ಮುಖ್ಯಮಂತ್ರಿ ಹೆಗಲ ಮೇಲೆ ಈಗ 16 ಖಾತೆ

7

ಮುಖ್ಯಮಂತ್ರಿ ಹೆಗಲ ಮೇಲೆ ಈಗ 16 ಖಾತೆ

Published:
Updated:

ಬೆಂಗಳೂರು: ಹಣಕಾಸು, ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪ್ರವಾಸೋದ್ಯಮ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಹಕಾರ, ಬಂದರು ಮತ್ತು ಮೀನುಗಾರಿಕೆ ಸೇರಿದಂತೆ  ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಒಟ್ಟು 16 ಖಾತೆಗಳನ್ನು ನಿಭಾಯಿಸುತ್ತಿದ್ದಾರೆ.ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ನೀಡಿದ ವರದಿಯ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಸದಾನಂದ ಗೌಡ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಪ್ರಮುಖ ಖಾತೆಗಳನ್ನು ನಿಭಾಯಿಸಬೇಕಾದ ಅನಿವಾರ್ಯತೆ ಉಂಟಾಗಿದೆ.ಲೋಕಾಯುಕ್ತ ವರದಿಯಲ್ಲಿ ಜಿ.ಜನಾರ್ದನ ರೆಡ್ಡಿ, ಜಿ.ಕರುಣಾಕರ ರೆಡ್ಡಿ ಮತ್ತು ಬಿ.ಶ್ರೀರಾಮುಲು ಅವರ ಹೆಸರು ಇತ್ತು. ಆದಕಾರಣ ಆ ಮೂವರನ್ನೂ ಸದಾನಂದ ಗೌಡ ಅವರು ಸಂಪುಟಕ್ಕೆ ತೆಗೆದುಕೊಳ್ಳಲಿಲ್ಲ. ಹೀಗಾಗಿ ಅವರು ನಿಭಾಯಿಸುತ್ತಿದ್ದ ಪ್ರವಾಸೋದ್ಯಮ, ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡರು.ಬ್ಲೂಫಿಲಂ ಪ್ರಕರಣದ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ, ಕೃಷ್ಣಪಾಲೆಮಾರ್ ಅವರು ಕಳೆದ ವಾರ ರಾಜೀನಾಮೆ ನೀಡಿದ್ದು, ಅವರು ನಿಭಾಯಿಸುತ್ತಿದ್ದ ಸಹಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಬಂದರು ಮತ್ತು ಮೀನುಗಾರಿಕೆ ಖಾತೆಗಳ ಜವಾಬ್ದಾರಿಯೂ ಮುಖ್ಯಮಂತ್ರಿಗಳ ಹೆಗಲಿಗೇರಿದೆ.ಇವಲ್ಲದೆ ಸಂಪುಟ ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ, ಬೆಂಗಳೂರು ನಗರಾಭಿವೃದ್ಧಿ, ವಾರ್ತಾ, ಗಣಿ ಮತ್ತು ಭೂ ವಿಜ್ಞಾನ, ಮೂಲಸೌಕರ್ಯ ಖಾತೆಗಳನ್ನೂ ಸದಾನಂದಗೌಡ ಅವರೇ ನೋಡಿಕೊಳ್ಳುತ್ತಿದ್ದಾರೆ. ಇಷ್ಟೊಂದು ಖಾತೆಗಳನ್ನು ಮುಖ್ಯಮಂತ್ರಿಗಳೇ ನಿಭಾಯಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ.ಆರ್.ಅಶೋಕ, ಶೋಭಾ ಕರಂದ್ಲಾಜೆ, ಬಿ.ಎನ್.ಬಚ್ಚೇಗೌಡ ಸೇರಿದಂತೆ ಕೆಲ ಸಚಿವರು ತಲಾ ಎರಡು ಖಾತೆಗಳನ್ನು ಹೊಂದಿದ್ದಾರೆ.ಸಂಪುಟದಲ್ಲಿ ಹತ್ತು ಸ್ಥಾನಗಳು ಖಾಲಿ ಇವೆ. ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಬಜೆಟ್ ಅಧಿವೇಶನಕ್ಕೂ ಮೊದಲು ಸಚಿವ ಸಂಪುಟ ವಿಸ್ತರಣೆಯಾಗುವ ಲಕ್ಷಣಗಳಿಲ್ಲ ಎಂದು ಹೇಳಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry