ಮಂಗಳವಾರ, ಜನವರಿ 28, 2020
21 °C

ಮುಜುಗರದ ಹೇಳಿಕೆ ನಿಲ್ಲಿಸಲು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಈಶ್ವರಪ್ಪ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ತೃಪ್ತಿ ಪಡಿಸಲು ಪಕ್ಷಕ್ಕೆ ಮುಜುಗರವಾಗುವ ಹೇಳಿಕೆಯನ್ನು ಮಾಧ್ಯಮಗಳಿಗೆ ನೀಡಬಾರದೆಂದು ಎಲ್ಲ ಶಾಸಕರಿಗೆ ಸೂಚಿಸಲಾಗಿದೆ.ಆದಾಗ್ಯೂ, ಪಕ್ಷದಲ್ಲಿ ಇನ್ನೂ ಒಂದಿಷ್ಟು ಗೊಂದಲಗಳಿವೆ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದರು. ನಂಜನಗೂಡು ತಾಲ್ಲೂಕು ಸುತ್ತೂರು ಶ್ರೀಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಶನಿವಾರ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, `ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಶಾಸಕ ಸುರೇಶ್‌ಗೌಡ ಹಾಗೂ ಸಚಿವ ರೇಣುಕಾಚಾರ್ಯ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ~ ಎಂದು ಹೇಳಿದರು.`ಸರ್ಕಾರ ಅವಧಿ ಪೂರೈಸುತ್ತದಾ~ ಎಂಬ ಪ್ರಶ್ನೆಗೆ, `ಇಷ್ಟು ದಿನ ಸಮ್ಮಿಶ್ರ ಸರ್ಕಾರದ ಹಾಗೆ ಆಡಳಿತ ಮಾಡಿದ್ದೇವೆ. ಈಗ ಪೂರ್ಣ ಬಹುಮತ ಸಿಕ್ಕಿದೆ. ಹೀಗಾಗಿ ಸರ್ಕಾರ ಒಂದೂವರೆ ವರ್ಷ ಅವಧಿ ಪೂರೈಸುವಲ್ಲಿ ಅನುಮಾನ ಬೇಡ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸೀಟುಗಳನ್ನು ಗೆಲ್ಲಲಿದೆ~ ಎಂದು ವಿಶ್ವಾಸ ಸೂಚಿಸಿದರು.  ಯಡಿಯೂರಪ್ಪನವರ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅನೇಕ ಜನಪರ ಯೋಜನೆ ಹಮ್ಮಿಕೊಂಡಿದ್ದರು. ಹೀಗಾಗಿ ಕೆಲವೆಡೆ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ನೆರವೇರಿಸಲು ಹಾಗೂ ಉದ್ಘಾಟನೆಗೆ ಹೋಗುತ್ತಿದ್ದಾರೆಯೇ ಹೊರತು ಪ್ರವಾಸಕ್ಕಲ್ಲ~ ಎಂದು ಸ್ಪಷ್ಪಪಡಿಸಿದರು.

ಪ್ರತಿಕ್ರಿಯಿಸಿ (+)