ಮುಗಿಲು ಮುಟ್ಟಿದ ಆಕ್ರೋಶ

7
ಮಹಾದಾಯಿ: ರಾಜ್ಯದ ಮನವಿ ತಿರಸ್ಕೃತ * ಇಂದು ಕರ್ನಾಟಕ ಬಂದ್‌ಗೆ ಸಂಘಟನೆಗಳ ಕರೆ

ಮುಗಿಲು ಮುಟ್ಟಿದ ಆಕ್ರೋಶ

Published:
Updated:
ಮುಗಿಲು ಮುಟ್ಟಿದ ಆಕ್ರೋಶ

ಬೆಂಗಳೂರು: ಕರ್ನಾಟಕದ ಮಧ್ಯಂತರ  ಅರ್ಜಿಯನ್ನು ಮಹದಾಯಿ ನ್ಯಾಯಮಂಡಳಿಯು ವಜಾಗೊಳಿಸುತ್ತಿದ್ದಂತೆ  ಮುಂಬೈ ಕರ್ನಾಟಕ ಭಾಗದಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟಿದ್ದು, ಗುರು ವಾರ ಕರ್ನಾಟಕ ಬಂದ್‌ಗೆ ವಿವಿಧ ರೈತ ಸಂಘಟನೆಗಳು ಕರೆ ನೀಡಿವೆ.ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ  ಜಿಲ್ಲೆಗಳಲ್ಲಿ ಬಂದ್‌  ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ. ವಾಹನ ಸಂಚಾರ, ಶಾಲೆ–ಕಾಲೇಜು ಹಾಗೂ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಸಂಭವ ಹೆಚ್ಚಿದೆ.ನ್ಯಾಯಮಂಡಳಿ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು. ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯಿಸಲಾಗುವುದು. ಮುಂದಿನ ಹೆಜ್ಜೆ ಕುರಿತು ತೀರ್ಮಾನಿಸಲು ಮುಂದಿನ ವಾರ ಸರ್ವ ಪಕ್ಷ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ರಾಜ್ಯದಾದ್ಯಂತ ಸರಣಿ ಹೋರಾಟ ಹಮ್ಮಿಕೊಳ್ಳಲು ಕನ್ನಡಪರ, ರೈತ ಸಂಘಟನೆಗಳು ಮುಂದಾಗಿವೆ. ಜುಲೈ 30ರಂದು ಮತ್ತೊಂದು ಬಂದ್‌ಗೆ ಕರೆ ನೀಡುವ ಸಿದ್ಧತೆ ನಡೆದಿದೆ. ತೀರ್ಪು ಹೊರಬೀಳುತ್ತಿದ್ದಂತೆ ನಾಲ್ಕು ಜಿಲ್ಲೆಗಳ ರೈತರು ಸ್ವಯಂ ಪ್ರೇರಿತರಾಗಿ ಬೀದಿ ಗಿಳಿದು, ಪ್ರತಿಭಟನೆ ನಡೆಸಿದರು. ಟೈರುಗಳಿಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು.ನವಲಗುಂದದಲ್ಲಿ ಜಲ ಸಂಪನ್ಮೂಲ ಕಚೇರಿಗೆ ನುಗ್ಗಿದ ರೈತರು ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಕಡತಗಳಿಗೆ ಬೆಂಕಿ ಇಟ್ಟರು. ಎಲ್ಲಾ ಸರ್ಕಾರಿ ಕಚೇರಿಗಳಿಗೆ ಕಲ್ಲು ತೂರಿದರು.ಗದಗಿನಲ್ಲಿ ಸಂಸದ ಶಿವಕುಮಾರ ಉದಾಸಿ ಅವರ ಜನಸಂಪರ್ಕ ಕಚೇರಿ, ತಹಸೀಲ್ದಾರ್‌ ಕಚೇರಿ ಮೇಲೆ ದಾಳಿ ಮಾಡಿದ ರೈತರು ಕಲ್ಲು ಎಸೆದು ತಮ್ಮ ಅಸಹನೆ ಪ್ರದರ್ಶಿಸಿದರು.ಬೆಳಗಾವಿಯ ರಾಣಿಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಯಿತು. ಹುಬ್ಬಳ್ಳಿಯ ರಾಯಣ್ಣ ಹಾಗೂ ಚೆನ್ನಮ್ಮ ವೃತ್ತದಲ್ಲಿ ಅಂಗಡಿ ಮುಂಗಟ್ಟು ಬಂದ್‌ ಮಾಡಿಸಿದ ಪ್ರತಿಭಟನಾಕಾರರು ನಾಲ್ಕು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು.ಮೇಲ್ಮನವಿಗೆ ನಿರ್ಧಾರ: ಸಿ.ಎಂ

ಬೆಂಗಳೂರು:
ಮಹಾದಾಯಿ ನ್ಯಾಯ ಮಂಡಳಿ ಮಧ್ಯಂತರ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಹಾಗೂ ಸರ್ವ ಪಕ್ಷ ಸಭೆ ಕರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‘ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸುವ ಬಗ್ಗೆ ರಾಜ್ಯದ ಪರ ವಕೀಲರಾದ ಫಾಲಿ ಎಸ್‌. ನಾರಿಮನ್‌ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬುಧವಾರ ಸುದ್ದಿಗಾರರಿಗೆ ತಿಳಿಸಿದರು.‘ಹೋರಾಟದಲ್ಲಿ ಗೆದ್ದಿದ್ದೇವೆ’

ಪಣಜಿ (ಪಿಟಿಐ): ‘
ಮಹಾದಾಯಿ ವಿವಾದದ ಹೋರಾಟದಲ್ಲಿ ನಾವು ಗೆದ್ದಿದ್ದೇವೆ. ಆದರೆ ಯುದ್ಧ ನಮ್ಮ  ಮುಂದೆ ಇದೆ’ ಎಂದು ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್‌ ಹೇಳಿದ್ದಾರೆ.

ನ್ಯಾಯಮಂಡಳಿಯು ಕರ್ನಾಟಕದ ಮನವಿಯನ್ನು ತಿರಸ್ಕರಿಸಿರುವುದು ಗೋವಾದ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಅವರು ಬುಧವಾರ ಹೇಳಿದ್ದಾರೆ.ಬಿಜೆಪಿಯ ಪ್ರಭಾವಿ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಧಾನಿ ಮನವೊಲಿಸುವ ನೇತೃತ್ವ ವಹಿಸಬೇಕು. ಆ ಭಾಗದ ನ್ಯಾಯಯುತ ಹೋರಾಟವನ್ನು ಪಕ್ಷ ಬೆಂಬಲಿಸಲಿದೆ

-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷತೀರ್ಪಿನಿಂದ ನಿರಾಶೆಯಾಗಿದೆ. ಇದೇನು ಅಂತಿಮ ತೀರ್ಪಲ್ಲ. ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಸರ್ಕಾರ ಕಾನೂನು ಹೋರಾಟ ನಡೆಸಬೇಕು

-ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಅಧ್ಯಕ್ಷಅಂತರ ರಾಜ್ಯಗಳ ನಡುವೆ ಕುಡಿಯುವ ನೀರು ಹಂಚಿಕೆಗೆ  ಹೊಸ ರಾಷ್ಟ್ರೀಯ ಜಲ ನೀತಿ ರೂಪಿಸಬೇಕು. ಪ್ರಧಾನಿ ಮಧ್ಯಸ್ಥಿಕೆ ವಹಿಸಿ ರಾಜ್ಯಕ್ಕೆ ನ್ಯಾಯ ಕೊಡಿಸಬೇಕು

-ಕೆ.ಎಸ್‌. ಪುಟ್ಟಣ್ಣಯ್ಯ, ರೈತ ಮುಖಂಡ, ಶಾಸಕತೀರ್ಪು ಅನಿರೀಕ್ಷಿತ. ಎರಡೂ ರಾಷ್ಟ್ರೀಯ ಪಕ್ಷಗಳು ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿವೆ. ಸರ್ಕಾರಕ್ಕೆ ಸಲಹೆ ಕೊಡುವಲ್ಲಿ ಹಿರಿಯ ವಕೀಲರು ಎಡವಿದ್ದಾರೆ

-ಎಚ್‌.ಡಿ. ದೇವೇಗೌಡ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷಏಳು ಟಿಎಂಸಿ ನೀರು ಬೇಡಿಕೆಗೆ ತಿರಸ್ಕಾರ

ನವದೆಹಲಿ:
ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳ ಜನರ ಕುಡಿಯುವ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ 7 ಟಿಎಂಸಿ ಅಡಿ ನೀರಿನ ಬಳಕೆಗೆ ಅವಕಾಶ ಕೋರಿ ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮಹಾದಾಯಿ ನ್ಯಾಯ ಮಂಡಳಿ ಬುಧವಾರ ತಿರಸ್ಕರಿಸಿತು.

ನೀರು ಬಳಕೆಗೆ ಅವಕಾಶ ನೀಡದಿರುವ ಕುರಿತು ಅನೇಕ ಕಾರಣಗಳನ್ನು ಮುಂದಿರಿಸಿದ ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್‌ ನೇತೃತ್ವದ ತ್ರಿಸದಸ್ಯ ಪೀಠವು, ಅರ್ಜಿಯನ್ನು ತಿರಸ್ಕರಿಸಿದ್ದಾಗಿ ಪ್ರಕಟಿಸಿ, 119 ಪುಟಗಳ ಆದೇಶ ಹೊರಡಿಸಿತು.ಕರ್ನಾಟಕ ಸರ್ಕಾರವು ಮದ್ಯಂತರ ಅರ್ಜಿ ಸಲ್ಲಿಕೆ ಸಂದರ್ಭ ಹಾಗೂ ಪೂರಕ ಮಾಹಿತಿ ಸೇರ್ಪಡೆ ಸಂದರ್ಭ ಸಲ್ಲಿಸಿರುವ ದಾಖಲೆಗಳು ಹಾಗೂ ನೀಡಿರುವ ಹೇಳಿಕೆಗಳು ಸಮರ್ಪಕ ವಾಗಿಲ್ಲ ಎಂದು ನ್ಯಾಯಮಂಡಳಿ ಅಭಿಪ್ರಾಯ ಪಟ್ಟಿದೆ. ಮಹಾದಾಯಿ ನದಿಯಿಂದ 7 ಟಿಎಂಸಿ ಅಡಿ ನೀರನ್ನು ಕಳಸಾ– ಬಂಡೂರಿ ನಾಲೆಗಳ ಮೂಲಕ ಮಲಪ್ರಭಾ ನದಿಗೆ ಹರಿಸಲು ಅನುಮತಿ ನೀಡುವಂತೆ ಕಳೆದ ಡಿಸೆಂಬರ್‌ 1ರಂದು ರಾಜ್ಯ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿತ್ತು.ನ್ಯಾಯಮೂರ್ತಿ ವಿನಯ್‌ ಮಿತ್ತಲ್‌ ಹಾಗೂ ಪಿ.ಎಸ್‌. ನಾರಾಯಣ ಅವರನ್ನು ಒಳಗೊಂಡ ಪೀಠದೆದುರು ಹಿರಿಯ ವಕೀಲ ಫಾಲಿ ನಾರಿಮನ್‌ ಕರ್ನಾಟಕದ ಪರ ವಾದ ಮಂಡಿಸಿದ್ದರು.ಮಹಾದಾಯಿಯಲ್ಲಿ ನೈಸರ್ಗಿಕವಾಗಿ ಹರಿಯುವ ನೀರನ್ನು ಪಡೆಯಲು ಕರ್ನಾಟಕಕ್ಕೆ ಅವಕಾಶ ನೀಡಬಾರದು ಎಂದು ಗೋವಾ ಪರ ವಕೀಲ ಆತ್ಮಾರಾಮ ನಾಡಕರ್ಣಿ ವಾದಿಸಿದ್ದರು.

ತಿರಸ್ಕಾರಕ್ಕೆ ಕಾರಣ: ಮಹಾದಾಯಿ ಕಣಿವೆ ಪ್ರದೇಶದ ಮೂರು ಪ್ರತ್ಯೇಕ ಸ್ಥಳಗಳಿಂದ 7 ಟಿಎಂಸಿ ಅಡಿ ನೀರನ್ನು ಎತ್ತುವುದಾಗಿ ಕರ್ನಾಟಕ ತಿಳಿಸಿದೆ. ಆದರೆ, ಇದರಿಂದ ಪರಿಸರಕ್ಕೆ ಪ್ರತಿಕೂಲ ಪರಿಣಾಮ ಉಂಟಾಗಲಿದ್ದು, ಜೀವವೈವಿಧ್ಯದ ಸಮತೋಲನದ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ನೀರನ್ನು ಎತ್ತುವುದು ಹೇಗೆ, ಎಲ್ಲಿ ಎಂಬ ಕುರಿತು ಕರ್ನಾಟಕ ನೀಡಿರುವ ವಿವರ ಅಸಮರ್ಪಕ. ನೀರೆತ್ತುವುದಕ್ಕೆ ತಾತ್ಕಾಲಿಕ ನಿರ್ಮಾಣ ವ್ಯವಸ್ಥೆ ಕೈಗೊಳ್ಳುವುದಾಗಿ ತಿಳಿಸಿರುವುದೂ ಅಸಮರ್ಪಕ ಎಂದು ಕಂಡುಬಂದಿದೆ.ಶಾಶ್ವತ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳದೆ ನೀರನ್ನು ಎತ್ತುವುದು ಸುಲಭ ಸಾಧ್ಯವಲ್ಲ. ಅಲ್ಲದೆ, ನೈಸರ್ಗಿಕವಾಗಿ ಹರಿಯುವ ನೀರನ್ನು ತಡೆಯದೆ, ಶೇಖರಿಸಿದೇ ಇನ್ನೊಂದು ನದಿಗೆ ಸಾಗಿಸುವುದು ಅಸಾಧ್ಯ ಎಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ, ನೀರೆತ್ತಲು ಬಳಸುವ ಭಾರಿ ಪ್ರಮಾಣದ ಪೈಪ್‌, ಯಂತ್ರ ಮತ್ತಿತರ ವಸ್ತುಗಳನ್ನು ಮುಂಗಾರಿನ ನಂತರ ತೆರವುಗೊಳಿಸಲಾಗುವುದು ಎಂಬ ವಾದವನ್ನೂ ನಂಬಲಾಗದು ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.ಕೆಲವೆಡೆ ಈಗಾಗಲೇ ಕಾಮಗಾರಿ ಕೈಗೆತ್ತಿಕೊಂಡಿರುವ ಕರ್ನಾಟಕವು, ಜಲ (ಮಾಲಿನ್ಯ ನಿಯಂತ್ರಣ ಮತ್ತು ತಡೆ) ಕಾಯ್ದೆ– 1974, ಪರಿಸರ ಸಂರಕ್ಷಣೆ ಕಾಯ್ದೆ– 1986, ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಥವಾ ಜೀವವೈವಿಧ್ಯ ಕಾಯ್ದೆ ಅಡಿ ಕೇಂದ್ರ ಸರ್ಕಾರ ಹಾಗೂ ಯೋಜನಾ ಆಯೋಗದ ಅನುಮತಿಯನ್ನೂ ಪಡೆದಿಲ್ಲ. ನೀರಿನ ಬಳಕೆಗೆ ಸಂಬಂಧಿಸಿದ ಪ್ರಸ್ತಾವನೆಗೆ ಅನುಗುಣವಾಗಿ ಪ್ರಾಥಮಿಕ ವರದಿ ಸಿದ್ಧಪಡಿಸಿದ್ದಾಗಿ ಹೇಳಿಕೊಂಡಿದ್ದರೂ ನ್ಯಾಯಮಂಡಳಿಗೆ ಯಾವುದೇ ರೀತಿಯ ಯೋಜನಾ ವರದಿ ಸಲ್ಲಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಮಲಪ್ರಭಾ ಜಲಾಶಯದ ಒಳಹರಿವು, ಜಲಾನಯನ ಪ್ರದೇಶದಲ್ಲಿನ ಮಳೆಯ  ಪ್ರಮಾಣದ ಕುರಿತೂ ಸ್ಪಷ್ಟಪಡಿಸದ ಕರ್ನಾಟಕ, ಬರಗಾಲದ ಕಾರಣ ಮುಂದುರಿಸಿದೆ. ಈ ಕುರಿತು ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ. ಬರಗಾಲವನ್ನು ಪುಷ್ಟೀಕರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಾರ್ಗದರ್ಶಿ ವಿವರವನ್ನು ಸಲ್ಲಿಸಲಾಗಿಲ್ಲ ಎಂಬುದನ್ನು ನ್ಯಾಯಮಂಡಳಿ ಒತ್ತಿಹೇಳಿದೆ.ಆಶ್ಚರ್ಯಕರ ಅವಲೋಕನ

ನವದೆಹಲಿ:
ಮಹಾದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ನ್ಯಾಯಮಂಡಳಿ ಅವಲೋಕಿಸಿರುವ ರೀತಿ ಅತ್ಯಂತ ಆಶ್ಚರ್ಯಕರವಾಗಿದೆ ಎಂದು ಕರ್ನಾಟಕದ ಪರ ವಕೀಲ ಮೋಹನ್‌ ಕಾತರಕಿ ತಿಳಿಸಿದ್ದಾರೆ.

2003ರಲ್ಲಿ ಕೇಂದ್ರ ಜಲ ಆಯೋಗ ಸಮೀಕ್ಷೆ ನಡೆಸಿ ಸಲ್ಲಿಸಿರುವ ವರದಿಯ ಪ್ರಕಾರ ಮಹಾದಾಯಿ ನದಿಯ 199.6 ಟಿಎಂಸಿ ಅಡಿ ನೀರು ವಾರ್ಷಿಕವಾಗಿ ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಆದರೆ, ಇದನ್ನು ಗಮನಿಸದ ನ್ಯಾಯಮಂಡಳಿಯು ಅನುಮತಿ, ಯೋಜನಾ ವರದಿ ಎಂಬ ಸಣ್ಣಪುಟ್ಟ ವಿಷಯಗಳನ್ನು ಮುಂದಿರಿಸಿ ತಗಾದೆ ತೆಗೆದಿರುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.1956ರ ಅಂತರರಾಜ್ಯ ಜಲ ವಿವಾದ ಕಾಯ್ದೆ ಪ್ರಕಾರ ರಚಿಸಲಾಗಿರುವ ನ್ಯಾಯಮಂಡಳಿಯು ನೀರಿನ ಬೇಡಿಕೆ ಕುರಿತು ಗಮನಹರಿಸಬೇಕಿತ್ತು. ನೀರು ಹಂಚಿಕೆಗೆ ಅನುಮೋದನೆ ದೊರೆಯದೆಯೇ ಯೋಜನೆಗೆ ಅನುಮತಿಯನ್ನು ಪಡೆಯುವುದು ಹೇಗೆ ಎಂಬುದನ್ನು ಪರಿಗಣಿಸಬೇಕಿತ್ತು ಎಂದಿರುವ ಅವರು, ನ್ಯಾಯಮಮಡಳಿಯ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry