ಮುಗಿಯದ ಗೂಢಚರ್ಯೆ ವಿವಾದ

7

ಮುಗಿಯದ ಗೂಢಚರ್ಯೆ ವಿವಾದ

Published:
Updated:

ವಾಷಿಂಗ್ಟನ್‌ (ಐಎಎನ್‌ಎಸ್‌): ಅಮೆರಿಕವು ತನ್ನ ನಾಗರಿಕರು ಹಾಗೂ ಇತರ ದೇಶಗಳ ವ್ಯವಹಾರಗಳ ಮೇಲೆ ಕಣ್ಣಿಟ್ಟು ಗೂಢಚರ್ಯೆ ಮಾಡುತ್ತಿದೆ ಎಂಬ ವಿವಾದ ಮುಗಿಯುವಂತೆಯೇ ಕಾಣುತ್ತಿಲ್ಲ.ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ) ತನ್ನ ಬ್ರಿಟನ್‌ ಸಹವರ್ತಿ ಸಂಸ್ಥೆ ಜಿಸಿಎಚ್‌ಕ್ಯೂ (ಗವರ್ನ್‌ಮೆಂಟ್‌ ಕಮ್ಯುನಿಕೇಷನ್‌ ಹೆಡ್‌ಕ್ವಾರ್ಟ್‌ರ್ಸ್ ) ಜತೆ ಸೇರಿ ಗೂಗಲ್‌ ಹಾಗೂ ಯಾಹೂಗಳ ಸಂಪರ್ಕ ಜಾಲಗಳ ಮಾಹಿತಿ ಕದ್ದಿತ್ತು ಎಂಬ ವಿಚಾರ ಗುರುವಾರ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.ಗೂಗಲ್‌ ಹಾಗೂ ಯಾಹೂ ಬಳಕೆದಾರರ ಲಕ್ಷಾಂತರ ಇಮೇಲ್‌ ಖಾತೆಗಳ ವಿವರವನ್ನು ಈ ಮೂಲಕ ಅಮೆರಿಕ ಕಲೆ ಹಾಕಿತ್ತು. ಇವುಗಳಲ್ಲಿ ಬಹು ತೇಕ ಖಾತೆಗಳು ಅಮೆರಿಕ ನಾಗರಿಕರದ್ದಾಗಿವೆ ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ತನ್ನ ವಿಶೇಷ ವರದಿಯಲ್ಲಿ ತಿಳಿಸಿದೆ.

ಆದರೆ, ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ ಈ ವರದಿಯನ್ನು ಅಲ್ಲಗಳೆದಿದೆ. ಎನ್‌ಎಸ್‌ಎ ಮುಖ್ಯಸ್ಥ ಕೀತ್‌ ಅಲೆಕ್ಸಾಂಡರ್‌ ಇಂತಹ ಚಟುವಟಿಕೆ ತಮ್ಮ ಗಮನಕ್ಕೆ ಬಂದೇ ಇಲ್ಲ ಎಂದು ಹೇಳಿದ್ದಾರೆ.ಅಮೆರಿಕ ಸರ್ಕಾರ ತನ್ನ ನಾಗರಿಕರ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿರುವ ವಿಚಾರ ಬಯಲಿಗೆ ಎಳೆದಿದ್ದ  ಸಿಐಎ ಮಾಜಿ  ನೌಕರ ಎಡ್ವರ್ಡ್ ಸ್ನೊಡೆನ್‌ ಬಹಿರಂಗಪಡಿಸಿದ್ದ ದಾಖಲೆಗಳಿಂದ ಈ ವಿವರ ಪಡೆದಿರುವುದಾಗಿ ‘ವಾಷಿಂಗ್ಟನ್‌ ಪೋಸ್ಟ್‌’ ಹೇಳಿದೆ.ಪೋನ್‌ ಕದ್ದಾಲಿಕೆ: ಪಾಕ್‌ಗೂ ಆತಂಕ

ಈ ನಡುವೆ, ಅಮೆರಿಕ ಇತರ ದೇಶಗಳ ವ್ಯವಹಾರಗಳ ಮೇಲೆ ಕಣ್ಣಿಟ್ಟಿದೆ ಎಂಬ ವಿಚಾರದ ಕುರಿತು ಹಲವು ದೇಶಗಳು ಆತಂಕ ವ್ಯಕ್ತಪಡಿಸಿವೆ.ಇಸ್ಲಾಮಾಬಾದ್‌ ವರದಿ: ಪಾಕಿಸ್ತಾನದಲ್ಲೂ ದೂರವಾಣಿ ಕದ್ದಾಲಿಕೆ ನಡೆಯುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅಮೆರಿಕದ ಗಮನ ಸೆಳೆಯಲಾಗಿದೆ ಎಂದು ಆ ದೇಶ ಹೇಳಿದೆ.‘ದೇಶದ ಸಾರ್ವಭೌಮತ್ವ ಹಾಗೂ ನಾಗರಿಕರ ಖಾಸಗಿತನಕ್ಕೆ ದೂರವಾಣಿ ಕದ್ದಾಲಿಕೆಯಿಂದ ತೊಂದರೆ ಯಾಗಲಿದೆ. ಆದ್ದರಿಂದ ಅಮೆರಿಕದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿಕೊಳ್ಳುತ್ತೇವೆ’ ಎಂದು ಪಾಕ್‌ ವಿದೇಶಾಂಗ ಸಚಿವ ಅಜೀಜ್‌ ಅಹಮದ್‌ ಚೌಧರಿ ಹೇಳಿದ್ದಾರೆ.ಈ ಮಧ್ಯೆ ನೆದರ್‌ಲೆಂಡ್‌ ಆಂತರಿಕ ಭದ್ರತಾ ಸಚಿವ ರೋನಾಲ್ಡ್‌ ಪ್ಲಾಸ್ಟರ್ಕ್ ಅಮೆರಿಕ ತಮ್ಮ ದೇಶದಲ್ಲೂ ಗೂಢಚರ್ಯೆ ನಡೆಸುತ್ತಿತ್ತು ಎಂದು ಹೇಳಿದ್ದಾರೆ.ನೆದರ್‌ಲೆಂಡ್‌ ನಾಗರಿಕರ ದೂರವಾಣಿ ಹಾಗೂ ಇ–ಮೇಲ್‌ ವ್ಯವಹಾರಗಳ ಮೇಲೆ ಕಣ್ಣಿಟ್ಟಿರುವುದಾಗಿ ಸ್ವತಃ ಎನ್‌ಎಸ್‌ಎ ತಮಗೆ ಪತ್ರ ಬರೆದಿತ್ತು ಎಂದು ಅವರು ತಿಳಿಸಿದ್ದಾರೆ.ರಾಜತಾಂತ್ರಿಕ ಕಚೇರಿ ಮೂಲಕ ಬೇಹುಗಾರಿಕೆ

ಸಿಡ್ನಿ (ಐಎಎನ್‌ಎಸ್):
ಏಷ್ಯಾ ದೇಶಗಳಲ್ಲಿನ ಆಸ್ಟ್ರೇಲಿಯಾ ರಾಜತಾಂತ್ರಿಕ ಕಚೇರಿಗಳ ಮೂಲಕ ಅಮೆರಿಕ ಬೇಹುಗಾರಿಕಾ ಮಾಹಿತಿ ಸಂಗ್ರಹಿಸುತ್ತಿತ್ತು ಎಂಬ ವಿಚಾರ ಈಗ ಬಹಿರಂಗಗೊಂಡಿದೆ.ಆಸ್ಟ್ರೇಲಿಯಾದ ರಾಯಭಾರಿಗಳ ಗಮನಕ್ಕೂ  ಬಾರದಂತೆ ಏಷ್ಯಾದಾದ್ಯಂತ ದೂರವಾಣಿ ಕರೆಗಳ ಹಾಗೂ ದತ್ತಾಂಶಗಳ ಮಾಹಿತಿ ಸಂಗ್ರಹಿಸುವ ಕೆಲಸ ನಡೆಯುತ್ತಿತ್ತು ಎಂದು ಆಸ್ಟ್ರೇಲಿಯಾದ ಫೇರ್‌ಫ್ಯಾಕ್ಸ್‌  ಮಾಧ್ಯಮ ವರದಿ ಮಾಡಿದೆ. ಜಕಾರ್ತ, ಬ್ಯಾಂಕಾಂಕ್‌, ಹನಾಯ್‌, ಬೀಜಿಂಗ್‌, ದೆಹಲಿ ಹಾಗೂ ಕ್ವಾಲಾಲಂಪುರದ ಆಸ್ಟ್ರೇಲಿಯಾ ರಾಯಭಾರ ಕಚೇರಿಗಳಲ್ಲಿ ಬೇಹುಗಾರಿಕೆ ಕೆಲಸ ನಡೆಯುತ್ತಿತ್ತು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry