ಸೋಮವಾರ, ನವೆಂಬರ್ 18, 2019
23 °C

ಮುಜಫರ್‌ಪುರ-ಯಶವಂತಪುರ ಎಕ್ಸ್‌ಪ್ರೆಸ್ ಹಳಿತಪ್ಪಿ ಒಬ್ಬ ಸಾವು

Published:
Updated:

ಚೆನ್ನೈ (ಪಿಟಿಐ): ಬೆಂಗಳೂರಿಗೆ ಹೊರಟಿದ್ದ ಮುಜಫರ್‌ಪುರ-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ 11 ಬೋಗಿಗಳು ಇಲ್ಲಿಂದ ಸುಮಾರು 90 ಕಿ.ಮೀ. ದೂರದ ಚಿತೇರಿಯಲ್ಲಿ ಹಳಿತಪ್ಪಿದ ಪರಿಣಾಮ ಒಬ್ಬ ಮೃತಪಟ್ಟು, ಸುಮಾರು 33 ಮಂದಿ ಗಾಯಗೊಂಡಿರುವ ಘಟನೆ ಬುಧವಾರ ವರದಿಯಾಗಿದೆ.ಅಪಘಾತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಗಾಯಗೊಂಡವರನ್ನು ಅರಕೋಣಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೆಲ್ಲೂರು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.ಮುಂಜಾನೆ ಸುಮಾರು 5.50ರ ವೇಳೆ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪ್ರಾಥಮಿಕ ತನಿಖೆಗೆ ಆದೇಶಿಸಿದ್ದಾರೆ. ಘಟನೆಯಿಂದಾಗಿ ಅರಕೋಣಂ ಪ್ರದೇಶದಲ್ಲಿ ರೈಲು ಸಂಚಾರ ಅಸ್ತವ್ತಸ್ತಗೊಂಡಿದ್ದು ಬೆಂಗಳೂರಿಗೆ ತೆರಳುವ ರೈಲು ಸೇರಿದಂತೆ ಸುಮಾರು ಏಳು ರೈಲುಗಳನ್ನು ಮಾರ್ಗ ಬದಲಾಯಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ಅಪಘಾತದಿಂದಾಗಿ  ಮಾರ್ಗಮಧ್ಯೆ ಸಿಲುಕಿಕೊಂಡ ಪ್ರಯಾಣಿಕರಿಗಾಗಿ ಬಸ್ ವ್ಯವಸ್ಥೆ ಮಾಡಲಾಯಿತಲ್ಲದೆ, ಸುಮಾರು  200ರಷ್ಟು ಪ್ರಯಾಣಿಕರು ಗುವಾಹಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.ಪರಿಹಾರ: ಚಿತೇರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಎರಡು ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ಐವತ್ತು ಸಾವಿರ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ ಹತ್ತು ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ಕೆ.ಜೆ. ಸೂರ್ಯಪ್ರಕಾಶ್ ರೆಡ್ಡಿ ತಿಳಿಸಿದರು.

ಪ್ರತಿಕ್ರಿಯಿಸಿ (+)