ಮುಗಿಲೆತ್ತರ ಚಿಮ್ಮಿದ ಚಿಣ್ಣರ ಖುಷಿ!

7

ಮುಗಿಲೆತ್ತರ ಚಿಮ್ಮಿದ ಚಿಣ್ಣರ ಖುಷಿ!

Published:
Updated:

ತುಮಕೂರು: ಬೆಂಗಳೂರು ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೊ ಇಂಡಿಯಾ ವೈಮಾನಿಕ ಪ್ರದರ್ಶನ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದ್ದರೆ, ಇತ್ತ ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಪುಠಾಣಿ ವಿಮಾನಗಳು ಮುಗಿಲೆತ್ತರಕ್ಕೆ ಹಾರಾಟ ನಡೆಸಿ, ಚಿಣ್ಣರು ಖುಷಿಯ ಅಲೆಯಲ್ಲಿ ತೇಲುವಂತೆ ಮಾಡಿದವು.ತುಮಕೂರು ಯುರೊ ಕಿಡ್ಸ್ ಹಾಗೂ ಯುರೊ ಶಾಲೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಾದರಿ ವೈಮಾನಿಕ ಪ್ರದರ್ಶನದಲ್ಲಿ ಹತ್ತಾರು ಪುಟಾಣಿ ವಿಮಾನಗಳನ್ನು ಚಿಣ್ಣರು, ಪೋಷಕರು, ಶಿಕ್ಷಕರಾದಿಯಾಗಿ ಪ್ರತಿಯೊಬ್ಬರೂ ನೋಡಿ ಖುಷಿಪಟ್ಟರು. ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜನಜಾತ್ರೆಯೇ ಸೇರಿತ್ತು.ಥರ್ಮಾಕೋಲ್, ಕಟ್ಟಿಗೆ, ತೆಳುವಾದ ಉಕ್ಕಿನಿಂದ ತಯಾರಿಸಿದ ಜೆಟ್ ವಿಮಾನ, ಹೆಲಿಕಾಪ್ಟರ್, ಮಿಗ್. ಹಾಕ್, ಸ್ಕೈವಾಕ್ ವಿಮಾನ, ಪ್ಯಾರಾಚೂಟ್... ಹೀಗೆ ವಿವಿಧ ವಿನ್ಯಾಸದ ಮಾದರಿ ವಿಮಾನಗಳು ಹಾರಾಟ ನಡೆಸಿ, ರೋಮಾಂಚನ ನೀಡಿದವು. ದೊಡ್ಡವರು ಕೂಡ ಮಕ್ಕಳೊಂದಿಗೆ ಬೆರೆತು ‘ಲೋಹದ ಹಕ್ಕಿ’ಗಳ ಚಮಾತ್ಕಾರವನ್ನು ಕಣ್ತುಂಬಿಕೊಂಡರು.

ಪುಣೆಯಿಂದಆಗಮಿಸಿದ್ದ ತಂಡವು ಪುಟಾಣಿ ವಿಮಾನಗಳನ್ನು ಕ್ರೀಡಾಂಗಣದಾಚೆ ದಾಟಿಸಿ, ಕ್ರೀಡಾಂಗಣದೊಳಗೆ ಸುರಕ್ಷಿತವಾಗಿ ಇಳಿಸುತ್ತಿದ್ದಾಗ ಹತ್ತಿರ ಹೋಗಿ ಸ್ಪರ್ಶಿಸುವ ಕಾತರ ಚಿಣ್ಣರ ಮುಖದಲ್ಲಿ ಎದ್ದು ಕಾಣುತ್ತಿತ್ತು.ಸುಮಾರು 6ರಿಂದ 12 ಅಡಿವರೆಗೂ ಉದ್ದವಿದ್ದ ವಿಮಾನ ಮಾದರಿಗಳು ಸುಮಾರು 1000 ಅಡಿಗೂ ಹೆಚ್ಚು ಎತ್ತರದಲ್ಲಿ ಹಾರಾಡಿ ಬೆರಗುಮೂಡಿಸಿದವು.ಬಾನಲ್ಲಿ ಹಾರಾಟ ನಡೆಸಿ ಇಳಿಯಲು ಸಜ್ಜಾಗುತ್ತಿದ್ದ ಏಂಜಿನ್ ವಿಮಾನಗಳನ್ನು ಹದ್ದುಗಳು ಬೆನ್ನಟ್ಟಿ ಚಿಣ್ಣರಿಗೆ ಮತ್ತಷ್ಟು ಮುದ ನೀಡಿದವು. ರಜಾ ದಿನವಾಗಿದ್ದರಿಂದ ಸಾವಿರಾರು ಪ್ರೇಕ್ಷಕರು ಕ್ರೀಡಾಂಗಣದಲ್ಲಿ ನೆರೆದು ಪ್ರದರ್ಶನಕ್ಕೆ ಕಳೆ ತಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry