ಸೋಮವಾರ, ಮಾರ್ಚ್ 27, 2023
24 °C

ಮುಗಿದ ಕಾಮೆಡ್-ಕೆ ಸಿಇಟಿ ಪರೀಕ್ಷೆ: ಮುಗಿಯದ ಸೀಟು ಶುಲ್ಕ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಗಿದ ಕಾಮೆಡ್-ಕೆ ಸಿಇಟಿ ಪರೀಕ್ಷೆ: ಮುಗಿಯದ ಸೀಟು ಶುಲ್ಕ ಗೊಂದಲ

ಬೆಂಗಳೂರು: ಕಾಮೆಡ್-ಕೆ ಒಕ್ಕೂಟದ ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆ ಭಾನುವಾರ ನಡೆದಿದೆ. ಇದರೊಂದಿಗೆ ರಾಜ್ಯ ಸರ್ಕಾರ ಹಾಗೂ ಕಾಮೆಡ್-ಕೆ ಎರಡೂ ಸಿಇಟಿಗಳು ಮುಗಿದಿವೆ. ಆದರೆ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ಸೀಟು ಹಂಚಿಕೆ, ಶುಲ್ಕ ನಿಗದಿಗೆ ಸಂಬಂಧಿಸಿದ ಹಗ್ಗ ಜಗ್ಗಾಟ ಮುಂದುವರಿದಿದೆ.ಇದರಿಂದಾಗಿ ರಾಜ್ಯದ ವಿದ್ಯಾರ್ಥಿಗಳು, ಪೋಷಕರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.

ರಾಜ್ಯದಲ್ಲಿ ವೃತ್ತಿ ಶಿಕ್ಷಣ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಏಪ್ರಿಲ್ 27 ಮತ್ತು 28ರಂದು ಪ್ರವೇಶ ಪರೀಕ್ಷೆ ನಡೆಸಿತ್ತು. 1.17 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಎದುರಿಸಿದ್ದರು. ಭಾನುವಾರ ನಡೆದ ಕಾಮೆಡ್-ಕೆ ಸಿಇಟಿಯಲ್ಲಿ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕಾಮೆಡ್-ಕೆ ಸಿಇಟಿಗೆ ಒಟ್ಟು 68,363 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 18,136 ವಿದ್ಯಾರ್ಥಿಗಳು ಕರ್ನಾಟಕದವರು. 50,227 ವಿದ್ಯಾರ್ಥಿಗಳು ಹೊರರಾಜ್ಯಗಳವರು. ವೈದ್ಯ/ದಂತ ವೈದ್ಯ ಕೋರ್ಸ್ ಪ್ರವೇಶಕ್ಕೆ 20,660, ಎಂಜಿನಿಯರಿಂಗ್‌ಗೆ 38,696, ಎರಡೂ ವರ್ಗಕ್ಕೆ 9007 ಅರ್ಜಿಗಳು ಸಲ್ಲಿಕೆಯಾಗಿದ್ದವು. 45,263 ಬಾಲಕರು ಮತ್ತು 23,100 ಬಾಲಕಿಯರು ಕಾಮೆಡ್-ಕೆ ಸಿಇಟಿಗೆ ಅರ್ಜಿ ಸಲ್ಲಿಸಿದ್ದರು.ಭಾನುವಾರ ರಾಜ್ಯದಾದ್ಯಂತ 105 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆದಿದೆ. ಬೆಂಗಳೂರಿನ 79, ಮಂಗಳೂರಿನ ಐದು, ಬೆಳಗಾವಿ, ಮೈಸೂರು, ಧಾರವಾಡದ ತಲಾ ಮೂರು, ಬಳ್ಳಾರಿ, ದಾವಣಗೆರೆಯ ತಲಾ 2, ವಿಜಾಪುರ, ತುಮಕೂರು, ಶಿವಮೊಗ್ಗ ಮತ್ತು ಉಡುಪಿಯ ತಲಾ ಒಂದು ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.ಶೇಕಡ 88ರಷ್ಟು ಹಾಜರಾತಿ: ‘ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಪೈಕಿ ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ಪತ್ರಿಕೆಯ ಪರೀಕ್ಷೆಗೆ ಶೇಕಡ 87.10, ಗಣಿತ ಪತ್ರಿಕೆಯ ಪರೀಕ್ಷೆಗೆ ಶೇ 88.72 ಮತ್ತು ಜೀವ ವಿಜ್ಞಾನ ಪತ್ರಿಕೆಯ ಪರೀಕ್ಷೆಗೆ ಶೇ 86.36ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು’ ಎಂದು ಕಾಮೆಡ್-ಕೆ ಒಕ್ಕೂಟದ ಪ್ರಕಟಣೆ ತಿಳಿಸಿದೆ.ಬೆಂಗಳೂರು ಮತ್ತು ಮೈಸೂರಿನಲ್ಲಿ ಒಬ್ಬರ ಹೆಸರಿನಲ್ಲಿ ಮತ್ತೊಬ್ಬರು ಪರೀಕ್ಷೆ ಬರೆಯಲು ಪ್ರಯತ್ನಿಸಿದ ತಲಾ ಎರಡು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗಿದೆ. ಈ ಮಧ್ಯೆ ಭಾನುವಾರ ಸಂಜೆಯೇ ಪ್ರವೇಶ ಪರೀಕ್ಷೆಯ ಸರಿ ಉತ್ತರಗಳನ್ನು ಕಾಮೆಡ್-ಕೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.ಮುಂದುವರಿದ ಗೊಂದಲ: ಎರಡೂ ಪ್ರವೇಶ ಪರೀಕ್ಷೆಗಳೂ ಮುಗಿದಿವೆ. ಆದರೆ ಪರೀಕ್ಷೆಗಳನ್ನು ಮುಗಿಸಿರುವ ವಿದ್ಯಾರ್ಥಿಗಳು ನೆಮ್ಮದಿಯಿಂದ ಇರುವಂತಹ ವಾತಾವರಣ ಸೃಷ್ಟಿಯಾಗಿಲ್ಲ. ವೃತ್ತಿ ಶಿಕ್ಷಣ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಯ ವಿಷಯದಲ್ಲಿ ಸರ್ಕಾರ ಮತ್ತು ವೃತ್ತಿಶಿಕ್ಷಣ ಸಂಸ್ಥೆಗಳ ನಡುವೆ ಇನ್ನೂ ಸಹಮತ ಮೂಡಿಲ್ಲ. ಈ ವಿಷಯದಲ್ಲಿ ಹಗ್ಗಜಗ್ಗಾಟ ಮುಂದುವರಿದಿರುವುದರಿಂದ ವಿದ್ಯಾರ್ಥಿಗಳು, ಪೋಷಕರಲ್ಲಿ ಆತಂಕ ಕವಿದಿದೆ.ಗೊಂದಲ ಬಗೆಹರಿಸಲು ಸರ್ಕಾರ ಹಲವು ಬಾರಿ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದರೂ ಯಶಸ್ಸು ಕಂಡಿಲ್ಲ. ಬಳಿಕ ಎರಡು ಸೂತ್ರಗಳನ್ನು ಶಿಕ್ಷಣ ಸಂಸ್ಥೆಗಳ ಮುಂದಿಟ್ಟಿದೆ.   

 

ಎಂಜಿನಿಯರಿಂಗ್ ಸೀಟುಗಳಿಗೆ 32,500 ರೂಪಾಯಿ ಶುಲ್ಕ ನಿಗದಿ ಮಾಡುವ ಬಗ್ಗೆ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳುವುದು ಮೊದಲ ಸೂತ್ರ. ಅದನ್ನು ಒಪ್ಪದವರು ನ್ಯಾಯಮೂರ್ತಿ ಪದ್ಮರಾಜ ಸಮಿತಿಯ ಶಿಫಾರಸು ಒಪ್ಪಿಕೊಳ್ಳಬಹುದು ಎಂಬುದು ಎರಡನೇ ಸೂತ್ರ.ಪದ್ಮರಾಜ ಸಮಿತಿಯ ವರದಿ ಇನ್ನೂ ಬಹಿರಂಗ ಆಗಿಲ್ಲ. ಆದರೆ ಸಮಿತಿಯ ವರದಿಯನ್ನು ಒಪ್ಪಿಕೊಳ್ಳುವುದರಿಂದ ಹೆಚ್ಚಿನ ಲಾಭ ಆಗಬಹುದು ಎಂಬ ಯೋಚನೆಯಲ್ಲಿರುವ ಶಿಕ್ಷಣ ಸಂಸ್ಥೆಗಳು ರೂ 32,500 ಶುಲ್ಕ ನಿಗದಿಗೆ ಒಲವು ತೋರಿಲ್ಲ. ತಾನು ಮುಂದಿಟ್ಟಿರುವ ಸೂತ್ರ ಒಪ್ಪಿಕೊಳ್ಳುವ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ನಾಲ್ಕು ದಿನಗಳ ಹಿಂದೆ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಪತ್ರ ಬರೆದಿದೆ.ವೈದ್ಯಕೀಯದಲ್ಲೂ ಸಮಸ್ಯೆ:

ಶೇಕಡ 40:60ರ ಅನುಪಾತದಲ್ಲಿ ಸೀಟು ಹಂಚಿಕೆ ಮಾಡಿಕೊಳ್ಳಲು ಸರ್ಕಾರ ಮತ್ತು ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಸಹಮತಕ್ಕೆ ಬಂದಿದ್ದವು. ಆದರೆ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಈ ಸಂಬಂಧ ಒಪ್ಪಂದ ಏರ್ಪಟ್ಟಿರಲಿಲ್ಲ. ಈಗ ಎಂಜಿನಿಯರಿಂಗ್ ಸೀಟು ಹಂಚಿಕೆ ಗೊಂದಲ ಮುಂದುವರಿದಿರುವುದರಿಂದ ವೈದ್ಯ ಕಾಲೇಜುಗಳೂ ಪದ್ಮರಾಜ ಸಮಿತಿಯ ವರದಿ ಆಧಾರದಲ್ಲೇ ಶುಲ್ಕ ನಿಗದಿಗೆ ಪಟ್ಟುಹಿಡಿಯಲು ಸಿದ್ಧತೆ ನಡೆಸಿವೆ.ಸಮಿತಿಯ ವರದಿ ಅನುಷ್ಠಾನಗೊಂಡರೆ ಸದ್ಯ ಇರುವುದಕ್ಕಿಂತಲೂ ಹೆಚ್ಚಿನ ಶುಲ್ಕ ನಿಗದಿ ಆಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಂಸ್ಥೆಗಳೂ ಯೋಚಿಸುತ್ತಿವೆ. ಇದರಿಂದಾಗಿ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಯ ಸಂಬಂಧ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳದೇ ಕಾದುನೋಡುವ ತಂತ್ರದ ಮೊರೆಹೋಗಲು ನಿರ್ಧರಿಸಿವೆ.ಈ ಮಧ್ಯೆಯೇ ಪದ್ಮರಾಜ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವಂತೆ ಕಾಮೆಡ್-ಕೆ ಒಕ್ಕೂಟದ ಮುಖಂಡ, ಮಾಜಿ ಸಂಸದ ಆರ್.ಎಲ್.ಜಾಲಪ್ಪ ಮತ್ತು ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಇದರಿಂದಾಗಿ ವಿವಾದಕ್ಕೆ ಮತ್ತೊಂದು ತಿರುವು ದೊರೆತಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಯ ಗೊಂದಲ ಇನ್ನೂ ಕೆಲ ದಿನಗಳ ಕಾಲ ಕಗ್ಗಂಟಾಗಿಯೇ ಮುಂದುವರಿಯುವ ಲಕ್ಷಣಗಳಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.