ಮುತ್ತಾಗಲಿ ಮಾತು

7

ಮುತ್ತಾಗಲಿ ಮಾತು

Published:
Updated:
ಮುತ್ತಾಗಲಿ ಮಾತು

1998ರ ಮೇ ತಿಂಗಳಲ್ಲಿ `ಅಕ್ಷರಮಾಲೆ' ಕಾರ್ಯಕ್ರಮ ನಡೆಸುವ ಕೋರಿಕೆ ಬಂದಾಗ ನಾನು ಗುರುತಾದ ನಟನಾಗಿದ್ದೆ. ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಏಕಕಾಲದಲ್ಲಿ ಅವಕಾಶ ಸಿಕ್ಕಾಗ ಬಹುತೇಕರು ಟೀವಿಯತ್ತ ಕಾಲಿಡಬೇಡ ಎಂದಿದ್ದರು. ಇದರಿಂದ ನಟನ ಇಮೇಜ್‌ಗೆ ಧಕ್ಕೆ ಬರಬಹುದು, ಚಿತ್ರರಂಗದಲ್ಲಿ ಬೇಡಿಕೆಯೂ ಕುಸಿಯಬಹುದು ಎಂದು ಉಚಿತ ಸಲಹೆ ನೀಡಿದ್ದರು. ಆದರೆ ನನಗೆ ಸವಾಲುಗಳನ್ನು ಸ್ವೀಕರಿಸುವುದು ಪ್ರಿಯವಾಗಿತ್ತು. ಹೀಗಾಗಿ ನಿರೂಪಣೆಯನ್ನೇ ಆಯ್ದುಕೊಂಡೆ. ಹಾಗೆ ನೋಡಿದರೆ ಜನಸಾಮಾನ್ಯರ ಬಳಿ ನನ್ನನ್ನು ಒಯ್ದಿದ್ದು ಕಿರುತೆರೆಯೇ.ಆಗಿನ್ನೂ ರಿಯಾಲಿಟಿ ಶೋಗಳು ಕಾಲಿಟ್ಟಿರಲಿಲ್ಲ. ಕಾರ್ಯಕ್ರಮ ಹೊಸದಾಗಿದ್ದರಿಂದ ಅದಕ್ಕೆ ತಕ್ಕ ರೂಪ ಕೊಟ್ಟು ಭಿನ್ನವಾಗಿ ರೂಪಿಸುವ ಜವಾಬ್ದಾರಿ ನನ್ನ ಮೇಲಿತ್ತು. ರಾಜ್ಯದ ಎಲ್ಲಾ ತಾಲ್ಲೂಕುಗಳಿಗೂ ಹೋಗಿ ಅಲ್ಲಿ ಕಾರ್ಯಕ್ರಮ ನಿರೂಪಿಸುವಾಗ ಸಿಗುತ್ತಿದ್ದ ಖುಷಿಯೇ ಬೇರೆ. ಈ ಹದಿನೈದು ವರ್ಷದಲ್ಲಿ ಏನಿಲ್ಲವೆಂದರೂ ಪ್ರತಿ ಗ್ರಾಮಕ್ಕೆ ಮೂರರಿಂದ ನಾಲ್ಕು ಬಾರಿ ಹೋಗಿದ್ದೇನೆ.ಸಿನಿಮಾ ಚಿತ್ರೀಕರಣಕ್ಕೆ ಮಂಗಳೂರು, ಮುಂಬೈ, ಚೆನ್ನೈಗೆ ಹೋಗುತ್ತಿದ್ದೆ. ಈ ಕಾರ್ಯಕ್ರಮ ಚಳ್ಳಕೆರೆ, ಹಿರಿಯೂರಿನಂತಹ ಸಣ್ಣಸಣ್ಣ ಊರುಗಳಿಗೂ ನನ್ನನ್ನು ಕರೆದೊಯ್ಯಿತು. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸಿಗುವ ಅಪರೂಪದ ವೇದಿಕೆಯದು. ಪ್ರತಿ ಬಾರಿ ಕಾರ್ಯಕ್ರಮ ನೀಡುವಾಗಲೂ ಹೊಸ ಸಂಗತಿಗಳನ್ನು ಕಲಿಯುತ್ತಿದ್ದೆ. ಹಿಂದಿ ಭಾಷೆಯಲ್ಲಿ ಕೆಲವು ಕಾರ್ಯಕ್ರಮಗಳಿಗಾಗಿ ಎಂಟರಿಂದ ಹತ್ತು ವರ್ಷಗಳ ಕಾಲ ಓಡಾಡಿದ್ದಿದೆ. ಆದರೆ ಕನ್ನಡದಲ್ಲಿ ಸತತ ಹದಿನೈದು ವರ್ಷ ಒಂದೇ ನಿರೂಪಕನ ಉಸ್ತುವಾರಿಯಲ್ಲಿ ಪ್ರಸಾರಗೊಂಡ ಏಕೈಕ ಕಾರ್ಯಕ್ರಮವಿದು. ಹಾಗಾಗಿ ಇದೀಗ ಗಿನ್ನೆಸ್ ಪುಟಗಳಲ್ಲಿ ದಾಖಲಿಸುವ ಪ್ರಯತ್ನ ನಡೆಯುತ್ತಿದೆ.ಸಂಗೀತದ ಹಿನ್ನೆಲೆ ಇಲ್ಲದ ನನಗೆ `ಅಕ್ಷರಮಾಲೆ'ಯಂತಹ ಸಂಗೀತ ಕಾರ್ಯಕ್ರಮ ನಡೆಸುವುದು ಸವಾಲಿನ ಕೆಲಸವಾಗಿತ್ತು. ಸಿನಿಮಾದಲ್ಲಿ ಸಂಭಾಷಣೆ ಆಧರಿಸಿ ಮಾತನಾಡುತ್ತಿದ್ದೆ. ಇಲ್ಲಿ ಸಿದ್ಧಪಡಿಸಿದ ಸ್ಕ್ರಿಪ್ಟ್ ಇರುತ್ತಿರಲಿಲ್ಲ. ಪ್ರೇಕ್ಷಕರ ಮೂಡ್ ನೋಡಿಕೊಂಡು ಮಾತನಾಡಬೇಕು. ಕೆಲವು ಊರಿನ ಸ್ಪರ್ಧಿಗಳು ಮೌನಿಗಳಾದರೆ, ಇನ್ನು ಕೆಲವರು ಟೀವಿ ಪರದೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಬಾಯಿತುಂಬಾ ಮಾತನಾಡುತ್ತಾರೆ.ಕಾರ್ಯಕ್ರಮ ವೀಕ್ಷಿಸಲು ಹೊರಾಂಗಣದಲ್ಲಿ ಹತ್ತರಿಂದ ಹದಿನೈದು ಸಾವಿರ ಮಂದಿ ಸೇರಿದ್ದೂ ಉಂಟು. ಅವರವರ ಭಾವಕ್ಕೆ ತಕ್ಕಂತೆ ಮಾತಿನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಹಾಡಬೇಕಿದ್ದ ಹಾಡಿಗೆ ಬೇಕಿದ್ದ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದೆನೇ ಹೊರತು ಮಾತಿಗಾಗಿ ತಯಾರಿ ನಡೆಸಿದ್ದಿಲ್ಲ. ಶಾಸ್ತ್ರೀಯ ಸಂಗೀತದ ಹಿನ್ನೆಲೆ ಇಲ್ಲದೆಯೂ ನಾನು ಹಾಡುಗಾರ ಎನಿಸಿಕೊಂಡಿದ್ದಕ್ಕೆ ಸದಾ ಹೆಮ್ಮೆಪಡುತ್ತೇನೆ.ಒಂಬತ್ತನೇ ತರಗತಿಯಲ್ಲಿ ನಾಟಕವೊಂದರಲ್ಲಿ ನಟಿಸಿದ್ದು ಬಿಟ್ಟರೆ ವೇದಿಕೆ ಹತ್ತಿದ್ದೇ ಇಲ್ಲ. ಬರಿಗೈಯಲ್ಲಿ ಬೆಂಗಳೂರಿಗೆ ಬಂದವನು ನಾನು. ಇಂದಿಗೂ ನನಗೆ ಸಿಗುವ ಎಲ್ಲಾ ಪಾತ್ರಗಳನ್ನು ಒಪ್ಪಿಕೊಂಡರೆ ವರ್ಷಕ್ಕೆ ಐವತ್ತು ಚಿತ್ರಗಳಲ್ಲಿ ನಟಿಸಬಹುದು. ಆದರೆ ನನಗದು ಇಷ್ಟವಾಗುತ್ತಿಲ್ಲ. ಈವರೆಗೆ ನಾನು ನಟಿಸಿದ್ದು 125 ಚಿತ್ರಗಳಲ್ಲಿ. ಸ್ವಂತ ನಿರ್ಮಾಣ ಆರಂಭಿಸಿದ ಬಳಿಕ ವರ್ಷಕ್ಕೊಂದು ಸಿನಿಮಾ ನಿರ್ಮಿಸುತ್ತಿದ್ದೇನೆ. ನನ್ನ ಬ್ಯಾನರ್‌ನಲ್ಲಿ ಇದೀಗ `ಅಂಬರೀಷ ಮಹಾತ್ಮೆ' ಸಿದ್ಧಗೊಂಡಿದ್ದು ಶೀಘ್ರದಲ್ಲೇ ತೆರೆಕಾಣಲಿದೆ.ಉತ್ತಮ ಚಿತ್ರಗಳ ಸಾಲು 1999-2000ದಲ್ಲಿ ಕೊನೆಗೊಂಡಿದೆ. ಆ ಬಳಿಕದ ಚಿತ್ರಗಳಾವುವೂ ಒಮ್ಮೆ ನೋಡಿದರೆ ಮತ್ತೆ ನೋಡಬೇಕು ಎನಿಸುವುದಿಲ್ಲ. ಕನ್ನಡ ಚಿತ್ರರಂಗದ ಚೌಕಟ್ಟು ಬದಲಾಗಿ ಹೋಗಿದೆ. ಈ ಬಗ್ಗೆ ನನಗೂ ಬೇಸರವಿದೆ.ಮಾತೇ ಮುತ್ತು, ಮಾತೇ ಮೃತ್ಯು. ನಯವಾಗಿ ಮಾತನಾಡಿದರೆ ಅದು ಹೂವಿನಂತೆ, ಮಧುರವೂ ಹೌದು, ಸುಮಧುರವೂ ಹೌದು. ಅದೇ ಮಾತು ಹಗುರವಾಗಿ, ಅನ್ಯರನ್ನು ನೋಯಿಸುವಂತಿದ್ದರೆ ಅದು ಕೊಲೆಗೆ ಸಮಾನ. ಮಾತಿನಿಂದ ಜಯಿಸಬೇಕೇ ಹೊರತು ಎಂದಿಗೂ ಸೋಲಬಾರದು. ಹೀಗಾಗಿ ಮಾತು ಮುತ್ತಾಗಲಿ, ಮೃತ್ಯುವಾಗುವುದು ಬೇಡ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry