ಮುತ್ತೂಟ್ ಫೈನಾನ್ಸ್: ಶೀಘ್ರದಲ್ಲೇ ಬಾಂಡ್

7

ಮುತ್ತೂಟ್ ಫೈನಾನ್ಸ್: ಶೀಘ್ರದಲ್ಲೇ ಬಾಂಡ್

Published:
Updated:

ಮುಂಬೈ (ಪಿಟಿಐ): ದೇಶದ ಪ್ರಮುಖ ಚಿನ್ನದ ಸಾಲ ಸಂಸ್ಥೆ ಮುತ್ತೂಟ್ ಫೈನಾನ್ಸ್, ಈ ತಿಂಗಳ ಅಂತ್ಯಕ್ಕೆ ಬಾಂಡ್ ಪ್ರಕಟಿಸಲಿದ್ದು, ಸುಮಾರು ರೂ 500 ಕೋಟಿ ಬಂಡವಾಳ ಸಂಗ್ರಹಿಸುವ ಯೋಜನೆ ಹೊಂದಿದೆ.ಬಾಂಡ್ ಪ್ರಕಟಣೆಗೆ ಅನುಮತಿ ಕೇಳಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಮನವಿ ಸಲ್ಲಿಸಲಾಗಿದೆ. ಇದರ ಜತೆಗೆ ಸುಮಾರು ರೂ 250 ಕೋಟಿ ಮೊತ್ತದ ಪರಿವರ್ತಿಸಲಾಗದ ಸಾಲಪತ್ರಗಳ (ಎನ್‌ಸಿಡಿ) ವಿತರಣೆಗೂ ಅನುಮತಿ ಕೇಳಲಾಗಿದ್ದು, ಶೀಘ್ರದಲ್ಲೇ `ಸೆಬಿ~ ಹಸಿರು ನಿಶಾನೆ ತೋರಲಿದೆ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಅಲೆಕ್ಸಾಂಡ್ ತಿಳಿಸಿದ್ದಾರೆ.ಪ್ರಸಕ್ತ  ಹಣಕಾಸು ವರ್ಷದಲ್ಲಿ ಈಗಾಗಲೇ ಕಂಪೆನಿ ಎರಡು ಬಾರಿ `ಎನ್‌ಸಿಡಿ~ ಬಿಡುಗಡೆ ಮಾಡಿದ್ದು, ರೂ 1,150 ಕೋಟಿ ಬಂಡವಾಳ ಸಂಗ್ರಹಿಸಿದೆ.  ಎರಡು ವರ್ಷಗಳ ಬಾಂಡ್‌ಗಳಿಗೆ ಶೇ 13 ಮತ್ತು 3ರಿಂದ 5 ವರ್ಷಗಳ ಬಾಂಡ್‌ಗಳಿಗೆ ಶೇ 13.25ರಷ್ಟು ಬಡ್ಡಿ ದರ  ನೀಡಿತ್ತು. ಆದರೆ, ಈ ಬಾರಿ ಇನ್ನೂ ಬಡ್ಡಿ ದರ ನಿಗದಿಪಡಿಸಿಲ್ಲ ಎಂದು ಜಾರ್ಜ್ ಹೇಳಿದ್ದಾರೆ.ಹಲವು ಬ್ಯಾಂಕುಗಳು ಮತ್ತು ಮ್ಯೂಚುವಲ್ ಫಂಡ್‌ಗಳ ಮೂಲಕ  ಕಂಪೆನಿ ಇದುವರೆಗೆ ಒಟ್ಟು ರೂ10 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಿದೆ. ಇತ್ತೀಚೆಗೆ ಭಾರತೀಯ ರಿಸರ್ವ್  ಬ್ಯಾಂಕ್ (ಆರ್‌ಬಿಐ) ಚಿನ್ನದ ಸಾಲ ಸಂಸ್ಥೆಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ ಹೆಚ್ಚಿಸಿತ್ತು. ಇದು ಕಂಪೆನಿಯ ಬಂಡವಾಳ ಕ್ರೋಡೀಕರಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು. ಬಂಡವಾಳ ಕೊರತೆ ನೀಗಿಸಲು ಬಾಂಡ್ ಪ್ರಕಟಿಸುತ್ತಿರುವುದಾಗಿ ಕಂಪೆನಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry