ಸೋಮವಾರ, ಮೇ 23, 2022
24 °C

ಮುಜುಗರದ V ಸಂಕೇತ

ಪ್ರವೀಣ್ ಎಸ್. ಶೆಟ್ಟಿ, ಮಂಗಳೂರು Updated:

ಅಕ್ಷರ ಗಾತ್ರ : | |

ಕೆ.ಜಿ. ಕ್ಲಾಸ್‌ನಲ್ಲಿ ಕಲಿಯುವ ಪುಟಾಣಿಗಳು ಶಾಲೆಗೆ ಸೇರಿದ ಮೊದಲಲ್ಲೇ ಬಹಿರ್ದೆಶೆಗೆ ಹೋಗಬೇಕಾದಾಗ ಒಂದು ಅಥವಾ ಎರಡು ಬೆರಳೆತ್ತಿ ತೋರಿಸಿ  ‘ಒಂದಕ್ಕೆ’ ಅಥವಾ  ‘ಎರಡಕ್ಕೆ’ ಎಂದು ಹೇಳಬೇಕೇ ವಿನಹ ಮೂತ್ರ- ಕಕ್ಕಸು ಎಂದು ನೇರವಾಗಿ ಹೇಳಬಾರದು ಎಂದು ಮಕ್ಕಳಿಗೆ ಟೀಚರ್ ಹೇಳಿಕೊಟ್ಟಿರುತ್ತಾರೆ.ಕಳೆದ ಮಂಗಳವಾರ ನಾನು ಮಂಗಳೂರಿನಿಂದ ಉಡುಪಿಗೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ನನ್ನ ಪರಿಚಯದವರೊಬ್ಬರು ಪಕ್ಕದ ಸೀಟಿನಲ್ಲಿ ತನ್ನ ಮೂರು ವರ್ಷದ ಮಗಳೊಂದಿಗೆ ಆಸೀನರಾದರು. ಉಭಯ ಕುಶಲೋಪರಿಯ ನಂತರ ನಾನು ನನ್ನ ಕೈಯಲ್ಲಿದ್ದ ‘ಪ್ರಜಾವಾಣಿ’ ಪತ್ರಿಕೆ ಓದಲಾರಂಭಿಸಿದೆ. ಮುಖಪುಟದಲ್ಲಿ ಹೇಮಾಮಾಲಿನಿಯ ‘ರಾಜ್ಯ’ ಪ್ರವೇಶದ ಸುದ್ದಿಯೊಂದಿಗೆ, ಯಡಿಯೂರಪ್ಪ ಹೇಮಾಳ ಕೈ ಹಿಡಿದು ಅಭಿನಂದಿಸುತ್ತಾ ಆನಂದತುದಿಲನಾಗಿರುವುದು, ಹಾಗೂ ಹಿಂದಿನಿಂದ ಶೋಭಾ ಕರಂದ್ಲಾಜೆ ನೋಡುತ್ತಿರುವ (ಮತ್ಸರದಿಂದ?) ಮತ್ತೂ ಬದಿಯಲ್ಲಿ ಈಶ್ವರಪ್ಪ ಎರಡು ಬೆರಳೆತ್ತಿ (ಅದು ಆ ಸಂದರ್ಭದಲ್ಲಿ ಅಗತ್ಯವಿತ್ತೆ?) ನಿಂತಿರುವ ದೃಶ್ಯದ ಫೋಟೋ ಸಹಾ ಪ್ರಕಟವಾಗಿತ್ತು (ಪ್ರ.ವಾ. ಫೆ. 22).ನನ್ನ ಪಕ್ಕದಲ್ಲಿದ್ದವರ ತೊಡೆಯಲ್ಲಿ ಕೂತಿದ್ದ ಆ ಚಿಕ್ಕ ಮಗು ಎರಡು ಬೆರಳೆತ್ತಿರುವ ಈಶ್ವರಪ್ಪ ಫೋಟೊ ನೋಡಿ ತನ್ನ ತಂದೆಯನ್ನು ಜೋರಾಗಿ ಕೇಳಿಯೇ ಬಿಟ್ಟಿತು-  “ಅಪ್ಪಾ ಆ ಅಜ್ಜನಿಗೆ ‘ಎರಡಕ್ಕೆ’ (ಕಕ್ಕಸು) ಬರುತ್ತಿದೆಯೇ?” ಅಕ್ಕಪಕ್ಕದವರು ಗೊಳ್ಳೆಂದು ನಕ್ಕಾಗ ಮಗು ಕಕ್ಕಾಬಿಕ್ಕಿ ಮತ್ತೂ ತಂದೆಗೆ ಇರುಸು ಮುರುಸು. ಹೋದ ಹೋದಲ್ಲೆಲ್ಲಾ ಪೆದ್ದು ಪೆದ್ದಾಗಿ ಎರಡು ಬೆರಳೆತ್ತಿ ಫೋಟೊಗೆ ಪೋಸು ಕೊಡುವ ರಾಜಕಾರಣಿಗಳು ಆ ಮಗುವಿನ ಮುಗ್ಧ ಮಾತನ್ನು ಅರ್ಥಮಾಡಿಕೊಳ್ಳುವರೇ?ಹಿಂದೂ ವಿವಾಹ ಕಾಯ್ದೆಯಲ್ಲಿ, ಮೊದಲ ಹೆಂಡತಿ ಜೀವಂತವಿರುವಾಗ ಅವಳ ಪೂರ್ವಾನುಮತಿಯಿಲ್ಲದೇ ಎರಡನೇ ಮದುವೆಗೆ ಅವಕಾಶ ಇಲ್ಲದ್ದರಿಂದ, ‘ಧರ್ಮ ಬದಲಿಸಿದ ಧರ್ಮೆಂದ್ರ’ ಹೇಮಾಳನ್ನು ಮದುವೆಯಾಗಲು ಇಸ್ಲಾಂ ಧರ್ಮ ಸ್ವೀಕರಿಸಿದ್ದರೆಂದು ಸಾಬೀತುಪಡಿಸುವ ದಾಖಲೆಗಳನ್ನು, ಧರ್ಮೆಂದ್ರ 2004 ರಲ್ಲಿ ಲೋಕಸಭೆಗೆ ರಾಜಸ್ತಾನದಿಂದ ಚುನಾವಣೆಗೆ ನಿಂತಾಗ, ರಾಜಸ್ತಾನದ ಪತ್ರಿಕೆಗಳು ಪ್ರಕಟಿಸಿದ್ದವು.  ಎರಡನೇ ಮದುವೆಗಾಗಿ ಮತಾಂತರವಾದವನ ಎರಡನೇ ಪತ್ನಿಗೆ ಮತಾಂತರದ ಕಟ್ಟರ್ ವಿರೋಧಿ ಪಕ್ಷ ಬಿಜೆಪಿಯೇ ರಾಜ್ಯಸಭೆಗೆ ಕರ್ನಾಟಕದಿಂದ ಟಿಕೆಟ್ ಕೊಟ್ಟಿದ್ದಕ್ಕೆ ವಿಪರ್ಯಾಸವೆನ್ನಬೇಕೇ? ಅಥವಾ ಕೋಮು ಸೌಹಾರ್ದತೆ ಎನ್ನಬೇಕೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.