ಭಾನುವಾರ, ಜೂನ್ 20, 2021
28 °C

ಮುತ್ತಪ್ಪ ಜಾತ್ರೆಗೆ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ಸಮೀಪದ ಕಕ್ಕೆಹೊಳೆ ಮುತ್ತಪ್ಪ ಹಾಗೂ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಭಾನುವಾರ ಪ್ರಾರಂಭವಾಗಿದ್ದ ವಾರ್ಷಿಕ ಜಾತ್ರೋತ್ಸವಕ್ಕೆ ಮಂಗಳವಾರ ತೆರೆ ಬಿದ್ದಿತು.ಭಾನುವಾರ ಬೆಳಿಗ್ಗೆ 4.30 ಕ್ಕೆ ಗಣಪತಿ ಹೋಮದೊಂದಿಗೆ ಆರಂಭವಾದ ವಾರ್ಷಿಕ ಜಾತ್ರೆ ಮಂಗಳವಾರ ಬೆಳಿಗ್ಗೆ ನಡೆದ ವಿವಿಧ ದೇವರ ಕೋಲಗಳ ಕೊಂಡ ಹಾಯುವಿಕೆಯೊಂದಿಗೆ ಮುಕ್ತಾಯಗೊಂಡಿತು.ಜಾತ್ರೋತ್ಸವ ಪ್ರಯುಕ್ತ ದೇವಾಲಯದಲ್ಲಿ ಶುದ್ಧಿಪುಣ್ಯ, ಕಳಸಪೂಜೆ, ಮುತ್ತಪ್ಪ ದೇವರ ವೆಳ್ಳಾಟ ಮತ್ತು ವಿವಿಧ ಪೂಜಾ ವಿಧಿಗಳು ನೆರವೇರಿದವು. ಸೋಮವಾರ ಸಂಜೆ ದೇವಾಲಯದಿಂದ ಕೇರಳದ ಶೃಂಗಾರಿ ಮೇಳದೊಂದಿಗೆ ಕಳಸ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಜರುಗಿತು.

ಸಂಜೆ 6.30 ರಿಂದ ವಿಷ್ಣುಮೂರ್ತಿ, ಕರಿಂಗುಟ್ಟಿ, ಕಂಡಕರ್ಣ, ಭಗವತಿ, ರಕ್ತಚಾಮುಂಡಿ, ಪೊಟ್ಟನ್ ದೇವರುಗಳ ವೆಳ್ಳಾಟದೊಂದಿಗೆ ರಾತ್ರಿ 12 ಗಂಟೆಗೆ ದೇವರ ಕಳಿಕ್ಕಾಪಾಟ್ ವಿಧಿಗಳು ನೆರವೇರಿದವು.ದೇವಾಲಯದಲ್ಲಿ ಸೋಮವಾರ ರಾತ್ರಿ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು. ಸೋಮವಾರಪೇಟೆ ಸುತ್ತಲಿನ ಸಾವಿರಾರು ಮಂದಿ ಭಕ್ತಾದಿಗಳು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯ ಪ್ರಯುಕ್ತ ಭದ್ರಾವತಿ ಬ್ರದರ್ಸ್ ತಂಡದಿಂದ ಸಂಗೀತ ರಸಮಂಜರಿ ಏರ್ಪಡಿಸಲಾಗಿತ್ತು.ಸೋಮವಾರ ಮಧ್ಯರಾತ್ರಿ ಭಗವತಿ ದೇವಿಯ ಕೋಲದೊಂದಿಗೆ ವಿವಿಧ ದೇವರ ಕೋಲ ಜರುಗಿತು. ಮಂಗಳವಾರ ಬೆಳಗಿನ 4.30 ಕ್ಕೆ ಪೊಟ್ಟನ್ ದೇವರು ಅಗ್ನಿಗೇರುವ ಪೂಜಾ ವಿಧಿ ನೆರವೇರಿತು. ಜಾತ್ರೆಯ ಅಂಗವಾಗಿ ಸಿಡಿಮದ್ದಿನ ಪ್ರದರ್ಶನ ಏರ್ಪಡಿಸಲಾಗಿತ್ತು.ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎನ್.ದಯಾನಂದ ಹಾಗೂ ಪದಾಧಿಕಾರಿಗಳಾದ ಮೋಹನ್, ಪ್ರಸನ್ನ, ಜನಾರ್ದನ ಮೊದಲಾದವರು ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.