ಮುಖ್ಯ ಎಂಜಿನಿಯರ್‌ಗೆ ನಿಂದನೆ: ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ

7

ಮುಖ್ಯ ಎಂಜಿನಿಯರ್‌ಗೆ ನಿಂದನೆ: ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ

Published:
Updated:

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಾಮಗಾರಿಗಳಲ್ಲಿನ ಲೋಪ ಹಾಗೂ ಇತರೆ ನ್ಯೂನತೆಗಳ ಬಗ್ಗೆ ತನಿಖೆ ನಡೆಸುವ ಪಾಲಿಕೆ ಆಯುಕ್ತರ ಜಾಗೃತ ಕೋಶದ ಮುಖ್ಯ ಎಂಜಿನಿಯರ್‌ಗೆ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದಾರೆ.ಇದೇ ತಿಂಗಳ 21ರಂದು ಬಾಗಲೂರು/ ಕ್ಯಾಲಸನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳ ಸುಮಾರು ಆರೇಳು ಮಂದಿ ಏಕಾಏಕಿ ಟಿವಿಸಿಸಿ ಕಚೇರಿಗೆ ಆಗಮಿಸಿ, ಮಹದೇವಪುರ ಹಾಗೂ ಯಲಹಂಕ ವಲಯ ವ್ಯಾಪ್ತಿಯಲ್ಲಿ ಕೈಗೊಳ್ಳುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಗೆ ಸಂಬಂಧಿಸಿದ ಕಡತವನ್ನು ಪರಿಶೀಲಿಸಿದ ನಂತರ ತಮಗೆ ಅನುಕೂಲವಾಗುವ ರೀತಿಯಲ್ಲಿ ವರದಿ ನೀಡಬೇಕು, ಇಲ್ಲದಿದ್ದಲ್ಲಿ ಕಚೇರಿಗೆ ಬೆಂಕಿ ಹಾಕುವುದಾಗಿ ಮುಖ್ಯ ಎಂಜಿನಿಯರ್‌ಗೆ ಬೆದರಿಕೆ ಹಾಕಿದ್ದಾರೆ.ಇದೇ ಸಂದರ್ಭದಲ್ಲಿ ಮುಖ್ಯ ಎಂಜಿನಿಯರ್ ದೇವರಾಜು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊರ ನಡೆದಿದ್ದಾರೆ. ಈ ಸಂಬಂಧ ಅವರು ವಿಶೇಷ ಆಯುಕ್ತರಿಗೆ ದೂರು ನೀಡಿದ್ದಾರೆ.ಕಚೇರಿಯಲ್ಲಿ ನಿರ್ಭೀತವಾಗಿ ಕೆಲಸ ಮಾಡಲು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳುವುದರ ಜತೆಗೆ, ಕಚೇರಿಯಲ್ಲಿ ನಡೆಯುವ ಎಲ್ಲ ಘಟನೆಗಳನ್ನು ಸೆರೆಹಿಡಿಯಲು ಅನುಕೂಲವಾಗುವಂತೆ ಸಿಸಿಟಿವಿ ಅಳವಡಿಸುವಂತೆಯೂ ಅವರು ವಿಶೇಷ ಆಯುಕ್ತರನ್ನು ಕೋರಿದ್ದಾರೆ.ಸಚಿವರ ಭರವಸೆ: ಈ ಬಗ್ಗೆ ಸಚಿವ ಆರ್. ಅಶೋಕ ಅವರ ಗಮನಸೆಳೆದಾಗ, ಮೇಯರ್ ದೂರು ನೀಡಿದಲ್ಲಿ ಟಿವಿಸಿಸಿ ಮುಖ್ಯ ಎಂಜಿನಿಯರ್‌ಗೆ ರಕ್ಷಣೆ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry