ಮುಗ್ಧ ಕಂದಮ್ಮಗಳ ಬದುಕು ದಾರುಣ

‘ಇಲ್ಲಿನ ಮಕ್ಕಳನ್ನು ಸಾಯಿಸಿರುವುದು ಕೇವಲ ಗುಂಡುಗಳು ಮತ್ತು ಷೆಲ್ಗಳಷ್ಟೇ ಅಲ್ಲ...!’
ಜಗತ್ತಿನ ಪ್ರಮುಖ ಹಕ್ಕು ರಕ್ಷಣಾ ಸಂಘಟನೆ ‘ಮಕ್ಕಳನ್ನು ರಕ್ಷಿಸಿ’, (ಸೇವ್ ಚಿಲ್ಡ್ರನ್) ಸಿರಿಯಾದ ಮಕ್ಕಳ ಆರೋಗ್ಯ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಿ ಸಿದ್ಧಪಡಿಸಿರುವ ವರದಿಯಲ್ಲಿ ವ್ಯಕ್ತವಾಗಿರುವ ಈ ಅಭಿಪ್ರಾಯದ ಹಿಂದೆ ಸಾವಿರಾರು ಮಕ್ಕಳ ಸಂಕಟವಿದೆ.
ಹೊರಜಗತ್ತಿನ ತಿಳಿವಿನ ಆಚೆಯೇ ಉಳಿದು ಹೋದ ಅನೇಕ ವಿಷಯಗಳ ಬಗ್ಗೆ ಈ ವರದಿ ಬೆಳಕು ಚೆಲ್ಲುತ್ತದೆ. ಆ ವರದಿ ತೆರೆದಿಟ್ಟ ಕರಾಳ ಜಗತ್ತಿನ ಕೆಲವು ಚಿತ್ರಣಗಳು ಇಲ್ಲಿವೆ.
ಸಿರಿಯಾದಲ್ಲಿ ಕಳೆದ ಕೆಲವು ಸಮಯದಿಂದ ನಡೆಯುತ್ತಿರುವ ಆಂತರಿಕ ಸಂಘರ್ಷದಿಂದ ಹೊರ ಜಗತ್ತಿನ ಅರಿವಿಗೆ
ದಕ್ಕಿರುವುದಕ್ಕಿಂತ ಅನೇಕ ಪಟ್ಟು ಹೆಚ್ಚು ಭೀಕರ ಪರಿಣಾಮವನ್ನು ಅಲ್ಲಿನ ಮಕ್ಕಳು ಎದುರಿಸುತ್ತಿದ್ದಾರೆ. ಸಿರಿಯಾದ ಆರೋಗ್ಯ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದ್ದು, ಅಸಂಖ್ಯ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ದೀರ್ಘಕಾಲೀನ ಮತ್ತು ತಡೆಗಟ್ಟಬಹುದಾದ ರೋಗಗಳು ದೇಶದೆಲ್ಲೆಡೆ ತಾಂಡವವಾಡುತ್ತಿವೆ.
ಆಂತರಿಕ ಸಂಘರ್ಷದ ಪ್ರಕ್ಷುಬ್ಧತೆಗೆ ಇದುವರೆಗೆ ಸುಮಾರು 10,000 ಮಕ್ಕಳು ಬಲಿಯಾಗಿದ್ದಾರೆ. 43 ಲಕ್ಷ ಮಕ್ಕಳು ಯಾವ ನೆರವೂ ಇಲ್ಲದೆ ಬಳಲುತ್ತಿದ್ದಾರೆ. 12 ಲಕ್ಷ ಮಕ್ಕಳು ಇಲ್ಲಿ ಬದುಕಲಾಗದೆ ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.
ನಾಲ್ಕು ವರ್ಷಗಳ ಹಿಂದೆ 2011ರ ಮಾರ್ಚ್ನಲ್ಲಿ ಆರಂಭಗೊಂಡ ಈ ಆಂತರಿಕ ಸಂಘರ್ಷದಿಂದಾಗಿ ಸಿರಿಯಾದ ಆರೋಗ್ಯ ವ್ಯವಸ್ಥೆ ಸಂಪೂರ್ಣ ಛಿದ್ರವಾಯಿತು. ವೈದ್ಯಕೀಯ ವ್ಯವಸ್ಥೆಯೂ ಅಲ್ಲೋಲಕಲ್ಲೋಲವಾಯಿತು. ಇದರ ದಾರುಣ ಪರಿಣಾಮವನ್ನು ಲಕ್ಷಾಂತರ ಮುಗ್ಧ ಮಕ್ಕಳು ಅನುಭವಿಸುವಂತಾಯಿತು. ಸೂಕ್ತ ಚಿಕಿತ್ಸೆ ಲಭ್ಯವಾಗದ ಕಾರಣದಿಂದ ಕ್ಯಾನ್ಸರ್, ಮೂರ್ಛೆರೋಗ, ಅಸ್ತಮಾ, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಮೂತ್ರಪಿಂಡ ವೈಫಲ್ಯಗಳಿಂದ ಸಾವಿರಾರು ಮಕ್ಕಳು ಅಸುನೀಗಿದ್ದಾರೆ.
ವೈದ್ಯಕೀಯ ವ್ಯವಸ್ಥೆಯ ಹಠಾತ್ ಕುಸಿತದಿಂದ ನಿಗದಿತ ಲಸಿಕೆ ನೀಡುವುದೂ ಸೇರಿದಂತೆ ಪ್ರಾಥಮಿಕ ಚಿಕಿತ್ಸೆ ಕೂಡ ದುರ್ಲಭವಾಗಿದೆ. ಇದರಿಂದ ಈಗಾಗಲೇ ಚಿಕಿತ್ಸೆ ಪಡೆದಿದ್ದ ಮತ್ತು ಪಡೆದುಕೊಳ್ಳುತ್ತಿರುವ ರೋಗಿಗಳೂ ಸಾವನ್ನಪ್ಪುವಂತಾಯಿತು ಎಂದು ಈ ವರದಿ ಹೇಳುತ್ತದೆ.
ವರದಿ ರೂಪುಗೊಂಡ ಬಗೆ: ಈ ವರದಿ ಕೇವಲ ತನ್ನ ಅಧ್ಯಯವನ್ನಷ್ಟೆ ಅವಲಂಬಿಸಿಲ್ಲ. ಬದಲಿಗೆ ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಘಟನೆ, ರೋಗ ತಡೆ ಮತ್ತು ನಿಯಂತ್ರಣದ ಯೂರೋಪಿಯನ್ ಸಂಘಟನೆ, ತಜ್ಞ ವೈದ್ಯರ ಅಭಿಪ್ರಾಯ, ಬೇರೆ ಬೇರೆ ವೈದ್ಯಕೀಯ ಸಂಶೋಧನೆಗಳು ಮತ್ತು ಸಿರಿಯಾ ಸರ್ಕಾರ ಸ್ವತಃ ಬಹಿರಂಗಪಡಿಸಿದ ಮಾಹಿತಿ... ಹೀಗೆ ಅನೇಕ ಮೂಲಗಳಿಂದ ಸಂಗ್ರಹಿಸಿದ ಮಕ್ಕಳ ಪರಿಸ್ಥಿತಿಗಳ ವಿವರಗಳನ್ನೆಲ್ಲ ಪರಿಗಣಿಸಿದೆ.
ಈ ವರದಿಯ ವ್ಯಾಪ್ತಿ ಇಷ್ಟಕ್ಕೆ ಸೀಮಿತಗೊಂಡಿದ್ದರೆ ಅದು ಈಗಾಗಲೇ ಬಂದಿರುವ ಹತ್ತು ವರದಿಗಳಲ್ಲಿ ಹನ್ನೊಂದನೆಯದಾಗಿ ಸೇರಿಕೊಳ್ಳುತ್ತಿತ್ತು. ಆದರೆ ‘ಮಕ್ಕಳನ್ನು ರಕ್ಷಿಸಿ’ ಸಂಘಟನೆ ಸ್ವತಃ ಕಣಕ್ಕಿಳಿದು ಸ್ಥಿತಿಗತಿ ಪರಿಶೀಲಿಸಲು ನಿರ್ಧರಿಸಿತು. ಸಿರಿಯಾದಲ್ಲಿನ ಮಕ್ಕಳು, ಪಾಲಕರು, ವೈದ್ಯಕೀಯ ಸೇವಾಸಂಸ್ಥೆಗಳನ್ನು ಸಂದರ್ಶಿಸಿತು. ಇದರಿಂದ ಅವರಿಗೆ ಸಿರಿಯಾದಲ್ಲಿನ ಮಕ್ಕಳ ಆರೋಗ್ಯ ಪರಿಸ್ಥಿತಿಯ ಸಮಗ್ರ ಚಿತ್ರಣ ದೊರಕಿತು.
ಅಧ್ಯಯನದಿಂದ ದೊರಕಿದ ಈ ಚಿತ್ರವು ಹೊರಜಗತ್ತಿನಲ್ಲಿ ಬಿಂಬಿತವಾಗಿರುವುಕ್ಕಿಂತಲೂ ಅನೇಕ ಪಟ್ಟು ಭೀಕರವಾಗಿತ್ತು. ಅಮಾನವೀಯವಾಗಿತ್ತು. ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ದಾರುಣ ಬದುಕಿನ ಕೆಲವು ಅಧ್ಯಾಯಗಳಷ್ಟೇ ಇದುವರೆಗೆ ದಾಖಲಾಗಿವೆ. ದಾಖಲಾಗದೆ ಉಳಿದ ಹೃದಯ ವಿದ್ರಾವಕ ಕಥನಗಳು ಇನ್ನೂ ಸಾಕಷ್ಟಿವೆ ಎಂಬ ಸಂಗತಿ ಅರಿವಾಯಿತು. ಈ ಸಂಗತಿಗಳನ್ನು ತನ್ನ ವರದಿಯಲ್ಲಿ ಬಹಿರಂಗಪಡಿಸಲು ‘ಮಕ್ಕಳನ್ನು ರಕ್ಷಿಸಿ’ ಸಂಘಟನೆ ನಿರ್ಧರಿಸಿತು.
ವೈದ್ಯಕೀಯ ಜಗತ್ತಿನ ಕರಾಳ ಮುಖ: ಬಂಡುಕೋರರಿಂದ ಮುತ್ತಿಗೆ ಹಾಕಲ್ಪಟ್ಟಿದ್ದ ಅಲೆಪ್ಪೊನಂತಹ ನಗರಗಳಲ್ಲಂತೂ ವೈದ್ಯಕೀಯ ವ್ಯವಸ್ಥೆ ಅದೆಷ್ಟು ಕೆಟ್ಟದಾಗಿದೆ ಎಂದರೆ ಬಹುಪಾಲು ವೈದ್ಯರು ಆ ನಗರದಿಂದ ಪಲಾಯನ ಮಾಡಿದ್ದಾರೆ. ಇದ್ದ ಕೆಲವೇ ಕೆಲವು ವೈದ್ಯರು ಮನೆಗಳನ್ನೇ ಆಸ್ಪತ್ರೆಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಕೊಠಡಿಗಳು ಆಪರೇಷನ್ ಥಿಯೇಟರ್ಗಳಾಗಿ ಬದಲಾಗಿವೆ!
ತೀವ್ರ ರಕ್ತಸ್ರಾವದಿಂದ ಗಾಯಾಳು ಮಕ್ಕಳು ಸಾಯುವುದನ್ನು ತಪ್ಪಿಸಲು ಅವರಿಗೂ ಅಂಗಚ್ಛೇದ ಮಾಡುವುದರ ಹೊರತಾಗಿ ಬೇರೆ ಮಾರ್ಗಗಳಿಲ್ಲ.
ನೋವು ನಿವಾರಕ ಮಾತ್ರೆಗಳು ಮತ್ತು ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟ ಔಷಧಗಳ ಕೊರತೆ ತೀವ್ರವಾಗಿದೆ. ವಿದ್ಯುತ್ ಶಕ್ತಿಯ ಕೊರತೆಯಿಂದ ಇನ್ಕ್ಯುಬೇಟರ್ನಲ್ಲಿ ಇರಿಸಲಾದ ನವಜಾತ ಶಿಶುಗಳು ಅಲ್ಲಲ್ಲೇ ಸಾಯುತ್ತಿವೆ. ಗಾಯಾಳು ಮಕ್ಕಳೊಂದಿಗೆ ವೈದ್ಯರಿಲ್ಲದ ಖಾಲಿ ಆಸ್ಪತ್ರೆಗೆ ಬಂದ ದುಃಖತಪ್ತ ಪಾಲಕರು ತಾವೇ ಕೃತಕ ಉಸಿರಾಟದ ಟ್ಯೂಬ್ಗಳನ್ನು ಮಕ್ಕಳಿಗೆ ಹಾಕುತ್ತಾರೆ. ಪ್ರಸವಪೂರ್ವ ಮತ್ತು ಹೆರಿಗೆ ಸಮಯದಲ್ಲಿ ಮಹಿಳೆಗೆ ನೀಡಬೇಕಾದ ಆರೋಗ್ಯ ಸೇವೆಗಳು ಹೆಚ್ಚು ಕಡಿಮೆ ನಿಂತೇ ಬಿಟ್ಟಿದ್ದರಿಂದ ಯಾವುದೇ ವೈದ್ಯಕೀಯ ನೆರವಿಲ್ಲದೆ ಹೆರಿಗೆಯಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಶಸ್ತ್ರಚಿಕಿತ್ಸೆಯ ಸಹಾಯದಿಂದ ಹೆರಿಗೆಯಾದ ಮಹಿಳೆಯರ ಪ್ರಮಾಣವೂ ಶೇ 45ರಷ್ಟು ಹೆಚ್ಚಿದೆ.
ವೈದ್ಯರ ಕೊರತೆಯಿಂದಾಗಿ ಈಗಷ್ಟೇ ವೈದ್ಯಕೀಯ ಪದವಿ ಮುಗಿಸಿ ಬಂದವರೂ ನೂರಾರು ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ. ಇಲ್ಲಿ ಕೆಲವೊಮ್ಮೆ ವೈದ್ಯಕೀಯ ವಿದ್ಯಾರ್ಥಿಯೂ ಮಕ್ಕಳಿಗೆ ಚಿಕಿತ್ಸೆ ನೀಡುವ ತಜ್ಞವೈದ್ಯನಾಗುತ್ತಾನೆ.!
ಸ್ಪಾರೊ ವರದಿ: ನ್ಯೂಯಾರ್ಕ್ನ ಮೌಂಟ್ ಸಿನೈನಲ್ಲಿನ ಇಕಾಹ್ನ್ ವೈದ್ಯಕೀಯ ಸಂಸ್ಥೆಯ ಉಪನಿರ್ದೇಶಕಿ ಡಾ.ಅನ್ನಿ ಸ್ಪಾರೊ ಅವರು ಸಿರಿಯಾ ಮಕ್ಕಳ ಆರೋಗ್ಯ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿದ್ದಾರೆ. ವಿಶ್ವ ಆರೋಗ್ಯ ಸಂಘಟನೆ (ಡಬ್ಲೂಎಚ್ಒ)ಯ ಅಧಿಕಾರಿಗಳು ಖಚಿತಪಡಿಸಿರುವುದಕ್ಕಿಂತ ಇಲ್ಲಿನ ರೋಗಿಗಳ ಸಂಖ್ಯೆ ಮತ್ತು ಸೋಂಕು ಹಬ್ಬುವ ಭಯ ಹಲವು ಪಟ್ಟು ಹೆಚ್ಚಿದೆ ಎಂದು ಅವರು ತಮ್ಮ ಅಧ್ಯಯನದಲ್ಲಿ ಪ್ರತಿಪಾದಿಸಿದ್ದಾರೆ. ಆದರೆ ಡಬ್ಲೂಎಚ್ಒ ಇದನ್ನು ಒಪ್ಪಿಲ್ಲ.
‘ಸಿರಿಯಾ ಪೋಲಿಯೊ ನಿರ್ಮೂಲನೆಗೊಳಿಸಿದ್ದ ದೇಶವಾಗಿತ್ತು. ಆದರೆ ಅಲ್ಲಿ ಈಗ ಪೋಲಿಯೊ ಮರುಕಳಿಸಿದೆ. ಸಾಮಾನ್ಯವಾಗಿ ಜನರು ಅಲ್ಲಿನ ಯುದ್ಧ ಮತ್ತು ರಾಜಕೀಯ ಪರಿಸ್ಥಿತಿಗಳ ಬಗ್ಗೆ ಮಹತ್ವ ನೀಡಿ ಮಾತನಾಡಿಕೊಳ್ಳುತ್ತಾರೆ. ಆದರೆ ಮನುಷ್ಯರ ಮೇಲೆ ಆಗುವ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ’ ಎಂದು ಸ್ಪಾರೊ ಅಭಿಪ್ರಾಯಪಡುತ್ತಾರೆ.
‘ಮಕ್ಕಳನ್ನು ರಕ್ಷಿಸಿ’ ಸಂಘಟನೆಯ ಪ್ರಾದೇಶಿಕ ನಿರ್ದೇಶಕಿ ಮಿಸ್ಟಿ ಬಸ್ವೆಲ್ ಸಂದರ್ಶನವೊಂದರಲ್ಲಿ ಸ್ಪಾರೊ ಅವರ ವರದಿಯ ಕುರಿತು ಮಾತನಾಡುತ್ತಾ ‘ಸ್ಪಾರೊ ಅವರ ಸಂಶೋಧನೆ ಪ್ರಸ್ತುತವೆನಿಸುತ್ತದೆ. ಯಾಕೆಂದರೆ ಸಿರಿಯಾದಲ್ಲಿ ಇಂದಿಗೂ ಹಲವಾರು ಮಕ್ಕಳು ಸಾಯುತ್ತಿದ್ದಾರೆ. ಗಾಯಾಳುಗಳಾಗುತ್ತಿದ್ದಾರೆ. ಅಂಗಹೀನರಾಗುತ್ತಿದ್ದರೆ’ ಎಂದಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.