ಮುಚ್ಚಿದೆ ಕೋಟೆ ಬಾಗಿಲು ಕೇಳುವವರಿಲ್ಲ ಅಳಲು

ಮಂಗಳವಾರ, ಜೂಲೈ 23, 2019
24 °C

ಮುಚ್ಚಿದೆ ಕೋಟೆ ಬಾಗಿಲು ಕೇಳುವವರಿಲ್ಲ ಅಳಲು

Published:
Updated:

`ನಮ್ಮೂರಾಗೆ ಕುಡಿಯೋದಕ್ಕೇ ನೀರಿಲ್ಲ, ಇನ್ನು ಶೌಚಾಲಯಕ್ಕೆ ಎಲ್ಲಿಂದ ನೀರು ತರ‌್ಬೇಕ್ರಿ?, ಹಂಗೂ ಚರಗಿಯ್ಯಾಗ ನೀರು ತಗೊಂಡು ಬಯಲುಕಡೀಗೆ ಹೋದ್ರಾ ಗಂಡಸ್ರು ನಮ್ಮ ಮ್ಯಾಲಾ ಬ್ಯಾಟ್ರಿ ಬೆಳಕು ಬಿಡ್ತಾರಾ? ನಮ್ಮ ಪಾಡ್ ಯಾರಿಗೂ ಬ್ಯಾಡ್ರಿ...~

-ಹಾಗೆಂದು ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ರಾಗಿಮಸಲವಾಡ ಗ್ರಾಮದ ಮಹಿಳೆಯರು ತಮ್ಮ ಅಂತರಂಗ ಬಿಚ್ಚಿಡುವಾಗ, ದಿನನಿತ್ಯದ ದೇಹಬಾಧೆ ಪೂರೈಸಿಕೊಳ್ಳಲು ಅವರು ಪಡುತ್ತಿರುವ ಕಷ್ಟ ಎಂಥವರ ಮನಸ್ಸನ್ನೂ ಕಲಕುತ್ತದೆ.

`ಊರಿನಲ್ಲಿ ಹಿಂದಿನಿಂದಲೂ ಗ್ರಾಮ ಪಂಚಾಯಿತಿಗೆ ಸೇರಿದ `ಕೋಟೆ~ ಜಮೀನಿನಲ್ಲೇ ನಾವೆಲ್ಲಾ ಬಹಿರ್ದೆಸೆಗೆ ಹೋಗ್ತಾ ಇದ್ವಿ. ಆದರೆ, ಇತ್ತೀಚೆಗೆ ಪಂಚಾಯಿತಿಯ ಮಾಜಿ ಸದಸ್ಯನೊಬ್ಬ ಆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ತಂತಿ ಬೇಲಿ ಹಾಕಿದ್ದಾನೆ. ಅಲ್ಲಿದ್ದ ಗಿಡ-ಮರಗಳನ್ನ ಕಡಿಸಿದ್ದಾನೆ. ಕತ್ತಲಾದ ಮೇಲೆ ಹೆಣ್ಣು ಮಕ್ಕಳು ಬಹಿರ್ದೆಸೆಗೆ ಹೋದಾಗ ಗಂಡಸರನ್ನು ಗುಂಪುಗೂಡಿಸಿಕೊಂಡು ಸೊಂಟದ ಕೆಳಗಿನ ಮಾತಾಡ್ತಾರೆ. ಸಂಡಾಸಿಗೆ ಕುಂತಾಗ ನಮ್ಮ ಮ್ಯಾಲಾ ಬ್ಯಾಟರಿ ಬೆಳಕು ಬಿಡ್ತಾರೆ~ ಎಂದು ಅಲ್ಲಿನ ಹೆಣ್ಣು ಮಕ್ಕಳು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಈ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಪಿಡಿಒ ಅವರಿಗೆ ಮಹಿಳೆಯರು ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮದ ಮುಖಂಡರ ಜತೆಯೂ ಚರ್ಚಿಸಲಾಗಿದೆ. ಆದರೂ, ಸಮಸ್ಯೆಗೆ ಪರಿಹಾರ ಮಾತ್ರ ದೊರೆತಿಲ್ಲ.

`ಸಮಸ್ಯೆ ನಮ್ಮದಷ್ಟೇ ಅಲ್ಲ. ಗಂಡಸ್ರದ್ದೂ ಕೂಡಾ. ಅವ್ರಿಗೂ ಕಕ್ಕಸುರೂಂ ಇಲ್ರೀ. ವಯಸ್ಸಾದ ಮುದುಕ್ರು ಹೊರಕಡೀಗೆ ಹೋಗಾಕಾ ಆಗೂದಿಲ್ಲ. ಉಳಿದ ಗಂಡಸ್ರು ಹೇಗೋ ಹೊಲದ ಕಡೀಗೋ, ಊರು ಹೊರಗೋ ಹೋಗ್ತಾರೆ. ಆದ್ರೆ, ನಾವು ಹೆಂಗಸ್ರು ಮನೀ-ಮಕ್ಳು ಬಿಟ್ಟು ಊರ ಹೊರಗ ಹೋಗಾಕಾ ಆಗೂದಿಲ್ಲ. ಇನ್ನು ಬಸುರಿ, ಬಾಣಂತಿಯರ ಗೋಳು ಕೇಳಲೇಬೇಡಿ. ಪಂಚಾಯಿತಿ ಜಾಗದಾಗ ಸಮುದಾಯ ಶೌಚಾಲಯ ಕಟ್ಟಿಸಿಕೊಟ್ರೆ ನಮ್ ಸಮಸ್ಯೆ ಬಗೆಹರಿತೈತಿ~ ಎನ್ನುತ್ತಾರೆ ಗೃಹಿಣಿ ಜ್ಯೋತಿ.

ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಮನಕ್ಕೆ ತಂದರೆ, `ಶೀಘ್ರದಲ್ಲೇ ತುರ್ತು ಸಭೆ ಕರೀತೀನಿ. ಸಮುದಾಯ ಶೌಚಾಲಯ ಕಟ್ಟಲು ಜಿಲ್ಲಾ ಪಂಚಾಯಿತಿ ಪ್ರಸ್ತಾವ ಸಲ್ಲಿಸಬೇಕು. ಅಲ್ಲೆತನಕ ಏನೂ ಮಾಡಲಾಗದು~ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಒಟ್ಟಿನಲ್ಲಿ ಮಹಿಳೆಯರ ಸಮಸ್ಯೆ ಬಗ್ಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು, ಅದಕ್ಕೆ ಅವರೇ ಪರಿಹಾರ ಕಂಡುಕೊಳ್ಳಲಿ ಬಿಡಿ ಎನ್ನುವ ಜನಪ್ರತಿನಿಧಿಗಳ ನಡುವೆ, ಈ ಭಾಗದ ಇತರ ಗ್ರಾಮಗಳ ಮಹಿಳೆಯರಿಗೆ ಕತ್ತಲಲ್ಲೇ ಬಯಲು ಶೌಚಾಲಯ ಎಂಬ ಮಾತು ತಪ್ಪದಂತಾಗಿದೆ. ಆದರೆ, ರಾಗಿಮಸಲವಾಡದ ಮಹಿಳೆಯರಿಗೆ ಮಾತ್ರ ಕತ್ತಲಲ್ಲೂ ಬಯಲಾಗಲು ಭಯ! ಹೀಗಾಗಿ ಅವರಿಗೆ ಕನಿಷ್ಠ `ಕೋಟೆ~ ಜಮೀನಿನಲ್ಲಾದರೂ ದೇಹಬಾಧೆ ನೀಗಿಸಿಕೊಂಡು `ಬಿಡುಗಡೆಯಾಗುವ ಭಾಗ್ಯ~ ದೊರೆಯಬೇಕಾಗಿದೆ. ಆದರೆ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರ‌್ಯಾರು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry