ಮುಗ್ಧ ಮಕ್ಕಳಿಗೊಂದು ಆರೋಗ್ಯ ಸ್ಪರ್ಧೆ

7

ಮುಗ್ಧ ಮಕ್ಕಳಿಗೊಂದು ಆರೋಗ್ಯ ಸ್ಪರ್ಧೆ

Published:
Updated:

ಹಾವೇರಿ: ಒಂದೇ ಕಡೆ ಮುದ್ದು ಮುದ್ದಾದ ನೂರಾರು ಮಕ್ಕಳು...ರಂಗು ರಂಗಿನ ಡ್ರೆಸ್‌ಗಳಲ್ಲಿ ಕಂಗೊಳಿಸಿದ ಮಕ್ಕಳು...ನಗು, ಅಳುವಿನ ಕಲರವ ಸೃಷ್ಠಿಸಿದ ಮಕ್ಕಳು...ತಾಯಿಯ ಮಡಿಲಿನಲ್ಲಿ ಮಲಗಿಕೊಂಡು ನೋಡುಗರತ್ತ ಮುಗ್ದ ನಗೆ ಬೀರುವ ಮಕ್ಕಳು.. ಪೈಪೋಟಿಯ ಗೊಡವೆ ಇಲ್ಲದೇ ಪರಸ್ಪರ ಆಟ, ತುಂಟಾಟದಲ್ಲಿ ನಿರತ ಮಕ್ಕಳು...!ನಗರದ ಇಂಡಿಯನ್ ಮೆಡಿಕಲ್ ಅಸೋಶಿಯೇಶನ್, ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್,ರೋಟರಿ ಕ್ಲಬ್-ಇನ್ನರ್‌ವ್ಹಿಲ್ ಹಾಗೂ ಶಾಂತಿ ನಿಕೇತನ ಪೂರ್ವಪ್ರಾಥಮಿಕ ಶಾಲೆ ಆಶ್ರಯದಲ್ಲಿ ಭಾನುವಾರ ನಡೆದ ಆರೋಗ್ಯವಂತ ಶಿಶು ಸ್ಪರ್ಧೆಯಲ್ಲಿ ಭಾಗವಹಿಸಿದ ಮುದ್ದು ಮಕ್ಕಳ ಈ ಚಿತ್ರ, ವಿಚಿತ್ರ ಭಾವಾವಳಿಗಳು.ನಗರದ ಶಾಂತಿನಿಕೇತನ ಶಾಲಾ ಆವರಣದಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮೂರು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 85ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. 0 ದಿಂದ1 ವರ್ಷದೊಳಗಿನ 24 ಮಕ್ಕಳು, 1 ರಿಂದ 2 ವರ್ಷದೊಳಗಿನ ಮಕ್ಕಳು 36 ಹಾಗೂ 2ರಿಂದ 3 ವರ್ಷದೊಳಗಿನ 25 ಮಕ್ಕಳು ಆರೋಗ್ಯದಲ್ಲಿ ತಾಮುಂದು, ನಾಮುಂದು ಎನ್ನುವಂತೆ ಪರಸ್ಪರ ಸ್ಪರ್ಧೆಯೊಡ್ಡಿದ್ದರು.ಆಯ್ಕೆ ಹೇಗೆ?: ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳನ್ನು ಐದು ಹಂತದಲ್ಲಿ ಪರೀಕ್ಷಿಸಿದ ನಂತರ ಅಂತಿಮ ಹಂತಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಸಂಘಟಕರು ಮಾಡಿದ್ದರು.ಮಗುವಿನ ಆರೋಗ್ಯ. ಧರಿಸಿರುವ ಡ್ರೆಸ್, ಎತ್ತರ ಮತ್ತು ತೂಕ, ವಯಸ್ಸಿಗೆ ತಕ್ಕ ಬೆಳವಣಿಗೆ, ಮಗುವಿಗೆ ಹಾಕಿಸಲಾದ ಲಸಿಕೆಗಳ ವಿವರ ಹಾಗೂ ಆ ಮಗವಿನ ತುಂಟಾಟಗಳನ್ನು ಪರೀಕ್ಷಿಸಿ ಅದರ ಮೇಲೆ ಅಂಕಗಳನ್ನು ನೀಡುವುದು. ಯಾವ ಮಗು ಹೆಚ್ಚು ಅಂಕ ಪಡೆಯುತ್ತೋ ಅದನ್ನು ಆರೋಗ್ಯವಂತ ಮಗು ಎಂದು ಘೋಷಣೆ ಮಾಡುವುದು ಸ್ಪರ್ಧೆಯ ನಿಯಮ.ಮಕ್ಕಳ ಆರೋಗ್ಯವನ್ನು ನಗರದ ಐದು ಜನ ಮಕ್ಕಳ ವೈದ್ಯರು ಉಚಿತವಾಗಿಯೇ ತಪಾಸಣೆ ಮಾಡುವುದು ಕೂಡಾ ಸ್ಪರ್ಧೆಯ ಮುಖ್ಯ ಉದ್ದೇಶದಲ್ಲೊಂದಾಗಿತ್ತು. ಡಾ.ಎಸ್.ಎಲ್. ಬಾಲೆಹೊಸೂರು, ಡಾ.ಸುದೀಪ ಪಂಡಿತ, ಡಾ.ರಾಜಕುಮಾರ ಮರೋಳ, ಡಾ.ವಿಲಾಸ ಹಿರೇಗೌಡರ ಹಾಗೂ ಡಾ.ಸವಡಿ ಅವರು ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಅಂಕಗಳನ್ನು ನೀಡಿದರು.ಹೆಚ್ಚಿನ ಆಸಕ್ತಿ: ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಇಂದಿನ ತಂದೆ, ತಾಯಂದಿರು ಆರೋಗ್ಯವಂತ ಶಿಶು ಸ್ಪರ್ಧೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಮ್ಮ ಮಗುವಿನ ಆರೋಗ್ಯ ತಪಾಸಣೆ ಮಾಡುವುದರ ಜತೆಗೆ ಅವುಗಳ ಬೆಳವಣಿಗೆಗೆ ಉತ್ತಮ ಸಲಹೆಗಳನ್ನು ನೀಡುತ್ತಾರೆ ಎಂಬ ಉದ್ದೇಶದಿಂದ ತಮ್ಮ ಮಗುವನ್ನು ಸ್ಪರ್ಧೆಗೆ ಕರೆ ತಂದಿದ್ದೇವು. ಅದರಂತೆ ಮಕ್ಕಳ ಬೆಳವಣಿಗೆ ಸೂಕ್ತ ಸಲಹೆ ಸೂಚನೆ ನೀಡಿದ್ದಾರೆ. ಈ ಸ್ಪರ್ಧೆ ನಮಗೆ ಖುಷಿ ತಂದಿದೆ ಎಂದು ನಗರದ ನಿವಾಸಿ ಶಕ್ತಿಪ್ರಸಾದ ಜಂಬಗಿ ಹೇಳಿದರು.ಪ್ರತಿ ವರ್ಷ ಆಯೋಜನೆ: ಆರೋಗ್ಯವಂತ ಶಿಶು ಸ್ಪರ್ಧೆಯನ್ನು ಪ್ರತಿ ವರ್ಷ ಆಯೋಜಿಸುತ್ತೇವೆ. ವರ್ಷದಿಂದ ವರ್ಷಕ್ಕೆ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಮಕ್ಕಳ ಆರೋಗ್ಯ ಸುಧಾರಣೆ ಮಾಡುವುದೇ ಈ ಸ್ಪರ್ಧೆಯ ಉದ್ದೇಶ. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಸಂಜೆ ನಡೆಯುವ ಸಮಾರಂಭದಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳುತ್ತಾರೆ ಸಂಘಟಕ ಬಸವರಾಜ ಮಾಸೂರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry