ಮುಗ್ಧ ಮಕ್ಕಳ ಜೀವ ಕಿತ್ತುಕೊಂಡ ಸಾರಾಯಿ

7

ಮುಗ್ಧ ಮಕ್ಕಳ ಜೀವ ಕಿತ್ತುಕೊಂಡ ಸಾರಾಯಿ

Published:
Updated:

ಚಿಕ್ಕೋಡಿ: ಎಲ್ಲದಕ್ಕೂ ಹಾಳು ಸಾರಾಯಿಯೇ ಕಾರಣ. ಅಪ್ಪ ಅಮ್ಮನ ಮಡಿಲಲ್ಲಿ ಆಟವಾಡುತ್ತಾ ನಲಿದಾಡ ಬೇಕಾದ ಮುಗ್ಧ ಆ ಎರಡು ಮುಗ್ಧ ಕಂದಮ್ಮಗಳು ಅನ್ಯಾಯವಾಗಿ ಇನ್ನಿಲ್ಲವಾದವು.  ಈ ಹೃದಯ ವಿದ್ರಾವಕ ಘಟನೆಯನ್ನು ನೋಡಿದ ಜನರ ಕಣ್ಣಾಲಿಗಳು ತುಂಬಿ ಬಂದವು. ಬದುಕಿ ಬಾಳಬೇಕಾದ ಕಂದಮ್ಮಗಳು ಶವವಾಗಿರುವುದನ್ನು ಕಂಡು ಜನರು ದುಃಖ ತಡೆಯಲಾಗದೆ ಅತ್ತರು.ಸೆಂಟ್ರಿಂಗ್ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಅನಿಲ ಸುತಾರ ಅವರ ಸಂಸಾರವೇ ಸಾವಿನ ಮನೆ.  ಅಲ್ಲಿ ಶೋಕದ ವಾತಾವರಣ ಮಡುಗಟ್ಟಿತ್ತು. ಅನಿಲ ಮಾರುತಿ ಸುತಾರ (26) ಆತನ ಪತ್ನಿ ಸಾರಿಕಾ(23) ಮತ್ತು ಮಕ್ಕಳಾದ ಓಂ (4) ಹಾಗೂ ಒಂದೂವರೆ ವರ್ಷದ ಕಂದಮ್ಮ ಗೌರಿ ಅನ್ಯಾಯವಾಗಿ ದುರಂತ ಮರಣಕ್ಕೀಡಾದರು.ಗಂಡ ಹೆಂಡಿರ ಮಧ್ಯೆ ಕೂಸು ಬಡವಾಯಿತು  ಎಂಬಂತೆ  ಗಂಡ-ಹೆಂಡಿರ ಮಧ್ಯೆ ನಡೆಯುತ್ತಿದ್ದ ಕಲಹ ಆ ದಂಪತಿ ಪ್ರಾಣ ಕಿತ್ತುಕೊಳ್ಳುವ ಜೊತೆಗೆ ಜಗತ್ತನ್ನೇ ಅರಿಯದ ಎರಡು ಕಂದಮ್ಮಗಳ ಜೀವಗಳಿಗೂ ಇನ್ನಿಲ್ಲವಾದರು.ಅನಿಲ ಸುತಾರ ಕಳೆದ ಎಂಟು ವರ್ಷಗಳ ಹಿಂದೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಖೇಬೂಡ ಗ್ರಾಮದ ಸಾರಿಕಾಳೊಂದಿಗೆ ವಿವಾಹವಾಗಿದ್ದ. ಈ ದಂಪತಿಗೆ ಜನಿಸಿದ ಮುದ್ದಾದ ಎರಡು ಮಕ್ಕಳು ಸಂಸಾರದಲ್ಲಿ ಸಂತಸವನ್ನು ಇಮ್ಮಡಿಗೊಳಿಸಿದ್ದವು. ಆದರೆ, ಕಾಲ ಕ್ರಮೇಣ ಅನಿಲನನ್ನು ಆವರಿಸಿದ ಸಾರಾಯಿ ಸೇವನೆಯ ಚಟ ಕುಟುಂಬದ ನೆಮ್ಮದಿಯನ್ನೇ ಕಿತ್ತುಕೊಂಡಿತ್ತು. ಗಂಡ-ಹೆಂಡಿರ ಮಧ್ಯೆ ಆಗಾಗ ಜಗಳ ಮಾಮೂಲಾಗಿತ್ತು. ಕಳೆದ ಸುಮಾರು ನಾಲ್ಕು ವರ್ಷಗಳಿಂದ ಅನಿಲ ಸುತಾರ ತನ್ನ ಹೆಂಡತಿ ಮಕ್ಕಳೊಂದಿಗೆ ಬೇರೆ ಮನೆಯೊಂದರಲ್ಲೆೀ ವಾಸವಾಗಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.ಅನಿಲ ಸುತಾರ ಅವರಿಗೆ ಇಬ್ಬರು ಸಹೋದರರೂ ಇದ್ದಾರೆ. ಅಪ್ಪ ಮಾರುತಿ ಸುತಾರ ಸೆಂಟ್ರಿಂಗ್ ಕಾಮಗಾರಿ ಗುತ್ತಿಗೆದಾರರಿದ್ದು, ಅವರಲ್ಲಿಯೇ ಅನಿಲ ಕೆಲಸ ಮಾಡಿಕೊಂಡಿದ್ದರು. ಸಾರಾಯಿ ಸೇವನೆ ಕುರಿತಾಗಿ ಗಂಡ-ಹೆಂಡಿರ ಮಧ್ಯೆ ಜಗಳವಂತೂ ಮುಂದುವರಿದೇ ಇತ್ತು ಎನ್ನುತ್ತಾರೆ ಸ್ಥಳೀಯರು.ಕಳೆದ ಶನಿವಾರ ಸಾರಿಕಾ, ತನ್ನ ಸಹೋದರಿಯನ್ನು ಭೇಟಿಯಾಗಿ ಬರುವುದಾಗಿ ಹೇಳಿ ಪಕ್ಕದ ಗಳತಗಾ ಗ್ರಾಮಕ್ಕೆ ಹೋಗಿದ್ದಳು.   ಮನೆಗೆ ಬಾರದೇ ತನ್ನೆರೆಡು ಮಕ್ಕಳೊಂದಿಗೆ ಸಾರಿಕಾ ದೂಧಗಂಗಾ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ.ಇತ್ತ ಕಳೆದ 2-3 ದಿನಗಳಿಂದ ಗಂಡನ ಮನೆಯವರು ಮತ್ತು ತವರು ಮನೆಯವರು ಸಾರಿಕಾ ಮತ್ತು ಮಕ್ಕಳ ಹುಡುಕಾಟದಲ್ಲಿ ತೊಡಗಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಮಂಗಳವಾರ ಬೆಳಿಗ್ಗೆ ಬೇಡಕಿಹಾಳ-ಶಿರದವಾಡ ಮಧ್ಯೆ ಇರುವ ಸೇತುವೆ ಕೆಳಗೆ ದೂಧಗಂಗಾ ನದಿಯ ನೀರಿನಲ್ಲಿ ಸಾರಿಕಾ ಮತ್ತು ಮಕ್ಕಳ ಶವಗಳು ತೇಲಾಡುವುದು ಕಂಡಿದೆ.ಈ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆಯೇ ಅನಿಲ ಕೂಡ ಸ್ಥಳಕ್ಕೆ ಧಾವಿಸಿ ಪತ್ನಿ ಮತ್ತು ಮಕ್ಕಳ ಶವವನ್ನು ಕಂಡು ಆಘಾತಗೊಂಡಿದ್ದಾನೆ. ನೇರ ಮನೆಗೆ ಹೋಗಿ ನೇಣು ಬಿಗಿದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೀರಿನಲ್ಲಿ ತೇಲಾಡುತ್ತಿದ್ದ ಶವಗಳನ್ನು ಕಂಡ ಸಾರ್ವಜನಿಕರು ಹಳಹಳಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.ಬೆಳಿಗ್ಗೆ ಕಾಣಿಸಿಕೊಂಡಿದ್ದ ಮಹಿಳೆ ಶವ ಮಧ್ಯಾಹ್ನದ ಹೊತ್ತಿಗೆ ಮತ್ತೆ  ಮುಳುಗಿತ್ತು. ಸಂಜೆ 6-30 ರವರೆಗೂ ಶವದ ಶೋಧ ನಡೆದಿತ್ತು. ಸದಲಗಾ ಪಿಎಸ್‌ಐ ರಾಘವೇಂದ್ರ ಹಳ್ಳೂರ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry