ಮುಗಿಲು ಮುಟ್ಟಿದ ತಾಯಿಯ ಆಕ್ರಂದನ

7
ಜೀವ ಬಲಿ ಪಡೆದ ಪ್ರೇಮವಿವಾಹ

ಮುಗಿಲು ಮುಟ್ಟಿದ ತಾಯಿಯ ಆಕ್ರಂದನ

Published:
Updated:

ಮಡಿಕೇರಿ: ಒಂದೆಡೆ ಪತಿಯ ಅಕಾಲಿಕ ಮರಣ... ಮತ್ತೊಂದೆಡೆ ಪೊಲೀಸರ ವಶದಲ್ಲಿರುವ ಮಗ... ಇವೆರಡರ ನಡುವೆ ಸಿಲುಕಿದ ಗೋಳಾಡುತ್ತಿದ್ದ ತಾಯಿ ಸುನಂದಾ ಅವರ ಆಕ್ರಂದನ ಮುಗಿಲುಮುಟ್ಟಿತ್ತು.

ಇಲ್ಲಿನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಪತಿ ಸೋಮಶೇಖರ್ ಅವರ ಪಾರ್ಥಿವ ಶರೀರದ ಎದುರು ಬುಧವಾರ ಸುನಂದಾ ರೋದಿಸುತ್ತಿದ್ದರು.ಬಲಿ ಪಡೆಯಿತೇ?:

ಸೋಮಶೇಖರ್ ಹಾಗೂ ಸುನಂದಾ ಅವರ ಪುತ್ರ ದೇವೀಪ್ರಸಾದ್ ಅವರು ಫೇಸ್‌ಬುಕ್‌ನಲ್ಲಿ ಪರಿಚಯವಾದ ಬೆಂಗಳೂರಿನ ರಮ್ಯ ಎನ್ನುವವರನ್ನು ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.ಆರಂಭದಲ್ಲಿ ಮದುವೆಗೆ ಯುವತಿಯ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯುವತಿಯ ತಂದೆಯು ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಯ ಜೀಪ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಂದೆ ಸೇರಿದಂತೆ ಯುವತಿಯ ಕುಟುಂಬದ ಎಲ್ಲ ಸದಸ್ಯರು ಈ ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು.ವಿರೋಧದ ನಡುವೆಯೂ ರಮ್ಯ ಅವರು ದೇವೀಪ್ರಸಾದ್ ಅವರನ್ನು ಮಡಿಕೇರಿಯ ಅಶ್ವಿನಿ ಆಸ್ಪತ್ರೆ ಬಳಿಯಿರುವ ಅಶ್ವಿನಿ ದೇವಸ್ಥಾನದಲ್ಲಿ ಮೇ 13ರಂದು ಮದುವೆಯಾಗಿದ್ದರು. ನಂತರ ಜೂನ್ 7ರಂದು ಮದುವೆ ನೋಂದಣಿ ಕೂಡ ಮಾಡಿಸಿಕೊಳ್ಳಲಾಗಿತ್ತು. `ಮದುವೆ ನಂತರ ಮನೆಗೆ ಬಂದ ರಮ್ಯ ಎಲ್ಲರ ಜೊತೆ ಚೆನ್ನಾಗಿದ್ದರು. ಅಕ್ಕಪಕ್ಕದವರ ಜೊತೆ ಹಾಗೂ ದೇವೀಪ್ರಸಾದ್ ಕುಟುಂಬದ ಸದಸ್ಯರ ಜೊತೆ ಚೆನ್ನಾಗಿ ಹೊಂದಿಕೊಂಡಿದ್ದರು' ಎಂದು ದೇವೀಪ್ರಸಾದ್ ಅವರ ಪಕ್ಕದ ಮನೆಯ ನಿವಾಸಿ ಶೋಭಾ ಸುದ್ದಿಗಾರರಿಗೆ ತಿಳಿಸಿದರು.ತನ್ನನ್ನು ಬಲವಂತದಿಂದ ಮಡಿಕೇರಿ ಕರೆದೊಯ್ಯಲಾಗಿತ್ತು ಎಂದು ಹೇಳಿಕೆ ನೀಡಿರುವ ಪ್ರೇಮ ವಿವಾಹ ಮಾಡಿಕೊಂಡ ಯುವತಿಯ ಹೇಳಿಕೆಯನ್ನು ಶೋಭಾ ಅವರು ತೀವ್ರವಾಗಿ ಖಂಡಿಸಿದರು.ಸ್ಥಳಕ್ಕೆ ಯುವತಿಯನ್ನು ಹಾಗೂ ಯುವತಿಯ ತಂದೆಯನ್ನು ಕರೆಸಬೇಕು. ಅಲ್ಲಿಯವರೆಗೆ ಶವವನ್ನು ಅಂತಿಮ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದರು.`ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಯುವತಿಯ ತಂದೆಯು ತಮ್ಮ ಪ್ರಭಾವವನ್ನು ಬಳಸಿ, ಬೆಂಗಳೂರಿನ ಸಿದ್ದಾಪುರ ಪೊಲೀಸರ ಜೊತೆ ಬಂದು ಯುವಕನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆ.ಬೆಂಗಳೂರಿನ ಪೊಲೀಸರು ಕೊಡಗು ಜಿಲ್ಲೆಯ ಪೊಲೀಸರಿಗೆ ಯಾವುದೇ ರೀತಿ ಮುನ್ಸೂಚನೆ ನೀಡದೇ ಇಲ್ಲಿಗೆ ಬಂದು, ಯುವಕನ ಮನೆಗೆ ನುಗ್ಗಿ ದಾಂಧಲೆ ಮಾಡಿರುವುದು ತಪ್ಪು. ಇವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು' ಅವರು ಒತ್ತಾಯಿಸಿದರು.

ಆಕ್ರೋಶಗೊಂಡ ಸ್ಥಳೀಯರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಆಸ್ಪತ್ರೆಗೆ ಭೇಟಿ ನೀಡಿದ ಮೈಸೂರು ವಲಯದ ಐಜಿಪಿ ರಾಮಚಂದ್ರರಾವ್ ಅವರು, ಸ್ಥಳೀಯರ ಜೊತೆ ಚರ್ಚಿಸಿದರು.`ತಪ್ಪು ಮಾಡಿದವರು ಯಾರೇ ಆಗಿರಲಿ, ಪೊಲೀಸರೇ ಆಗಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ನಿಷ್ಪಕ್ಷಪಾತವಾಗಿ ತನಿಖೆ ಮಾಡಿ, ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ' ಎಂದು ಅವರು ಭರವಸೆ ನೀಡಿದರು.ಶವ ಎತ್ತಲು ನಿರಾಕರಣೆ:

ಸೋಮಶೇಖರ್ ಅವರ ಪಾರ್ಥಿವ ಶರೀರವನ್ನು ಶವಾಗಾರದಿಂದ ಎತ್ತಲೂ ಕುಟುಂಬದ ಸದಸ್ಯರು ನಿರಾಕರಿಸಿದರು.

ಸೋಮಶೇಖರ್ ಅವರ ಪುತ್ರ ದೇವೀಪ್ರಸಾದ್ ಸ್ಥಳಕ್ಕೆ ಬಂದ ನಂತರವೇ ಅಂತ್ಯಸಂಸ್ಕಾರದ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಕುಟುಂಬದ ಸದಸ್ಯರು ಹೇಳಿದರು.ರಮ್ಯ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ದೇವೀಪ್ರಸಾದ್ ಅವರಿಗೆ ಬುಧವಾರ ಮಧ್ಯಾಹ್ನ  ನ್ಯಾಯಾಲಯವು ಪೇರೋಲ್ ಮೇಲೆ ಹೋಗಲು ಅನುಮತಿ ನೀಡಿದೆ.

ಬೆಂಗಳೂರಿನಿಂದ ಹೊರಟಿದ್ದು, ಬುಧವಾರ ರಾತ್ರಿ ಮಡಿಕೇರಿಗೆ ಬರುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry