ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯವಾಹಿನಿಗೆ ಭಿನ್ನ ಸಾಮರ್ಥ್ಯದ ಮಕ್ಕಳು

ಸರ್ವಶಿಕ್ಷಣ ಅಭಿಯಾನದ ಹೊಸ ಪ್ರಯತ್ನ
Last Updated 12 ಜುಲೈ 2014, 12:18 IST
ಅಕ್ಷರ ಗಾತ್ರ

ಮಂಗಳೂರು: ವಿಶೇಷ ಅಗತ್ಯ ಇರುವ ಮಕ್ಕಳನ್ನು ಶೈಕ್ಷಣಿಕ ಕ್ಷೇತ್ರದ ಮುಖ್ಯ­ವಾಹಿನಿ­ಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸರ್ವ ಶಿಕ್ಷಣ ಅಭಿ­ಯಾನದ ವತಿಯಿಂದ ವಿಶೇಷ ಕಾರ್ಯ­ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಇಂತಹ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳನ್ನು ರೂಪಿ­ಸಲು ಪ್ರಸಕ್ತ ಶೈಕ್ಷಣಿಕ ವರ್ಷದ ಆಯವ್ಯಯ­ದಲ್ಲಿ ₨77.76 ಲಕ್ಷ ಮೊತ್ತ ಎತ್ತಿಡ­ಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ವಿಶೇಷ ಅಗತ್ಯ ಇರುವ ಮಕ್ಕಳ ಸಮನ್ವಯ ಶಿಕ್ಷಣ’ ಕಾರ್ಯ­ಸೂಚಿಗಳ ಅನುಷ್ಠಾನಕ್ಕಾಗಿ ಮಾರ್ಗಸೂಚಿ­ಗಳನ್ನು ರೂಪಿಸಲಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿಯೇ ವಿಶೇಷ ಮಕ್ಕಳಿಗೆ ಸಂಬಂಧಿಸಿ ಕಾರ್ಯಕ್ರಮಗಳು ಆರಂಭ­ವಾಗಲಿವೆ.

ಜಿಲ್ಲೆಯಲ್ಲಿ ಸ್ತ್ರೀಶಕ್ತಿ ಗುಂಪುಗಳು, ಆಯಾ ಪ್ರದೇಶದಲ್ಲಿ ಸಕ್ರಿಯವಾಗಿರುವ ಸ್ವಯಂ­ಸೇವಕರ ನೆರವಿನಿಂದ ವಿಶೇಷ ಮಕ್ಕಳತ್ತ ಹೆಚ್ಚಿನ ಗಮನ ಹರಿಸಲು ನಿರ್ಧರಿಸಲಾಗಿದೆ. ಮಕ್ಕಳಿಗೆ ಫಿಸಿಯೋ ಥೆರಪಿ ಚಿಕಿತ್ಸೆ ಅಗತ್ಯವಿದ್ದ ಕಡೆಗಳಲ್ಲಿ ಸ್ಥಳೀಯ ಆಸ್ಪತ್ರೆಗಳ ವೈದ್ಯರೂ ಈ ಕಾರ್ಯ­ದಲ್ಲಿ ಕೈ ಜೋಡಿಸಲಿದ್ದಾರೆ. ಯೇನೆಪೋಯ, ಶ್ರೀನಿವಾಸ ವೈದ್ಯಕೀಯ ಕಾಲೇಜು, ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜು, ಮಂಗಳೂರಿನ ಚೇತನ ಸಂಸ್ಥೆ ಮತ್ತು  ಆ ಸಂಸ್ಥೆಯ ಜೊತೆಗೆ ಕೆಲಸ ಮಾಡುವ ವೈದ್ಯರು ವಿಶೇಷ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಅಗತ್ಯವಿರುವ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.

2014–15ನೇ ಸಾಲಿನಲ್ಲಿ ರಾಜ್ಯದಾದ್ಯಂತ ವಿಶೇಷ ಅಗತ್ಯ ಇರುವ ಮಕ್ಕಳನ್ನು ನಿಖರವಾಗಿ ಗುರುತಿಸಲು ಸರ್ಕಾರ ನಿರ್ಧರಿಸಿದ್ದು ಈ ವರ್ಷ ಗಣತಿ ಕಾರ್ಯವನ್ನೂ ಹಮ್ಮಿಕೊಳ್ಳಲಾಗಿದೆ. ಈವರೆಗೆ ನಡೆದ ಗಣತಿಯಿಂದ ಕೈಬಿಟ್ಟು ಹೋದ ಮಕ್ಕಳು, ನ್ಯೂನತೆಯನ್ನು ಗುರುತಿಸು­ವಲ್ಲಿ ವಿಫಲವಾದ ಪ್ರಕರಣಗಳು ಸೇರಿದಂತೆ ಎಲ್ಲ ಮಕ್ಕಳನ್ನೂ ಗುರುತಿಸುವುದಲ್ಲದೆ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ­ಗಳು ನಡೆಯಲಿವೆ.

ಸರ್ವಶಿಕ್ಷಣ ಅಭಿಯಾನದ ಈ ಹೊಸ ಪ್ರಯತ್ನದಲ್ಲಿ ವಿಶೇಷ ಅಗತ್ಯ ಇರುವ ಮಕ್ಕಳಿಗೆ ಬೇಕಾಗುವ ಸಾಧನ ಸಲಕರಣೆಗಳ ವಿತರಣೆ, ಗೃಹಾಧಾರಿತ ಶಿಕ್ಷಣ, ಶಾಲಾಧಾರಿತ ಶಿಕ್ಷಣ ಮತ್ತು ಮಕ್ಕಳಿಗೆ, ಪೋಷಕರಿಗೆ ಸಾರಿಗೆ  ಮತ್ತು ಬೆಂಗಾವಲು ಭತ್ಯೆ ಒದಗಿಸುವ ನಿಟ್ಟಿನಲ್ಲಿ ಸ್ಥಳೀಯ ಸಹಭಾಗಿತ್ವದೊಂದಿಗೆ ಯೋಜನೆ­ಗಳನ್ನು ರೂಪಿಸಲು ನಿರ್ಧರಿಸಲಾಗಿದೆ.

ಎರಡು ವರ್ಷಕ್ಕಿಂತಲೂ ಹೆಚ್ಚು ಅವಧಿ­ಯಲ್ಲಿ ಗೃಹಾಧಾರಿತ ಶಿಕ್ಷಣ ಪಡೆಯುವ ಮಕ್ಕಳು ಮನೆಯಲ್ಲಿಯೇ ಉಳಿದು ಬಿಡುವ ಅಪಾಯವಿದೆ. ಆದ್ದರಿಂದ ಅಂತಹ ಮಕ್ಕಳಿಗೆ ಶಾಲಾ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ  ಅವರನ್ನು ವಾರದಲ್ಲಿ ಕನಿಷ್ಠ ಎರಡು ದಿನ ಶಾಲಾ ಸಿದ್ಧತಾ ಕೇಂದ್ರ (school readiness program centres)ಗಳಿಗೆ ಕರೆ ತರುವ ಉದ್ದೇಶವಿದೆ.

ಕರೆಕ್ಟಿವ್‌ ಸರ್ಜರಿ: ಸಮನ್ವಯ ಶಿಕ್ಷಣ ಯೋಜನೆಯಡಿ ಆಯೋಜಿಸುವ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ವೈದ್ಯರಿಂದ ಶಸ್ತ್ರ ಚಿಕಿತ್ಸೆಗೆ ಶಿಫಾರಸುಗೊಂಡ ಮಕ್ಕಳಿಗೆ 2014–15ನೇ ಸಾಲಿನ ಕ್ರಿಯಾ ಯೋಜನೆಯ ಅನುದಾನದ ಮಿತಿಯಲ್ಲಿ ಕರೆಕ್ಟಿವ್‌ ಸರ್ಜರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತಿ ಮಗುವಿಗೆ ಚಿಕಿತ್ಸೆ ವೆಚ್ಚ ಗರಿಷ್ಠ ₨ 8 ಸಾವಿರ ಎಂದು ನಿಗದಿ ಪಡಿಸಲಾಗಿದೆ.

ಉಳಿದಂತೆ ಹೆಚ್ಚುವರಿ ಚಿಕಿತ್ಸೆ ಅಗತ್ಯವಿದ್ದಲ್ಲಿ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿಯೂ ನೆರವನ್ನು ಪಡೆಯುವ ಅವಕಾಶ ಇದ್ದೇ ಇದೆ. ದೈಹಿಕ ನ್ಯೂನತೆ, ಬುದ್ಧಿ ಮಾಂದ್ಯತೆ, ಸೆರೆಬ್ರಲ್‌ ಪಾಲ್ಸಿ ಮತ್ತು ಆಟಿಸಂ, ಸ್ಪೆಕ್ಟ್ರಂ ಡಿಸಾರ್ಡರ್‌ ಮುಂತಾದ ನ್ಯೂನತೆಗಳಿಗೆ ಥೆರಪಿ ನೀಡಲು ಪ್ರತಿ ಶೈಕ್ಷಣಿಕ ಬ್ಲಾಕ್‌ಗೆ  ₨ 25,000 ನೀಡುವ ಉದ್ದೇಶವಿದೆ.

ಗೃಹಾಧಾರಿತ ಶಿಕ್ಷಣ ನೀಡುವ ಸ್ವಯಂ­ಸೇವಕರಿಗೆ ಗೌರವ ಸಂಭಾವನೆ, ವಿಶ್ವ ಅಂಗ­ವಿಕಲರ ದಿನಾಚರಣೆ, ವಿಶೇಷ ಅಗತ್ಯ ಇರುವ ಮಕ್ಕಳಿಗಾಗಿ ಪ್ರಕೃತಿ ಅಧ್ಯಯನ ಶಿಬಿರಗಳು, ವಿಶೇಷ ಅಗತ್ಯ ಇರುವ ಮಕ್ಕಳ ತಂದೆ ತಾಯಿ, ಪೋಷಕರಿಗೆ ತರಬೇತಿ, ಶಿಕ್ಷಕರಿಗೆ ತರಬೇತಿ ಮುಂತಾದ ಚಟು­ವಟಿಕೆ­ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT