ಮುತ್ತಿನ ಮತ್ತಲ್ಲಿ 70

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542

ಮುತ್ತಿನ ಮತ್ತಲ್ಲಿ 70

Published:
Updated:
ಮುತ್ತಿನ ಮತ್ತಲ್ಲಿ 70

ಚಂದ್ರನನ್ನು ತನ್ನೊಳಗೆ ಬಂಧಿಸಿದ್ದರೂ ಆ ಸುಂದರ ರಾತ್ರಿಯ ಸಮಾರಂಭದಲ್ಲಿ ಸಿನಿ ತಾರೆಯರ ಲೋಕ ಮೂಡಿಸಿದ್ದ ಬೆಳಕನ್ನು ಮರೆಮಾಡಲು ಮೇಘರಾಜನಿಗೂ ಸಾಧ್ಯವಾಗಿರಲಿಲ್ಲ. ಅದು ಸದ್ದು ಗದ್ದಲದ ಸಮಾರಂಭ. ಕಣ್ಣು ಹಾಯಿಸಿದಲ್ಲೆಲ್ಲಾ ತಾರೆಯರದೇ ಮುಖ. ಕೈಯಲ್ಲಿ ಬಣ್ಣಬಣ್ಣದ ಹೂಗಳ ಗುಚ್ಛ, `ಹೋ...~ ಎಂಬ ಹರ್ಷೋದ್ಗಾರ, ಮುತ್ತಿನ ಸುರಿಮಳೆ.ನಟ-ನಿರ್ಮಾಪಕ ದ್ವಾರಕೀಶ್ 70ನೇ ವಸಂತಕ್ಕೆ ಕಾಲಿಟ್ಟ ಸಂಭ್ರಮದ ಆಚರಣೆಯ ದಿನವದು. ಜೊತೆಗೆ ಅವರ ಚಿತ್ರರಂಗದ ಬದುಕೂ ಅರ್ಧಶತಕವನ್ನು ಮುಟ್ಟಿತ್ತು. ಅದ್ದೂರಿ ಅಲ್ಲದಿದ್ದರೂ, ಹಿರಿ-ಕಿರಿ ತಾರೆಯರ ಸಂಗಮ ಸಮಾರಂಭಕ್ಕೆ ಕಳೆತಂದುಕೊಟ್ಟಿತ್ತು. ಹೊತ್ತೇರುತ್ತಿದ್ದಂತೆ ದ್ವಾರಕೀಶ್‌ಗೆ ಶುಭಾಶಯ ಕೋರಲು ಆಗಮಿಸುತ್ತಿದ್ದ ಚಿತ್ರರಂಗದ ಸದಸ್ಯರ ದಂಡು ಹೆಚ್ಚುತ್ತಲೇ ಇತ್ತು.ಮೈಕು ಕೈಗೆತ್ತಿಕೊಂಡವರೆಲ್ಲಾ ಕೆಲವೇ ಸಾಲುಗಳಿಗೆ ತಮ್ಮ ಹಾಗೂ ದ್ವಾರಕೀಶ್ ಬಾಂಧವ್ಯದ ನೆನಪನ್ನು ಮಿತಿಗೊಳಿಸಿದರು. ಮಾತಿಗಿಂತ ಅಲ್ಲಿ ಉತ್ಸಾಹದ ಕೇಕೆಯ ಸದ್ದೇ ಜೋರಾಗಿತ್ತು. ಮಾಜಿ ಮತ್ತು ಹಾಲಿ ನಾಯಕಿಯರು ಸುರಿಸಿದ ಮುತ್ತಿನ ಮಳೆಯಲ್ಲಿ ದ್ವಾರಕೀಶ್ ತೋಯ್ದುಹೋಗಿದ್ದರು.ದ್ವಾರಕೀಶ್ ಮಹಾ ಹಟಮಾರಿ. ಅಂದುಕೊಂಡದ್ದನ್ನು ಮಾಡಿಯೇ ತೀರುವ, ಸೋಲುವ ಜಾಯಮಾನದಲ್ಲದ ವ್ಯಕ್ತಿ ಎನ್ನುವುದು ಹಿರಿಯ ನಟಿ ಎಂ.ಎನ್. ಲಕ್ಷ್ಮೀದೇವಿ ಅವರ ಬಣ್ಣನೆ.

 

ನಟ ಶ್ರೀನಿವಾಸಮೂರ್ತಿ ತಮ್ಮ ಮೊದಲ ಚಿತ್ರ `ಹೇಮಾವತಿ~ ಬಿಡುಗಡೆಯಾದ ಬಳಿಕ ದ್ವಾರಕೀಶ್‌ರ ಭೇಟಿಯ ಸಂದರ್ಭವನ್ನು ಮೆಲುಕು ಹಾಕಿದರು. ಇಡೀ ಚಿತ್ರರಂಗವನ್ನು ಒಂದು ಕಾಲದಲ್ಲಿ ನಡೆಸಿದ ವ್ಯಕ್ತಿ ಎಂದು ದ್ವಾರಕೀಶ್‌ರ ಸಾಧನೆಯನ್ನು ತೆರೆದಿಟ್ಟರು ಕೆ.ಎಸ್.ಎಲ್. ಸ್ವಾಮಿ. ಕರ್ತವ್ಯ ಎಂದರೆ ಪ್ರಾಣಬಿಡುವವರು ದ್ವಾರಕೀಶ್ ಎಂದರು ಹಿರಿಯ ನಟಿ ಬಿ.ಸರೋಜಾದೇವಿ. `ಭಾಗ್ಯವಂತರು~ ಚಿತ್ರಕ್ಕೆ ಸೆಟ್ ಹಾಕಿದ್ದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಅವರು ನೆನಪಿಸಿಕೊಂಡು ನಕ್ಕರು.ನಾನು ಕಂಡ ಅತ್ಯಂತ ರಸಿಕ ಎಂದರೆ ದ್ವಾರಕೀಶ್ ಎಂದರು ನಟ ಆರ್.ಎನ್. ಸುದರ್ಶನ್. `ಪ್ರಚಂಡ ಕುಳ್ಳ~ ಚಿತ್ರದಲ್ಲಿ ತಮಗೆ ಖಳನಾಯಕನ ವೇಷ ಹಾಕಿಸಿ ಜನರ ಮನಸ್ಸಲ್ಲಿ ಅಚ್ಚಳಿಯದಂತೆ ಮಾಡಿದ ದ್ವಾರಕೀಶ್‌ಗೆ ಅವರು ಧನ್ಯವಾದ ಅರ್ಪಿಸಿದರು. ತಮಗೆ `ಪ್ರಣಯರಾಜ~ನಾಗಲು ದ್ವಾರಕೀಶ್ ಅವರೇ ಸ್ಫೂರ್ತಿ ಎನ್ನುವುದು ನಟ ಶ್ರೀನಾಥ್ ಮಾತು. ದ್ವಾರಕೀಶ್ ಇನ್ನೂ ನವಯುವಕರಂತೆ ಎನ್ನುವುದು ಹಲವರ ಅನಿಸಿಕೆ. ಆ ಮಾತಿಗೆ ಪೂರಕವೆಂಬಂತೆ ದ್ವಾರಕೀಶ್‌ರಲ್ಲಿ ಅಂದು ಉತ್ಸಾಹ ತುಂಬಿ ತುಳುಕುತ್ತಿತ್ತು.ಕತ್ತಲು ಹೆಚ್ಚುತ್ತಿದ್ದಂತೆ ಕಾರ್ಯಕ್ರಮದ ರಂಗು ಜೋರಾಗುತ್ತಿತ್ತು. ರವಿಚಂದ್ರನ್, ಅಂಬರೀಷ್, ಶಿವರಾಜ್‌ಕುಮಾರ್, ಸುಧಾರಾಣಿ, ಜಯಂತಿ, ಬಿ.ಜಯಾ, ರಮೇಶ್ ಭಟ್, ಶಿವರಾಂ, ಲೀಲಾವತಿ, ಸುಮಲತಾ, ಸಿ.ಆರ್. ಸಿಂಹ, ಅಂಕಲಗಿ ಮುಂತಾದ ಚಿತ್ರರಂಗದ ಹಿರಿಯ ಕಲಾವಿದರು ದ್ವಾರಕೀಶ್‌ಗೆ ಶುಭ ಹಾರೈಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry