ಮುತ್ತು ಕೊಟ್ಟವಳಿಗೊಂದು ಡಿಶುಂ!

7

ಮುತ್ತು ಕೊಟ್ಟವಳಿಗೊಂದು ಡಿಶುಂ!

Published:
Updated:

ಮಂಗಳೂರು: ನಗರದಲ್ಲಿ ಭಾನುವಾರ ಚಿನ್ನಾಭರಣ ಮಳಿಗೆಯೊಂದರ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಮುತ್ತು ಕೊಟ್ಟ ಪ್ರಮದೆಯು ಬಾಲಿವುಡ್ ನಟ ಜಾನ್ ಅಬ್ರಹಾಂ ಅವರಿಂದ ಏಟು ತಿನ್ನಬೇಕಾಯಿತು.ಚಿನ್ನದ ಮಳಿಗೆಯನ್ನು ಜಾನ್ ಅಬ್ರಾಹಂ ಉದ್ಘಾಟಿಸುವರು ಎಂದು ವಿಷಯ ತಿಳಿದ ಯುವ ಸಮೂಹ ಬೆಳಿಗ್ಗೆಯಿಂದಲೇ ಮಳಿಗೆಯ ಸುತ್ತ ಜಮಾಯಿಸಿತ್ತು.ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಿಗದಿಯಾಗಿತ್ತು. ಮಧ್ಯಾಹ್ನ 12.15ರ ವೇಳೆಗೆ ಜಾನ್ ಮಳಿಗೆಗೆ ಆಗಮಿಸಿದರು. ಈ ವೇಳೆಗೆ ಯುವಜನರು ಜಾನ್ ಅಬ್ರಹಾಂ ಅವರ ಕೈ ಕುಲುಕಲು, ಹಸ್ತಾಕ್ಷರ ಪಡೆಯಲು ಮುಗಿ ಬಿದ್ದರು.ಪೊಲೀಸರು ಹಾಗೂ ಖಾಸಗಿ ಭದ್ರತಾ ಪಡೆ ಕಾವಲಿದ್ದರೂ ಯುವಜನರ ಉತ್ಸಾಹ ಕಡಿಮೆಯಾಗಲಿಲ್ಲ. ಒಬ್ಬ ಯುವತಿ ಉತ್ಸಾಹದಲ್ಲಿ ಜಾನ್ ಕೈ ಕಚ್ಚಲು ಯತ್ನಿಸಿದಳು. ಮತ್ತೊಬ್ಬಳು ಯುವತಿ ಬಿಗಿದಪ್ಪಿ ಮುತ್ತು ಕೊಟ್ಟಳು.ಜಾನ್ ಆಕೆಯನ್ನು ದೂರಕ್ಕೆ ತಳ್ಳಿ ಒಂದು ಏಟು ಕೊಟ್ಟರು. ಒಂದಿಬ್ಬರನ್ನು ಮುಂಗೈಯಿಂದ ದೂಡಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.ಸಾವಿರಕ್ಕೂ ಅಧಿಕ ಮಂದಿ ಸೇರಿದ್ದು, ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಯುವಜನರು ಮಳಿಗೆಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಎರಡು ಬಾರಿ ಲಘು ಲಾಠಿ ಪ್ರಹಾರ ಮಾಡಿದರು. ಪರಿಸ್ಥಿತಿ ನಿಯಂತ್ರಣ ಕಷ್ಟ ಎನಿಸಿದ ಹಿನ್ನೆಲೆಯಲ್ಲಿ ನಟನ ಪತ್ರಿಕಾಗೋಷ್ಠಿ ರದ್ದಾಯಿತು. ಕಾರ್ಯಕ್ರಮ ಮುಗಿಸಿ ನಟ ಖಾಸಗಿ ಹೋಟೆಲ್‌ಗೆ ಆಗಮಿಸಿದಾಗಲೂ ಯುವ ಪಡೆ ಬೆನ್ನತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry