ಮುಗಿಯದ ಸೇತುವೆ ಕಾಮಗಾರಿ: ನೀಗದ ಭರವಸೆ

7

ಮುಗಿಯದ ಸೇತುವೆ ಕಾಮಗಾರಿ: ನೀಗದ ಭರವಸೆ

Published:
Updated:
ಮುಗಿಯದ ಸೇತುವೆ ಕಾಮಗಾರಿ: ನೀಗದ ಭರವಸೆ

ಶಿರಹಟ್ಟಿ: ಪಟ್ಟಣದ ಕೆಳಗೇರಿ ಓಣಿಯಲ್ಲಿ ಆರಂಭಗೊಂಡ ಸೇತುವೆ ಕಾಮಗಾರಿ ಕಳೆದ ಎರಡು ವರ್ಷಗಳಿಂದ ಪೂರ್ಣಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದ ಜನತೆಯ ಬಹುದಿನಗಳ ಬೇಡಿಕೆಯಾದ ಸೇತುವೆ ಆರಂಭ ವಾದಾಗ ಹರ್ಷಪಟ್ಟಿದ್ದರು. ಆದರೆ ಈಗ ಕಾಮಗಾರಿಯ ನಿಧಾನ ಗತಿಯನ್ನು ಕಂಡು ನಿರಾಸೆಪಡು ವಂತಾಗಿದೆ.

ಪಟ್ಟಣದಿಂದ ಜಿಲ್ಲಾ ಸ್ಥಳವಾದ ಗದಗ ನಗರಕ್ಕೆ ನಿತ್ಯ ಸಂಚರಿಸಲು ಅನುಕೂಲಕರವಾಗಿರುವ ಈ ಮುಖ್ಯ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ತಗ್ಗುದಿನ್ನೆಗಳಿಂದ ಆವೃತವಾಗಿರುವ ಮತ್ತು ದುರಸ್ಥೆಯಲ್ಲಿರುವ ಈಗಿನ ರಸ್ತೆಯಲ್ಲಿ ಪ್ರಯಾಣಿಸಲು ಭಯಪಡುವಂತಹ ಪರಸ್ಥಿತಿ ಬಂದೊದಗಿದ್ದರೂ ಸಂಬಂಧಿಸಿದವರು ಕ್ಯಾರೇ ಎನ್ನುತ್ತಿಲ್ಲ.

ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಡಿಯಲ್ಲಿ ನಡೆಯುತ್ತಿರುವ ಸೇತುವೆ ಹಲವಾರು ವಿಘ್ನಗಳನ್ನು ಎದುರಿಸಿ ಮುನ್ನೆಡೆದರೂ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ.

ಸೇತುವೆಯ ಎರಡು ಕಡೆ ಪಿಲ್ಲರ್‌ಗಳ ನಿರ್ಮಾಣ, ಸಮತಟ್ಟು, ಡಾಂಬರೀಕರಣ ಸೇರಿದಂತೆ ಕಾಮಗಾರಿಯ ಹಲವಾರು ಕೆಲಸಗಳು ಬಾಕಿ ಇದ್ದು, ಈಗಾಗಲೇ ಕನಿಷ್ಠ ಆರು ತಿಂಗಳು ಗತಿಸಿದರೂ ಗುತ್ತಿಗೆದಾರರು ಇತ್ತ ಗಮನ ನೀಡುವ ಕುರಿತು ಯೋಚಿಸದಿರುವುದು ವಿಪರ್ಯಾಸದ ಸಂಗತಿ. 

ರಸ್ತೆ ಮೇಲೆ ಸುಗಮವಾಗಿ ಪ್ರಯಾಣಿಸಲು ಆಗದಂತಹ ಸ್ಥಿತಿಯಲ್ಲಿ ಇದ್ದಾಗ ಅಲ್ಲಲ್ಲಿ ಮಣ್ಣನ್ನು ಹಾಕಿ ತೇಪೆ ಕೆಲಸ ಮಾಡಿ ತನ್ನ ಕರ್ತವ್ಯ ಮುಗಿಯಿತು ಎಂದು ಜಿಲ್ಲಾ ಲೋಕೋಪಯೋಗಿ ಇಲಾಖೆ ‘ಕೈತೊಳೆದುಕೊಳ್ಳುವ ಸಂಪ್ರದಾಯ’ ಮುಂದುವರಿಸುತ್ತಲೇ ಇದೆ.  

 

ಗುತ್ತಿಗೆದಾರರ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಕುಂಟುತ್ತ ತೆವಳುತ್ತ ಸಾಗಿರುವ ಸೇತುವೆ ಕಾಮಗಾರಿಗೆ ಪೂರ್ಣಗೊಳ್ಳುವ ಯಾವ ಭರವಸೆಗಳೂ ಈಗ ಉಳಿದಿಲ್ಲ. ಈ ಕುರಿತು ಶಾಸಕರು ಮಧ್ಯ ಪ್ರವೇಶಿಸಿ ಕಾಮಗಾರಿ ಪೂರ್ಣಗೊಳ್ಳಲು ಸಹಕರಿಸಬೇಕೆಂದು ಪಟ್ಟಣ ಜನತೆಯ ಮನವಿಯಾಗಿದೆ. 

ಮುಳಗುಂದ, ಕಣವಿ, ಖಾನಾಪುರ ಮತ್ತಿತರ ಕಡೆಗಳಿಂದ ರಭಸವಾಗಿ ಹರಿದು ಬರುವ ಮತ್ತು ಸೆಳೆತವುಳ್ಳ ಅಪಾಯಕಾರಿ ಹಳ್ಳಕ್ಕೆ ತಕ್ಷಣ ಸೇತುವೆ ನಿರ್ಮಾಣ ಮಾಡಿ ಎಂಬ ಸಾರ್ವಜನಿಕರ ಮನವಿಗೆ ಕಿವಿಗೊಡದ ಅಧಿಕಾರಿಗಳು ಜೀವಹಾನಿ ಸಂಭವಿಸಿದಾಗ ಎಚ್ಚೆತ್ತುಕೊಳ್ಳು ತ್ತಾರೆಯೇ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ. 

ಮಳೆಗಾಲ ಬಂತೆಂದರೆ ರಸ್ತೆಯಲ್ಲಿ ಪ್ರಯಾಣಿಸಲು ಭಯಪಡುವ ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದು ಪ್ರಯಾಣಿಸಬೇಕು. ದ್ವಿಚಕ್ರ ವಾಹನ ಗಳಲ್ಲಿ ಸಂಚರಿಸುವ ಪ್ರಯಾಣಿಕರ ಪಾಡಂತೂ ಹೇಳತೀರದು. 

ಅನುದಾನ ಬಿಡುಗಡೆಗೊಂಡು ವರ್ಷಗಳು ಗತಿಸಿದರೂ ಕಣ್ಮುಚ್ಚಿ ಕುಳಿತಿರುವ  ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೂ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.              

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry