ಬುಧವಾರ, ಏಪ್ರಿಲ್ 14, 2021
31 °C

ಮುತ್ತಿಗೆಗೆ ಹರಿದು ಬಂತು ಜನಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಸರಗೋಡು:  ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನವಿರೋಧಿ ಆಡಳಿತ ಮತ್ತು ಬೆಲೆಏರಿಕೆ ಖಂಡಿಸಿ ಬುಧವಾರ ಸಿಪಿಎಂ ರಾಜ್ಯದಾದ್ಯಂತ ಕರೆ ನೀಡಿದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಬೃಹತ್ ಪ್ರತಿಭಟನೆಯಾಗಿ ಮೂಡಿಬಂತು.ವಿದ್ಯಾನಗರದ ಕೆ.ಸಿ.ರಸ್ತೆಯಿಂದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ವರೆಗಿನ ಅರ್ಧ ಕಿ.ಮೀ. ಉದ್ದದ ರಸ್ತೆ  ಪ್ರತಿಭಟನಾಕಾರರಿಂದ ತುಂಬಿತು. ಸರ್ಕಾರದ ಜನವಿರೋಧಿ ಆಡಳಿತದ ವಿರುದ್ಧದ ಘೋಷಣೆಗಳು ಮುಗಿಲು ಮುಟ್ಟಿತು. ಮಹಿಳೆಯರೂ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದು, ತಮ್ಮ ರೋಷ ಪ್ರಕಟಿಸಿದರು.ಬುಧವಾರ ಬೆಳಿಗ್ಗೆಯೇ ಜಿಲ್ಲಾಧಿಕಾರಿ ಕಚೇರಿಯ ಎಲ್ಲಾ ದ್ವಾರಗಳಲ್ಲಿ ವಿವಿಧ ಪಂಚಾಯಿತಿ ವ್ಯಾಪ್ತಿಯಿಂದ ಬಂದ ಜನರು ಕಾವಲು ಕುಳಿತು ತಡೆ ನಿರ್ಮಿಸಿದರು. ಕಚೇರಿಯ ಕರ್ತವ್ಯಕ್ಕೆ ಹಾಜರಾಗಲು ಜಿಲ್ಲಾಧಿಕಾರಿಯಿಂದ ಹಿಡಿದು ಕೆಳದರ್ಜೆ ನೌಕರರಿಗೂ ಸಾಧ್ಯವಾಗಲಿಲ್ಲ. ಜಿಲ್ಲಾಧಿಕಾರಿ ಕಚೇರಿಯ ಎಲ್ಲಾ ದ್ವಾರಗಳ ಗೇಟುಗಳನ್ನು ಮುಚ್ಚಿ ಪೊಲೀಸರು ಒಳಗಡೆ ಕಾವಲು ಕುಳಿತಿದ್ದರು. ರಸ್ತೆಯುದ್ದಕ್ಕೂ ಪ್ರತಿಭಟನಾಕಾರರು ಕುಳಿತು ಹಾಗೂ ರಸ್ತೆ ಬದಿ ಕಿಕ್ಕಿರಿದು ನಿಂತು ಜಿಲ್ಲಾಧಿಕಾರಿ ಕಚೇರಿಗೆ ಜನರು ಅಕ್ಷರಶಃ ಮುತ್ತಿಗೆ ಹಾಕಿದರು.ಜನದಟ್ಟಣೆಯಿಂದಾಗಿ ವಿದ್ಯಾನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತು.ಪರದಾಡಿದ ಜನರು: ಮುತ್ತಿಗೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಅಗತ್ಯ ಕಾರ್ಯಗಳಿಗೆ ಬರಲು ಸಾರ್ವಜನಿಕರು ಪರದಾಡಿದರು. ಜಿಲ್ಲಾ ನ್ಯಾಯಾಲಯಕ್ಕೆ ಕೆಲಸ-ಕಾರ್ಯಗಳಿಗೆ ಜನರು ಸುತ್ತಿ ಸುಳಿದು ಬರಬೇಕಾಯಿತು.ಸರಣಿ ರಜೆ: ಕಳೆದ ಶನಿವಾರದಿಂದಲೇ ಬಹುತೇಕ ನೌಕರರು ರಜೆಯಲ್ಲಿದ್ದು, ಸೋಮವಾರ ರಂಜಾನ್, ಮಂಗಳವಾರ ಸಹಯೋಗಿ ಪೆನ್ಶನ್ ಯೋಜನೆ ಖಂಡಿಸಿ ಮುಷ್ಕರ, ಬುಧವಾರ ಜಿಲ್ಲಾಧಿಕಾರಿ ಮುತ್ತಿಗೆ ಮನಗಂಡು ಇದೇ 23ರಿಂದ 25ರ ವರೆಗೆ ರಜೆ ಹಾಕಿದ್ದು, ಬರುವ ಓಣಂ ಹಬ್ಬದ ಮಜಾ ಅನುಭವಿಸಲು ನಿರ್ಧರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.