ಮುಗಿಯದ ದೋನಿ ಬಳಗದ ಸಂಕಟ

7
ಕ್ರಿಕೆಟ್: ದ್ವಿಶತಕ ತಪ್ಪಿಸಿಕೊಂಡ ಕುಕ್, ಆಂಗ್ಲರ ಹಿಡಿತದಲ್ಲಿ ಟೆಸ್ಟ್

ಮುಗಿಯದ ದೋನಿ ಬಳಗದ ಸಂಕಟ

Published:
Updated:

ಕೋಲ್ಕತ್ತ: ಪ್ರವಾಹದ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುವುದನ್ನು ತಪ್ಪಿಸಿಕೊಳ್ಳಲು ಹೆಣಗಾಡುವ ದುರ್ಬಲ ಮರದಂತೆ ಆತಿಥೇಯ ತಂಡದ ಸದ್ಯದ ಪರಿಸ್ಥಿತಿ. ಪಂದ್ಯ ಮುಗಿಯುವ ಮುನ್ನವೇ ಈ ತಂಡದವರು ಅರ್ಧ ಸೋತು ಹೋದವರಂತೆ ಕಾಣುತ್ತಿದ್ದಾರೆ.ಆದರೆ ಆಂಗ್ಲರ ಬಳಗ ಈಗ ಅದಮ್ಯ ಚಿಲುಮೆ. ಶುಕ್ರವಾರ ಮೂರನೇ ದಿನದಾಟದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಂಗ್ಲೆಂಡ್ ತಂಡದ ಜೊನಾಥನ್ ಟ್ರಾಟ್ ನಗುನಗುತ್ತಾ ಖುಷಿಯಲ್ಲಿದ್ದ ಆ ಕ್ಷಣವೇ ಎಲ್ಲವನ್ನೂ ಹೇಳುತ್ತದೆ. ಅದೊಂಥರ ದೀಪದ ನರ್ತನ ನೋಡಿ ನಸುನಗುವ ಗಾಳಿಯಂತೆ!ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಪ್ರವಾಸಿ ತಂಡದವರು ಈಡನ್ ಗಾರ್ಡನ್ಸ್ ಅಂಗಳದಲ್ಲಿ ತೋರುತ್ತಿರುವ ಅದ್ಭುತ ಆಟ ದೋನಿ ಬಳಗವನ್ನು ದಂಗುಬಡಿಸಿದೆ. ಈ ಪಂದ್ಯ ಸಾಗುತ್ತಿರುವ ಪರಿ ನೋಡಿದರೆ ಇಂಗ್ಲೆಂಡ್ ತಂಡದ ನಾಯಕ ಕುಕ್ ಗೆಲುವಿಗಾಗಿ ಹಂಬಲಿಸುತ್ತಿದ್ದರೆ, ಭಾರತ ತಂಡದ ನಾಯಕ ದೋನಿ ಸೋಲು ತಪ್ಪಿಸಿಕೊಳ್ಳಲು ಚಡಪಡಿಸುತ್ತಿರುವಂತಿದೆ.ಇಂಗ್ಲಿಷರು ಈಗ 193 ರನ್‌ಗಳ ಮುನ್ನಡೆ ಸಾಧಿಸಿದ್ದಾರೆ. ಭಾರತದ ಮೊದಲ ಇನಿಂಗ್ಸ್‌ನ 316 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 163 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 509 ರನ್ ಗಳಿಸಿದೆ. ಇನ್ನೂ ಎರಡು ದಿನಗಳ ಆಟ ಬಾಕಿ ಇದೆ. ಹಾಗಾಗಿ ತಿರುಗೇಟು ನೀಡಲು ದೋನಿ ಬಳಗಕ್ಕೆ ತುಂಬಾ ಕಷ್ಟವಿದೆ.

ಭಾರತದ ನೆಲದಲ್ಲಿ 27 ವರ್ಷಗಳ ಬಳಿಕ ಸರಣಿ ಗೆಲ್ಲುವ ಕನಸಿನಲ್ಲಿರುವ ಪ್ರವಾಸ ತಂಡದವರ ಪಾಲಿಗೆ ಎಲ್ಲವೂ ತಾವು ಅಂದುಕೊಂಡಂತೆ ನಡೆಯುತ್ತಿದೆ. ಆದರೆ ಆತಿಥೇಯರ ಪರಿಸ್ಥಿತಿ ಅಧೋಗತಿ. ಅವರ ಹತಾಶೆ ಹಾಗೂ ಅಸಹಾಯಕತೆಯ ವೈಖರಿಯನ್ನು ದೇಹಭಾಷೆಯೇ ಹೇಳುತ್ತದೆ.ಈ ಆಟಗಾರರು ಸಂಜೆ ಆಟ ಮುಗಿದ ಮೇಲೆ ಫಿಜಿಯೋ ಕೊಠಡಿಗೆ ನಡೆದು ಹೋಗಲೂ ಶಕ್ತಿ ಇಲ್ಲದವರಂತೆ ವರ್ತಿಸಿದರು. ಪೆವಿಲಿಯನ್ ಮುಂದೆಯೇ ಅಂಗಳಕ್ಕೆ ಮುಖಮಾಡಿ 20 ನಿಮಿಷ ಮಲಗಿಕೊಂಡರು. ಅಲ್ಲಿಗೇ ಫಿಜಿಯೊ ಹಾಗೂ ಮಸಾಜರ್ ವೈದ್ಯಕೀಯ ಪೆಟ್ಟಿಗೆ ಹಾಗೂ ಟವೆಲ್ ಹಿಡಿದುಕೊಂಡು ಬಂದರು.ಸುಲಭ ಕ್ಯಾಚ್ ಬಿಟ್ಟ ಇಶಾಂತ್: ಭರ್ಜರಿ ಫಾರ್ಮ್‌ನಲ್ಲಿರುವ ಕುಕ್ ನೀಡಿದ ಸುಲಭ ಕ್ಯಾಚ್‌ವೊಂದನ್ನು ವೇಗಿ ಇಶಾಂತ್ ಶರ್ಮ ಕೈಚೆಲ್ಲಿದ್ದು ಭಾರತ ತಂಡದವರ ಕೆಟ್ಟ ಫೀಲ್ಡಿಂಗ್‌ಗೆ ಪ್ರಮುಖ ಸಾಕ್ಷಿ. ಇಂಗ್ಲೆಂಡ್ ತಂಡದ ನಾಯಕ 156 ರನ್ ಗಳಿಸಿದ್ದಾಗ ಇಶಾಂತ್ ತಮ್ಮದೇ ಬೌಲಿಂಗ್‌ನಲ್ಲಿ ಅಂಥದ್ದೊಂದು ಎಡವಟ್ಟು ಎಸಗಿದರು.`ಅಂಗಳದಲ್ಲಿದ್ದಿದ್ದರೆ ಇಶಾಂತ್ ಅವರ ಅಜ್ಜಿ ಕೂಡ ಆ ಕ್ಯಾಚ್ ಪಡೆಯುತ್ತಿದ್ದರೇನೊ? ಅಷ್ಟೊಂದು ಸುಲಭದ ಕ್ಯಾಚ್ ಅದು' ಎಂದು ಟ್ವೀಟರ್‌ನಲ್ಲಿ ಕ್ರಿಕೆಟ್ ಪ್ರೇಮಿಯೊಬ್ಬರು ತಮಾಷೆ ಮಾಡುವಷ್ಟು ಕೆಟ್ಟದಾಗಿತ್ತು ಇಶಾಂತ್ ಫೀಲ್ಡಿಂಗ್.

ಅವರು ಒಂಟಿ ರನ್ ನೀಡುವ ಜಾಗದಲ್ಲಿ ಎರಡು ರನ್‌ಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಇಶಾಂತ್, ಜಹೀರ್‌ಗಿಂತ 39 ವರ್ಷ ವಯಸ್ಸಿನ ತೆಂಡೂಲ್ಕರ್ ಚುರುಕಿನಿಂದ ಅಂಗಳದಲ್ಲಿ ಓಡಾಡುತ್ತಾ ಜೋರಾಗಿ ಚೆಂಡನ್ನು ಎಸೆಯುತ್ತಿದ್ದರು.`ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅಂಗಳದಲ್ಲಿ ಇರುವವರೆಗೆ ಶೇಕಡಾ 100ರಷ್ಟು ಬದ್ಧತೆ ಪ್ರದರ್ಶಿಸಿ' ಎಂದು ನಾಯಕರಾಗಿದ್ದ ಅವಧಿಯಲ್ಲಿ ದ್ರಾವಿಡ್ ಪದೇಪದೇ ಹೇಳುತ್ತಿದ್ದರು. ಆದರೆ ಇಶಾಂತ್, ಜಹೀರ್ ಅವರ ಕ್ಷೇತ್ರ ರಕ್ಷಣೆ ನೋಡಿ ಈಗ ದ್ರಾವಿಡ್ ಕೂಡ ತಮ್ಮ ಮನಸ್ಸಿನಲ್ಲಿಯೇ ಬೇಸರಪಟ್ಟುಕೊಳ್ಳುತ್ತಿರಬಹುದು.ಕುಕ್ (190; 377 ಎ., 492 ನಿ., 23 ಬೌಂ., 2 ಸಿ.) ಬೆಳೆದು ನಿಲ್ಲಲು ಕಾರಣವಾಗಿದ್ದೇ ಭಾರತದ ಕೆಟ್ಟ ಫೀಲ್ಡಿಂಗ್. ಕುಕ್ 17 ರನ್ ಗಳಿಸಿದ್ದಾಗ ಪೂಜಾರ ಕೈಚೆಲ್ಲಿದ್ದರು. ಎರಡು ರನ್‌ಔಟ್ ಅಪಾಯದಿಂದ ಪಾರಾಗಿದ್ದರು. ಶುಕ್ರವಾರ ಇಶಾಂತ್ ಕ್ಯಾಚ್ ಕೈಚೆಲ್ಲಿದರು.ಹಾಗಾಗಿ ಈ ಪಂದ್ಯ ಉಳಿಸಿಕೊಳ್ಳುವ ಭಾರತದ ಆಸೆ ಪಕ್ಕದಲ್ಲೇ ಇರುವ ಹೂಗ್ಲಿ ನದಿಯಲ್ಲಿ ಕೊಚ್ಚಿ ಹೋಗುವ ರೀತಿ ಕಾಣುತ್ತಿದೆ. ಆದರೆ ಪ್ರವಾಸಿ ತಂಡವೀಗ ಭಾರತದ ನೆಲದಲ್ಲಿ ಐತಿಹಾಸಿಕ ಸಾಧನೆಯ ಕನಸು ಕಾಣುತ್ತಿದೆ.ಬೌಲರ್‌ಗಳನ್ನು ಕಾಡಿದ ಕುಕ್: ಹಲವು ದಾಖಲೆ ಮುರಿದಿರುವ ಅಲಸ್ಟೇರ್ ಈ ಸರಣಿಯಲ್ಲಿ ಈಗಾಗಲೇ 26 ಗಂಟೆಗೂ ಅಧಿಕ ಸಮಯ ಬ್ಯಾಟ್ ಮಾಡಿದ್ದಾರೆ. ಮೂರು ಟೆಸ್ಟ್ ಪಂದ್ಯಗಳಿಂದ 136 ಸರಾಸರಿಯಲ್ಲಿ 547 ರನ್ ಗಳಿಸಿದ್ದಾರೆ. ವಿವಾದಾತ್ಮಕ ರನ್‌ಔಟ್‌ಗೆ ಅವರು ಒಳಗಾಗದೆ ಇದ್ದಿದ್ದರೆ ಭಾರತದ ಬೌಲರ್‌ಗಳಿಗೆ ಅವರನ್ನು ಔಟ್ ಮಾಡಲು ಕಷ್ಟವಿತ್ತು.ಜಹೀರ್ ಎಸೆತವನ್ನು ಪೀಟರ್ಸನ್ ಸ್ಕ್ವೇರ್ ಲೆಗ್‌ನತ್ತ ಅಟ್ಟಿದರು. ಅಲ್ಲಿ ಫೀಲ್ಡ್ ಮಾಡುತ್ತಿದ್ದ ಕೊಹ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದು ವಿಕೆಟ್‌ನತ್ತ ಎಸೆದರು. ಆದರೆ ಚೆಂಡು ತಮ್ಮ ಮೇಲೆ ಬೀಳಬಹುದು ಎಂಬ ಆತಂಕದಿಂದ ಕುಕ್ ಕ್ರೀಸ್‌ನಿಂದ ಹಿಂದೆ ಸರಿದರು. ಅವರ ದುರದೃಷ್ಟ. ಚೆಂಡು ನೇರವಾಗಿ ವಿಕೆಟ್‌ಗೆ ಅಪ್ಪಳಿಸಿತು. ನಾನ್ ಸ್ಟ್ರೈಕ್ ತುದಿಯಲ್ಲಿದ್ದ ಅಲಸ್ಟೇರ್ ಇನ್ನು ಕ್ರೀಸ್‌ನೊಳಗೆ ಬ್ಯಾಟ್ ಇಟ್ಟಿರಲಿಲ್ಲ.ಆತಿಥೇಯ ತಂಡದ ಕಳಪೆ ಫೀಲ್ಡಿಂಗ್ ಹಾಗೂ ಸುಸ್ತೆದ್ದು ಹೋಗಿರುವ ಬೌಲರ್‌ಗಳ ಪರಿಸ್ಥಿತಿಯನ್ನು ಕುಕ್ ಹಾಗೂ ಟ್ರಾಟ್ (87; 223 ಎ., 242 ನಿ.,10 ಬೌಂ.) ಚೆನ್ನಾಗಿಯೇ ಸದುಪಯೋಗಿಸಿಕೊಂಡರು. ಅಲಸ್ಟೇರ್ ಹಾಗೂ ಟ್ರಾಟ್ ಎರಡನೇ ವಿಕೆಟ್‌ಗೆ 173 ರನ್ ಸೇರಿಸಿದರು.ಮುಂಬೈ ಟೆಸ್ಟ್‌ನ ಗೆಲುವಿನ ಹೀರೊ ಪೀಟರ್ಸನ್ (54) ಕ್ರೀಸ್‌ಗೆ ಆಗಮಿಸುತ್ತಿದ್ದಂತೆ ಚೆಂಡನ್ನು ಎತ್ತಲು ಪ್ರಯತ್ನಿಸಿದರು. ಸಮಿತ್ ವಿಕೆಟ್ ಪತನದ ಬಳಿಕ ಬಂದ ಸ್ವಾನ್ ಕೂಡ ಪ್ರಯೋರ್ ಜೊತೆಗೂಡಿ ಮುರಿಯದ ಏಳನೇ ವಿಕೆಟ್‌ಗೆ 56 ರನ್ ಸೇರಿಸ್ದ್ದಿದಾರೆ.ಆಫ್ ಸ್ಪಿನ್ನರ್ ಅಶ್ವಿನ್ 52 ಓವರ್ ಮಾಡಿದರೂ ಸಿಕ್ಕಿದ್ದು ಒಂದೇ ವಿಕೆಟ್. ಕುಕ್ ಅವರನ್ನು ಕೊಹ್ಲಿ ರನ್‌ಔಟ್ ಮಾಡಿದ ರೀತಿ ಹಾಗೂ ಸೆಹ್ವಾಗ್ ಮೊದಲ ಸ್ಲಿಪ್‌ನಲ್ಲಿ ಸಮಿತ್ ನೀಡಿದ ಕ್ಯಾಚ್ ಪಡೆದ ಪರಿ ಹೊರತುಪಡಿಸಿದರೆ ಭಾರತಕ್ಕೆ ಹೇಳಿಕೊಳ್ಳುವಂಥ ದಿನವಾಗಿರಲಿಲ್ಲ.  ಸ್ಕೋರ್ ವಿವರ

ಭಾರತ ಮೊದಲ ಇನಿಂಗ್ಸ್ 105 ಓವರ್‌ಗಳಲ್ಲಿ 316

ಇಂಗ್ಲೆಂಡ್ ಮೊದಲ ಇನಿಂಗ್ಸ್ 163 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 509

(ಗುರುವಾರ 73 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 216)

ಅಲಸ್ಟೇರ್ ಕುಕ್ ರನ್‌ಔಟ್ (ಕೊಹ್ಲಿ)  190

ಜೊನಾಥನ್ ಟ್ರಾಟ್ ಸಿ ದೋನಿ ಬಿ ಪ್ರಗ್ಯಾನ್ ಓಜಾ 87

ಕೆವಿನ್ ಪೀಟರ್ಸನ್ ಎಲ್‌ಬಿಡಬ್ಲ್ಯು ಬಿ ಆರ್.ಅಶ್ವಿನ್ 54

ಇಯಾನ್ ಬೆಲ್ ಸಿ ದೋನಿ ಬಿ ಇಶಾಂತ್ ಶರ್ಮ  05

ಸಮಿತ್ ಪಟೇಲ್ ಸಿ ವೀರೇಂದ್ರ ಸೆಹ್ವಾಗ್ ಬಿ     ಪ್ರಗ್ಯಾನ್ ಓಜಾ  33

ಮಟ್ ಪ್ರಯೋರ್ ಬ್ಯಾಟಿಂಗ್  40

ಗ್ರೇಮ್ ಸ್ವಾನ್ ಬ್ಯಾಟಿಂಗ್  21

ಇತರೆ (ನೋಬಾಲ್-5, ಬೈ-13, ಲೆಗ್‌ಬೈ-4)  22

ವಿಕೆಟ್ ಪತನ: 1-165 (ಕಾಂಪ್ಟನ್; 52.6); 2-338 (ಟ್ರಾಟ್; 119.2); 3-359 (ಕುಕ್; 126.5); 4-395

(ಬೆಲ್; 136.5); 5-420 (ಪೀಟರ್ಸನ್; 143.2); 6-453 (ಸಮಿತ್; 149.6)

ಬೌಲಿಂಗ್: ಜಹೀರ್ ಖಾನ್ 29-6-82-0, ಇಶಾಂತ್ ಶರ್ಮ 29-8-78-1, ಆರ್.ಅಶ್ವಿನ್ 52-9-183-1, ಪ್ರಗ್ಯಾನ್

​ ಓಜಾ 50-10-140-3, ಯುವರಾಜ್ ಸಿಂಗ್ 3-1-9-0

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry