ಭಾನುವಾರ, ಡಿಸೆಂಬರ್ 15, 2019
19 °C

ಮುಗಿದ ಪರೀಕ್ಷೆ: ಮೋಜಿಗೆ ಹೊರಟ ಮೂವರು ಮಸಣಕ್ಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರೀಕ್ಷೆ ಮುಗಿದ ಸಂಭ್ರಮದಲ್ಲಿ ಮೋಜಿನ ಸುತ್ತಾಟಕ್ಕೆ ಹೊರಟಿದ್ದ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳ ಕಾರು ಚಂದಾಪುರ ಮೇಲ್ಸೇತುವೆಯಲ್ಲಿ ಬುಧವಾರ ರಾತ್ರಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಎಲ್‌ಎಲ್‌ಬಿ ವಿದ್ಯಾರ್ಥಿನಿಯರಾದ ಸುಜಾನಾ (22), ಸಂಗೀತಾ (22) ಹಾಗೂ ಹೋಟೆಲ್ ಮ್ಯಾನೆಜ್‌ಮೆಂಟ್ ವ್ಯಾಸಂಗ ಮಾಡುತ್ತಿದ್ದ ಆಸಿಫ್ (22) ಮೃತಪಟ್ಟವರು. ಘಟನೆಯಲ್ಲಿ ಡೆರಿನ್ ಎಂಬುವರು ಗಾಯಗೊಂಡಿದ್ದು, ಅವರು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡೆರಿನ್ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ಹೇಳಿದ್ದಾರೆ.ಸುಜಾನಾ ಅವರು ಶೃಂಗೇರಿಯ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರ ಪುತ್ರಿಯಾಗಿದ್ದು, ಸಂಗೀತಾ ಪಶ್ಚಿಮ ಬಂಗಾಳ ಮೂಲದವರು. ವಿದ್ಯಾರ್ಥಿಗಳು ನಗರದ ವಿವಿಧೆಡೆ ಪೇಯಿಂಗ್ ಗೆಸ್ಟ್ ಆಗಿದ್ದರು.`ಮಂಗಳವಾರ ಪರೀಕ್ಷೆ ಮುಗಿದ ಕಾರಣ ಸ್ನೇಹಿತರೆಲ್ಲಾ ಮೋಜಿನ ಸುತ್ತಾಟಕ್ಕೆ ನಿರ್ಧರಿಸಿದ್ದೆವು. ಹೀಗಾಗಿ ತಂದೆಯ ಸ್ಕಾರ್ಫಿಯೋ ಕಾರನ್ನು ತೆಗೆದುಕೊಂಡು ಬಂದಿದ್ದೆ. ಸಂಜೆ ಕೋರಮಂಗಲದಲ್ಲಿ ಊಟ ಮುಗಿಸಿ ತಡರಾತ್ರಿ ತಮಿಳುನಾಡಿನ ಕೃಷ್ಣಗಿರಿಗೆ ಹೋಗುವಾಗ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ವಾಹನ ಗುದ್ದಿಸಿದೆ. ಆ ನಂತರ ಏನಾಯಿತು ಎಂಬುದು ನನಗೆ ಗೊತ್ತಿಲ್ಲ ಎಂದು ಗಾಯಾಳು ಡೆರಿನ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ' ಎಂದು ಪೊಲೀಸರು ಹೇಳಿದರು.`ಕಾರು ಚಾಲನೆ ಮಾಡುತ್ತಿದ್ದ ಡೆರಿನ್, ಮೊದಲು ರಸ್ತೆ ವಿಭಜಕಕ್ಕೆ ವಾಹನ ಗುದ್ದಿಸಿದ್ದಾರೆ. ನಂತರ ಕಾರು ಅಡ್ಡಾದಿಡ್ಡಿಯಾಗಿ ಚಲಿಸಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಾಪಸ್ ರಸ್ತೆ ಮೇಲೆ ಉರುಳಿ ಬಿದ್ದಿದೆ. ಇದೇ ವೇಳೆ ಬಂದ ಲಾರಿ ಆ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಸಿಫ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಸಂಗೀತಾ ಮತ್ತು ಸುಜಾನಾ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ' ಎಂದು ಪೊಲೀಸರು ಹೇಳಿದ್ದಾರೆ.ಡೆರಿನ್ ಅಜಾಗರೂಕತೆಯಿಂದ ಹಾಗೂ ಅತಿ ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದರು.`ನಾನು 40 ಕಿ.ಮೀ ವೇಗದಲ್ಲಿ ಲಾರಿ ಚಾಲನೆ ಮಾಡುತ್ತಿದ್ದೆ. ಈ ವೇಳೆ ಕೆಂಪು ಬಣ್ಣದ ಸ್ಕಾರ್ಪಿಯೊ ಕಾರು  (ಕೆ.ಎ. 01-ಎಂಜಿ-44) ಕನಿಷ್ಠ 100 ಕಿ.ಮೀ ವೇಗದಲ್ಲಿ ಎದುರಿನಿಂದ ಬರುತ್ತಿತ್ತು. ನೋಡು ನೋಡುತ್ತಲೇ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಲಾರಿಯ ಚಕ್ರಕ್ಕೆ ಸಿಲುಕಿತು. ಕೂಡಲೇ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಕಾರಿನಿಂದ ಹೊರಗೆ ತೆಗೆದು ಆಸ್ಪತ್ರೆಗೆ ದಾಖಲಿಸಿದೆ' ಎಂದು ಲಾರಿ ಚಾಲಕ ವೆಂಕಟೇಶ್ ವಿಚಾರಣೆ ವೇಳೆ ಹೇಳಿದ್ದಾಗಿ ಪೊಲೀಸರು ತಿಳಿಸಿದರು. ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)