸ್ತುವಾರಿ ಹೊತ್ತಿರುವ ಆರ್‌ಎಸ್‌ಎಸ್ ಮುಖಂಡ ರಾಂಲಾಲ್ ಮನೆಗೆ ತೆರಳಿ ಮಾತುಕತೆ ನಡೆಸಿದರು. ಅಡ್ವಾಣಿ ಭೇಟಿ ಬಳಿಕ ಶುಕ್ರವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡುವರು. ರಾಜ್ಯದ ಬಜೆಟ್ ಕುರಿತಂತೆ ಪ್ರಧಾನಿ ಜತೆ ಚರ್ಚಿಸುವ ಜತೆಗೆ ಕೃಷಿ ಪೂರಕ ಚಟುವಟಿಕೆಗಳಿಗೆ ಹೆಚ್ಚಿನ ಹಣ ಕೊಡುವಂತೆ ಆಗ್ರಹಿಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.ಕೆಲವೊಮ್ಮೆ ರಾಜಕೀಯ ಬಿಕ್ಕಟ್ಟಿನ ವೇಳೆ ಮುಖ ಗಂಟಿಕ್ಕುವ ಯಡಿಯೂರಪ್ಪ ಗುರುವಾರ ರಾತ್ರಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಹಸನ್ಮುಖಿಯಾಗಿದ್ದರು. ಎಲ್ಲರೊಂದಿಗೂ ಲಗುಬಗೆಯಿಂದ ಮಾತನಾಡುತ್ತಿದ್ದರು. ಇದು ಏನು ಸಮಸ್ಯೆಯಿಲ್ಲ ಎಂಬುದರ ಸಂಕೇತ ಎಂದು ಅವರ ಆಪ್ತರು ವಿಶ್ಲೇಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.