ಮುಗಿಯಿತು ರಜಾ; ಮರಳಿ ಶಾಲೆಯತ್ತ...

7

ಮುಗಿಯಿತು ರಜಾ; ಮರಳಿ ಶಾಲೆಯತ್ತ...

Published:
Updated:
ಮುಗಿಯಿತು ರಜಾ; ಮರಳಿ ಶಾಲೆಯತ್ತ...

ಗುಲ್ಬರ್ಗ: ಎರಡು ತಿಂಗಳ ಕಾಲ ಬೇಸಿಗೆ ರಜೆ ಕಳೆದ ಮಕ್ಕಳು ಇದೀಗ ಜೂನ್ 1ರಿಂದ ಮತ್ತೆ ಆರಂಭವಾಗುವ ಶಾಲೆಗಳತ್ತ ಮುಖ ಮಾಡಿ ನಿಂತಿದ್ದಾರೆ. ರಜೆಯ ಮೋಜು, ಮಜಾ ಅನುಭವಿಸಿದ ಮಕ್ಕಳು ಒಲ್ಲದ ಮನಸ್ಸಿನಿಂದ ಶಾಲೆಗೆ ಹೋಗಲು ಸಜ್ಜಾಗಿದ್ದಾರೆ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಮಕ್ಕಳು ಯಶಸ್ಸು ಸಾಧಿಸಬೇಕು ಎನ್ನುವ ಪಾಲಕರ ತುಡಿತಕ್ಕೆ ಮಕ್ಕಳು ಭಾರವಾದ ಹೆಜ್ಜೆ ಹಾಕುತ್ತಿರುವುದು ಕಂಡು ಬರುತ್ತಿದೆ. ಇನ್ನೂ ಕೆಲವು ಮಕ್ಕಳು `ಪುಸ್ತಕದ ಹುಳು~ ರೀತಿಯಲ್ಲಿ ಶಾಲೆಗೆ ಹೋಗಲು ತುದಿಗಾಲ ಮೇಲೆ ನಿಂತವರಂತೆ ಕಂಡು ಬರುತ್ತಿದ್ದಾರೆ.ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ವಿದ್ಯಾವಂತರನ್ನಾಗಿ ಮಾಡಬೇಕೆಂಬ ಹಂಬಲವುಳ್ಳ ಪಾಲಕರು, ಮಕ್ಕಳಿಗೆ ಅಗತ್ಯವಾದ ಶಾಲಾ ಸಲಕರಣೆಗಳನ್ನು ಖರೀದಿಸುವುದರಲ್ಲಿ ತೊಡಗಿದ್ದಾರೆ. ಪುಸ್ತಕ ಹಾಗೂ ಸ್ಟೇಶನರಿ ಮಳಿಗೆಯ ಮಾಲೀಕರು ಪಾಲಕರಿಗೆ ಮತ್ತು ಮಕ್ಕಳಿಗೆ ಆಕರ್ಷಕವೆನಿಸುವ ಶಾಲಾ ಬ್ಯಾಗ್, ವಾಟರ್ ಬ್ಯಾಗ್, ಪೆನ್ನು, ಪೆನ್ಸಿಲ್ ಇತ್ಯಾದಿ ಸಾಮಗ್ರಿಗಳನ್ನು ಸಂಗ್ರಹಿಸಿ ಮಕ್ಕಳ ಮತ್ತು ಪಾಲಕರ ಕಣ್ಣು ಕೋರೈಸುವ ರೀತಿಯಲ್ಲಿ ಉತ್ತಮವಾಗಿ ಪ್ರದರ್ಶನಕ್ಕೆ (ಡಿಸ್‌ಪ್ಲೇ) ಇಟ್ಟಿದ್ದಾರೆ. ಹೀಗಾಗಿ ನಗರದ ಪುಸ್ತಕ ಹಾಗೂ ಸ್ಟೇಶನರಿ ಮಳಿಗೆಗಳು ಸದಾ ಪಾಲಕರು ಮತ್ತು ಮಕ್ಕಳಿಂದ ಗಿಜಿಗುಡುತ್ತಿವೆ.“ಶಾಲಾ ಮಕ್ಕಳಿಗೆ ಅಗತ್ಯವಾದ ಕಿಂಗ್, ಲಾಂಗ್ ಸೈಜ್ ಗಾತ್ರದ ಎಲ್ಲ ನಮೂನೆಯ ನೋಟ್‌ಬುಕ್, ನಮ್ಮದೇ ಯೂನಿಕ್ ನೋಟ್ ಬುಕ್, ಶಾಲಾ ಬ್ಯಾಗ್, ವಾಟರ್ ಬ್ಯಾಗ್ ಮುಂತಾದ ಸಾಮಗ್ರಿಗಳ ವ್ಯಾಪಾರ ಮೇ 25ರಿಂದ ಜೋರಾಗಿದೆ. ಈಗ ಉನ್ನತ ವರ್ಗದ ಪಾಲಕರು ಮತ್ತು ಅವರ ಮಕ್ಕಳು ಮಾತ್ರ ಮಳಿಗೆಗೆ ಭೇಟಿ ನೀಡಿ ಖರೀದಿಸುತ್ತಿದ್ದಾರೆ.ಶಾಲೆ ಆರಂಭವಾದ ನಂತರ ಸಾಮಾನ್ಯ ವರ್ಗ ಹಾಗೂ ಗ್ರಾಮಾಂತರ ಪ್ರದೇಶದ ಜನರು ಖರೀದಿಸುತ್ತಾರೆ” ಎಂದು ಸೂಪರ್ ಮಾರ್ಕೆಟ್‌ನಲ್ಲಿರುವ ಯೂನಿಕ್ ಸ್ಟೇಶನರಿ ಅಂಗಡಿಯ ಮಾಲೀಕ ರಾಜೇಶ ಪವಾರ್ ತಿಳಿಸುತ್ತಾರೆ.ಹಣದ ಮೌಲ್ಯ ಕುಸಿದಿರುವ ಬದಲಾದ ಈ ದಿನಮಾನದಲ್ಲಿ ಮಕ್ಕಳನ್ನು ಅಂಗಡಿಗಳಿಗೆ ಕರೆತರುವ ಪಾಲಕರು ಮಕ್ಕಳ ಆಯ್ಕೆಗೆ ತಕ್ಕಂತೆ ಅವರಿಗೆ ಅಗತ್ಯವಾದ ಮತ್ತು ಮಕ್ಕಳು ಇಷ್ಟಪಡುವ ವಸ್ತುಗಳನ್ನು ಕೊಡಿಸುತ್ತಿದ್ದಾರೆ.1ರಿಂದ 10ನೇ ತರಗತಿವರೆಗೆ ಸರ್ಕಾರವೇ ಪಠ್ಯಪುಸ್ತಕಗಳನ್ನು ಪೂರೈಸುತ್ತಿರುವುದರಿಂದ ಮಕ್ಕಳಿಗೆ ಅಗತ್ಯವಾದ ಸಲಕರಣೆಗಳನ್ನು ಕೊಡಿಸುತ್ತಿರುವ ಪಾಲಕರಿಗೆ ಸದ್ಯಕ್ಕೆ ಅದರ ಕಿರಿಕಿರಿ ತಪ್ಪಿದೆ. ಆದರೆ ಪೂರೈಕೆಯಲ್ಲಿ ವ್ಯತ್ಯಾಸ ಹಾಗೂ ವಿಳಂಬವಾದರೆ ಮತ್ತೊಂದು ಹೊರೆಯಾಗಿ ಪರಿಣಮಿಸಲಿದೆ ಎಂಬುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.`ರಜೆ ಕಳೆಯಿತು ಶಾಲೆ ತೆರೆಯಿತು. ಬನ್ನಿ ಕರೆ ತನ್ನಿ ತಮ್ಮ ಮುದ್ದು ಮಕ್ಕಳನ್ನೆಲ್ಲಾ... ಮಕ್ಕಳನ್ನು ಮೊದಲ ದಿನದಿಂದಲೇ ಶಾಲೆಗೆ ಕಳುಹಿಸಿ~ ಎನ್ನುವ ಸರ್ಕಾರದ ಕಾಳಜಿಪೂರ್ವಕ ಒಕ್ಕಣಿಕೆಯನ್ನು ಓದಿದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸನ್ನದ್ಧರಾಗುತ್ತಿದ್ದಾರೆ. ಅದೇ ರೀತಿ ಮಕ್ಕಳು ಸಹ ಶಾಲೆಗೆ ಹೋಗಲು ತಮ್ಮ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನೇನು ಶಾಲೆ ತೆರೆಯಬೇಕಷ್ಟೇ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry