ಮುಗಿದಿಲ್ಲ ಕಾಮಗಾರಿ, ನಮ್ ಗೋಳ್ ಕೇಳೋರ್ ಯಾರ‌್ರಿ?

7

ಮುಗಿದಿಲ್ಲ ಕಾಮಗಾರಿ, ನಮ್ ಗೋಳ್ ಕೇಳೋರ್ ಯಾರ‌್ರಿ?

Published:
Updated:
ಮುಗಿದಿಲ್ಲ ಕಾಮಗಾರಿ, ನಮ್ ಗೋಳ್ ಕೇಳೋರ್ ಯಾರ‌್ರಿ?

ಬೆಂಗಳೂರು: ನಗರದ ಯಶವಂತಪುರ ಬಳಿಯ ಭಾರತೀಯ ವಿಜ್ಞಾನ ಸಂಸ್ಥೆಯ ಎದುರಿನ ಸಿ.ಎನ್.ಆರ್.ರಾವ್ ವೃತ್ತದ ಅಂಡರ್‌ಪಾಸ್ ಕಾಮಗಾರಿ ಆರಂಭವಾಗಿ ಎರಡೂವರೆ ವರ್ಷಗಳು ಕಳೆದರೂ ಇನ್ನೂ ಅಂಡರ್‌ಪಾಸ್ ಸಂಚಾರಕ್ಕೆ ಮುಕ್ತವಾಗಿಲ್ಲ. ಕಾಮಗಾರಿ ವಿಳಂಬದಿಂದ ಈ ಭಾಗದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚುತ್ತಲೇ ಇದೆ. ಕಾಮಗಾರಿ ವಿಳಂಬದಿಂದ ಸಿ.ವಿ.ರಾಮನ್ ರಸ್ತೆಯಿಂದ ಮೇಖ್ರಿ ವೃತ್ತ, ಮಲ್ಲೇಶ್ವರದ ಕಡೆಗೆ ಸಂಚರಿಸಲು ತೀವ್ರ ತೊಂದರೆಯಾಗುತ್ತಿದೆ ಎಂಬುದು ಈ ಭಾಗದ ಸಾರ್ವಜನಿಕರ ದೂರು.ಯಶವಂತಪುರ, ಮಲ್ಲೇಶ್ವರ ಹಾಗೂ ಮೇಖ್ರಿ ವೃತ್ತಗಳಿಗೆ ಸಂಪರ್ಕ ಕಲ್ಪಿಸುವ ಸಿ.ಎನ್.ಆರ್.ರಾವ್ ವೃತ್ತದಲ್ಲಿ ವಾಹನ ದಟ್ಟಣೆ ಸಮಸ್ಯೆಯ ಪರಿಹಾರಕ್ಕಾಗಿ 2008ರಲ್ಲಿ ಇಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅನುಮೋದನೆ ನೀಡಿತ್ತು.ಮೂವತ್ತು ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 2010ರ ಜನವರಿಯಲ್ಲಿ ಆರಂಭವಾದ ಕಾಮಗಾರಿ 2011ರ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಕಾಮಗಾರಿ ಪೂರ್ಣಗೊಳಿಸುವ ಕಾಲಾವಧಿ ಮುಗಿದು ಒಂದು ವರ್ಷ ಕಳೆದರೂ ಅಂಡರ್‌ಪಾಸ್ ಕಾಮಗಾರಿ ಇನ್ನೂ ಶೇ 30ರಷ್ಟು ಬಾಕಿ ಉಳಿದಿದೆ.`ಕಾಮಗಾರಿ ಆರಂಭವಾದ ದಿನದಿಂದ ಯಶವಂತಪುರದಿಂದ ಮಲ್ಲೇಶ್ವರ ಹಾಗೂ ಮೇಖ್ರಿ ವೃತ್ತದ ಕಡೆಗೆ ಹೋಗುವ ಸಿ.ವಿ.ರಾಮನ್ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ವಾಹನ ದಟ್ಟಣೆಯಿಂದ ರಸ್ತೆಯ ಮೇಲೇ ಗಂಟೆಗಟ್ಟಲೆ ಸಮಯ ಕಳೆಯುವುದು ಅನಿವಾರ್ಯವಾಗಿದೆ. ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದರಿಂದ ನಿತ್ಯವೂ ಸಂಚಾರ ಸಮಸ್ಯೆ ತಪ್ಪಿದ್ದಲ್ಲ' ಎಂದು ಯಶವಂತಪುರದ ನಿವಾಸಿ ರಾಜೀವ್ ಅಸಮಾಧಾನ ವ್ಯಕ್ತಪಡಿಸಿದರು.`ಕಾಮಗಾರಿ ವಿಳಂಬದಿಂದ ಈ ಭಾಗದಲ್ಲಿ ಓಡಾಡುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆಯ ವೇಳೆ ವಾಹನ ಸಂಚಾರ ತುಂಬಾಕಷ್ಟವಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು' ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿ ಶ್ಯಾಮ್ ಒತ್ತಾಯಿಸಿದರು.`ಅಂಡರ್‌ಪಾಸ್ ಕಾಮಗಾರಿಯಿಂದ ರಸ್ತೆಗಳು ಹಾಳಾಗಿವೆ. ಸಿ.ವಿ.ರಾಮನ್ ರಸ್ತೆ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾದಚಾರಿ ಮಾರ್ಗವೇ ಇಲ್ಲದಂತಾಗಿದೆ. ಇದರಿಂದ ರಸ್ತೆಗಳಲ್ಲಿ ಓಡಾಡುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ ವಾಹನ ಸಂಚಾರ ಹೆಚ್ಚಾಗಿರುವ ಕಾರಣ ರಸ್ತೆಯಲ್ಲಿ ನಡೆದು ಹೋಗುವುದು ಕಷ್ಟವಾಗಿದೆ' ಎಂದು ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನ ವಿದ್ಯಾರ್ಥಿನಿ ದೀಪಾ ದೂರಿದರು.ಒಂದು ಭಾಗ ಸಂಚಾರಕ್ಕೆ ಮುಕ್ತ

`ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಸಂಪೂರ್ಣವಾಗಿ ಮುಗಿಯುವವರೆಗೂ ಸಾರ್ವಜನಿಕರ ಅನುಕೂಲಕ್ಕಾಗಿ ಅಂಡರ್‌ಪಾಸ್‌ನ ಒಂದು ಭಾಗ ಹಾಗೂ ಮೇಲ್ಭಾಗದ ಎರಡೂ ಕಡೆಯ ಸರ್ವಿಸ್ ರಸ್ತೆಗಳನ್ನು ತಾತ್ಕಾಲಿಕವಾಗಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಮಲ್ಲೇಶ್ವರದಿಂದ ಯಶವಂತಪುರದ ಕಡೆಗೆ ಹೋಗುವ ವಾಹನಗಳು ಅಂಡರ್‌ಪಾಸ್‌ನ ಒಂದು ಭಾಗದಿಂದ ಹೋಗಬಹುದು. ಯಶವಂತಪುರದಿಂದ ಮಲ್ಲೇಶ್ವರದ ಕಡೆಗೆ ಹೋಗುವ ವಾಹನಗಳು ಸರ್ವಿಸ್ ರಸ್ತೆ ಮೂಲಕ ಸಾಗಬಹುದು'

ಡಾ.ಎಂ.ಎಸ್.ಶಿವಪ್ರಸಾದ್,ಬಿಬಿಎಂಪಿ ಸದಸ್ಯ, ಅರಮನೆ ನಗರ ವಾರ್ಡ್ವಿಳಂಬಕ್ಕೆ ದಂಡ

`ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ವಿಳಂಬಕ್ಕಾಗಿ ಗುತ್ತಿಗೆ ಪಡೆದಿರುವ ಐಸಿಸಿಐ ಕನ್‌ಸ್ಟ್ರಕ್ಷನ್ಸ್ ಹಾಗೂ ಮಾಧವ್ ಕನ್‌ಸ್ಟ್ರಕ್ಷನ್ಸ್ ಕಂಪೆನಿಗಳಿಗೆ ದಂಡ ವಿಧಿಸಲಾಗುವುದು. ವಿಳಂಬದ ಕಾರಣಗಳನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ದಂಡದ ಮೊತ್ತ ನಿಗದಿ ಪಡಿಸಲಾಗುವುದು. ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಶೀಘ್ರವೇ ಕಾಮಗಾರಿ ಮುಗಿಸುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಅಂಡರ್‌ಪಾಸ್ ಸಂಚಾರಕ್ಕೆ ಮುಕ್ತಗೊಳ್ಳಲಿದೆ'

ಡಿ.ವೆಂಕಟೇಶಮೂರ್ತಿ,ಮೇಯರ್, ಬಿಬಿಎಂಪಿಕಾಮಗಾರಿ ಬೇಗ ಮುಗಿಸಿ

`ಸಿ.ಎನ್.ಆರ್.ರಾವ್ ವೃತ್ತದ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ 2011ರ ಸೆಪ್ಟೆಂಬರ್ ವೇಳೆಗೆ ಮುಗಿಯಬೇಕಿತ್ತು. ಆದರೆ, ನಿರ್ಮಾಣದ ಕೆಲಸ ಇನ್ನೂ ಸಾಕಷ್ಟು ಬಾಕಿ ಇದೆ. ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ನಿತ್ಯವೂ ತೊಂದರೆ ತಪ್ಪಿದ್ದಲ್ಲ. ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಈಗಾಗಲೇ ಪ್ರತಿಭಟನೆ ನಡೆಸಿದ್ದೇವೆ. ಕಾಮಗಾರಿ ಇನ್ನಷ್ಟು ವಿಳಂಬವಾದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು'

ವಿ.ಜ್ಞಾನಮೂರ್ತಿ,ಸಹ ಸಂಚಾಲಕ, ಬೆಂಗಳೂರು ಉಳಿಸಿ ಸಮಿತಿಶೀಘ್ರದಲ್ಲೇ ಕಾಮಗಾರಿ ಪೂರ್ಣ

`ಕಾಮಗಾರಿಗಾಗಿ ಭೂ ಸ್ವಾಧೀನ ಪ್ರಕ್ರಿಯೆ ತಡವಾಯಿತು. ಗುತ್ತಿಗೆ ಪಡೆದ ಕಂಪೆನಿಯ ನಿಧಾನಗತಿಯ ಕೆಲಸ ಹಾಗೂ ಸಿ.ಎನ್.ಆರ್.ರಾವ್ ವೃತ್ತದ ಅಕ್ಕಪಕ್ಕದ ರಸ್ತೆಗಳಲ್ಲಿ ಮಾರ್ಗ ಬದಲಾವಣೆ ಮಾಡುವುದು ತಡವಾದ್ದರಿಂದ ಕಾಮಗಾರಿ ವಿಳಂಬವಾಗಿದೆ. ಸದ್ಯ ಸರ್ವಿಸ್ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು'

ಕೆ.ಟಿ.ನಾಗರಾಜ್,ಸೂಪರಿಂಡೆಂಟ್ ಎಂಜಿನಿಯರ್,ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry