ಮುಗಿಯದ ಕಾಮಗಾರಿ: ತಪ್ಪದ ಗೋಳು

ತುಮಕೂರು: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಸಿದ್ದಿ ವಿನಾಯಕ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಅರ್ಧ ಕಿಲೋ ಮೀಟರ್ ದೂರದ ರಸ್ತೆ ಕಾಮಗಾರಿ ವರ್ಷ ಮುಗಿದರೂ ಪೂರ್ಣಗೊಳ್ಳದಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ.
ಗುಬ್ಬಿ ವೀರಣ್ಣ ರಂಗಮಂದಿರದಿಂದ ಅಶೋಕ ರಸ್ತೆಗೆ ತೆರಳುವಾಗ ಪ್ರಶಾಂತ ಚಲನಚಿತ್ರ ಮಂದಿರದ ಬಳಿ ರಸ್ತೆ ಸಂಪರ್ಕಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಕಡಿದಾದ ಇಳಿಜಾರಿದೆ. ಅಶೋಕ ರಸ್ತೆಯಲ್ಲಿ ಸದಾ ವಾಹನಗಳು ಸಂಚರಿಸುತ್ತಿದ್ದು, ಈ ಇಳಿಜಾರು ತೀವ್ರ ಅಪಾಯ ಒಡ್ಡಿದೆ. ಈ ಜಾಗದಲ್ಲಿ ರಸ್ತೆಗೆ ಸಂಪರ್ಕ ಕಲ್ಪಿಸಲು ತುರ್ತು ಕಾಮಗಾರಿ ನಡೆಸಬೇಕಿದೆ.
ಅವ್ಯವಸ್ಥೆಯ ಆಗರವಾಗಿದ್ದ ಈ ರಸ್ತೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಚಾಲನೆ ದೊರೆತು ವರ್ಷ ಗತಿಸಿದೆ. ತಿಂಗಳು ಉರುಳಿವೆ ಹೊರತು; ಕಾಮಗಾರಿ ಮಾತ್ರ ಮುಗಿದಿಲ್ಲ.
ಕಳೆದ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಆರಂಭವಾದ ಕಾಮಗಾರಿ; ಲೋಕಸಭೆ ಚುನಾವಣೆ ಸಮೀಪಿಸಿದರೂ ಪೂರ್ಣಗೊಂಡಿಲ್ಲ. ಕಾಮಗಾರಿ ಆರಂಭಕ್ಕೂ ಮುನ್ನ ಈ ರಸ್ತೆಯಲ್ಲಿ ಸಂಚಾರ ಅಸಾಧ್ಯ ಎಂಬಂಥ ಸನ್ನಿವೇಶ ಸೃಷ್ಟಿಯಾಗಿತ್ತು.
ಖಾಸಗಿ ಬಸ್ ನಿಲ್ದಾಣ ಇದೇ ರಸ್ತೆಯಲ್ಲಿದ್ದಾಗ ಪ್ರಯಾಣಿಕರು ನೆಲಕ್ಕೆ ಕಾಲಿಡಲು ಸಾಧ್ಯವಿಲ್ಲ ಎಂಬಂಥ ಸ್ಥಿತಿಯಿತ್ತು. ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಸಾಮ್ರಾಜ್ಯ. ಮಳೆ ಬಂದರೆ ಕೆಸರು, ಬಿಸಿಲಿದ್ದರೇ ದೂಳು.
ಹಲ ವರ್ಷಗಳ ಬೇಡಿಕೆಗೆ ಮನ್ನಣೆ ನೀಡಿದ ನಗರಾಡಳಿತ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿತು. ಕಾಮಗಾರಿ ನಿರ್ವಹಿಸುತ್ತಿದ್ದ ಮೇಸ್ತ್ರಿಯನ್ನು ರಸ್ತೆ ಬದಿ ವ್ಯಾಪಾರಿ ಕೃಷ್ಣಮೂರ್ತಿ ಎಂಬುವರು ಆರು ತಿಂಗಳೊಳಗೆ ಸಂಚಾರಕ್ಕೆ ರಸ್ತೆ ಲಭ್ಯವಾಗುತ್ತದೆಯೇ ಎಂದು ಪ್ರಶ್ನಿಸಿದ್ದಕ್ಕೆ, ಆತ ಎರಡು ವರ್ಷದಲ್ಲಿ ಮುಗಿದರೆ ನಿಮ್ಮ ಪುಣ್ಯ ಎಂದು ಪ್ರತಿಕ್ರಿಯೆ ನೀಡಿದ್ದ.
ಅದರಂತೆ ಈಗಾಗಲೇ ಕಾಮಗಾರಿ ಆರಂಭಗೊಂಡು ಒಂದೂವರೆ ವರ್ಷ ಕಳೆದಿದೆ. ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ ಕಾಮಗಾರಿ ಪೂರ್ಣಗೊಳ್ಳುವುದು ಮೇಸ್ತ್ರಿ ಹೇಳಿದ ಸಮಯ ಮೀರುತ್ತದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರತಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಚನಾ ಫಲಕ ಇರಬೇಕು ಎಂಬ ನಿಯಮವಿದ್ದರೂ; ಈ ರಸ್ತೆ ಆರಂಭ–ಕೊನೆಯಲ್ಲಿ ಎಲ್ಲೂ ಸೂಚನಾ ಫಲಕವಿಲ್ಲ. ಗುತ್ತಿಗೆದಾರ, ಕಾಮಗಾರಿ ಮೊತ್ತ, ಮುಗಿಸಬೇಕಾದ ಅವಧಿ ಯಾವ ಮಾಹಿತಿಯೂ ಸಾರ್ವಜನಿಕರಿಗೆ ಲಭ್ಯವಿಲ್ಲ.
ರಸ್ತೆಯಲ್ಲಿರುವ ಗುಬ್ಬಿ ವೀರಣ್ಣ ರಂಗಮಂದಿರ ನಿತ್ಯ ಚಟುವಟಿಕೆಯಿಂದ ಕೂಡಿರುತ್ತದೆ. ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ಬಹುತೇಕ ಚಟುವಟಿಕೆಗಳು ನಡೆಯುವ ಕೇಂದ್ರ ತಾಣ. ಸರ್ಕಾರಿ ಕಾರ್ಯಕ್ರಮ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಸಮಾರಂಭ, ಹಲ ಶಾಲೆಗಳ ವಾರ್ಷಿಕೋತ್ಸವವೂ ಇಲ್ಲಿ ನಡೆಯುತ್ತವೆ. ವಾರದ ರಜೆ ದಿನಗಳಲ್ಲಿ ನಾಟಕವೂ ನಡೆಯುತ್ತದೆ.
ವಾಹನ ಸಂಚಾರ ಸೇರಿದಂತೆ ಜನ ದಟ್ಟಣೆಯೂ ಈ ರಸ್ತೆಯಲ್ಲಿ ಹೆಚ್ಚಿದೆ. ಶಾಲಾ ಕಾರ್ಯಕ್ರಮಗಳಿದ್ದರಂತೂ; ಮಕ್ಕಳ ಓಡಾಟ ಸದಾ ಇರುತ್ತದೆ. ಇಂಥ ರಸ್ತೆ ಕಾಮಗಾರಿ ಪ್ರಸ್ತುತ ಅರ್ಧ ಭಾಗ ಮಾತ್ರ ಮುಗಿದಿದ್ದು, ಅಪಾಯ ಹೆಚ್ಚಿಸಿದೆ.
ಸಿಮೆಂಟ್ ರಸ್ತೆಯ ಒಂದು ಭಾಗ ಮಣ್ಣಿನ ರಸ್ತೆ. ಮತ್ತೊಂದು ಭಾಗ ತಗ್ಗು ಪ್ರದೇಶ. ಅದರ ಪಕ್ಕ ಒಳಚರಂಡಿಯಿದೆ. ಚರಂಡಿ ಮೇಲೆ ಹಾಗೂ ತಗ್ಗು ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ವ್ಯಾಪಾರಸ್ಥರು ಅಂಗಡಿ ಹಾಕಿದ್ದಾರೆ. ಮಣ್ಣಿನ ರಸ್ತೆ ವಾಹನಗಳ ನಿಲುಗಡೆ ಸ್ಥಳವಾಗಿ ಮಾರ್ಪಟ್ಟಿದೆ. ಜತೆಗೆ ಬೃಹತ್ ವಾಹನಗಳ ಗ್ಯಾರೇಜ್ ಆಗಿದೆ. ರಂಗಮಂದಿರದ ಮುಂಭಾಗ ಕೊಳಚೆ ನೀರು ಸಂಗ್ರಹಗೊಳ್ಳುತ್ತಿದೆ. ಇದ್ಯಾವುದನ್ನು ಪಾಲಿಕೆ ಆಡಳಿತ ಗಮನಿಸಿದಂತಿಲ್ಲ.
ಗುತ್ತಿಗೆದಾರರಿಗೆ ಹಣ ಮಂಜೂರು ಮಾಡದಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಕೆಲವರು ತಿಳಿಸಿದರೆ; ಇನ್ನೂ ಕೆಲವರು ರಸ್ತೆ ವಿಸ್ತರಣೆಗೆ ಪ್ರಶಾಂತ್ ಚಲನಚಿತ್ರ ಮಂದಿರ ಅಡ್ಡಿಯಾಗಿದೆ ಎನ್ನುತ್ತಾರೆ. ವಿಸ್ತರಣೆಗಾಗಿ ಎಲ್ಲೆಡೆ ತೆರವುಗೊಳಿಸಿದ್ದು, ಪ್ರಶಾಂತ್ ಚಲನಚಿತ್ರದ ಕೆಲ ಭಾಗವನ್ನು ತೆರವುಗೊಳಿಸಿಲ್ಲ. ಇದರಿಂದ ಸಮಸ್ಯೆ ಸೃಷ್ಟಿಯಾಗಿದ್ದು, ಕಾಮಗಾರಿ ವಿಳಂಬವಾಗುತ್ತಿದೆ ಎಂದು ರಸ್ತೆ ಬದಿ ವ್ಯಾಪಾರಿ ಕೃಷ್ಣಮೂರ್ತಿ ತಿಳಿಸಿದರು.
ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಮಳೆ ಬಿದ್ದರೆ ಕೆಸರು, ಬೇಸಿಗೆಯಲ್ಲಿ ದೂಳಿನ ಅಭಿಷೇಕ. ಆಗಾಗ್ಗೆ ಸಂಚಾರ ವ್ಯವಸ್ಥೆ ಹಳಿತಪ್ಪುತ್ತದೆ. ವಾಹನಗಳು ಸುಗಮವಾಗಿ ಸಂಚರಿಸಲು ಆಗಲ್ಲ. ಕೆಲವೊಮ್ಮೆ ಚಿಕ್ಕಪುಟ್ಟ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ ಇಮ್ತಿಯಾಜ್.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.