ಮುತ್ತೂರಿನ ಮಗ

7

ಮುತ್ತೂರಿನ ಮಗ

Published:
Updated:
ಮುತ್ತೂರಿನ ಮಗ

ಒಬ್ಬ ಸರ್ಕಾರಿ ಅಧಿಕಾರಿ ವರ್ಗಾವಣೆ ನಂತರವೂ ತಾನು ಕರ್ತವ್ಯ ನಿರ್ವಹಿಸಿದ ಪ್ರದೇಶದ ಜನರೊಂದಿಗೆ ಸಂಬಂಧ ಉಳಿಸಿಕೊಳ್ಳುವುದು ಅಪರೂಪ. ಕಾಲ ಉರುಳಿದಂತೆ  ಜನರೂ ಅಧಿಕಾರಿಗಳನ್ನು ಮರೆತು ಬಿಡುತ್ತಾರೆ.

 

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುತ್ತೂರು ಗ್ರಾಮದ ಜನರು ಇದಕ್ಕೆ ಅಪವಾದ. ಕೋಲಾರ ಜಿಲ್ಲಾಧಿಕಾರಿಯಾಗಿದ್ದ ದಿ.ಸಂಜಯದಾಸ್ ಗುಪ್ತ ಅವರ ನೆನಪು ಇಂದಿಗೂ ಊರ ಜನರ ಮನೋಭಿತ್ತಿಯಲ್ಲಿ ಅಚ್ಚಳಿಯದೆ ಉಳಿದಿದೆ! ಊರ ಜನರು ಈಗಲೂ ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಅವರು ಮುತ್ತೂರಿನ ಹೆಮ್ಮೆಯ ಮಗ.`ಸಂಜಯ ನೀನು ಮೃತ್ಯಂಜಯ. ದಾಸ ನೀನು ಕರ್ತವ್ಯಕ್ಕೆ. ಗುಪ್ತವಾಗಿ ನೀನೆಲ್ಲಿಗೆ ತೆರಳಿದೆ? ಅನುದಿನವೂ ಅನು ಕ್ಷಣವೂ ಅರ್ಪಣೆ ನಿನ್ನ ನೆನಪಿಗೆ~

ಮುತ್ತೂರಿನ ಪ್ರೌಢಶಾಲೆ ಗೋಡೆಯ ಮೇಲೆ ಈ ಸಾಲುಗಳಿವೆ. ಸಂಜಯದಾಸ್ ಗುಪ್ತ ಮತ್ತು ಮುತ್ತೂರು ಜನರ ನಡುವಿನ ಭಾವನಾತ್ಮಕ ಬೆಸುಗೆಯನ್ನು ಈ ಸಾಲುಗಳು ಸೂಚಿಸುತ್ತವೆ.1992ರಿಂದ 94ರವರೆಗೆ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಪಶ್ಚಿಮ ಬಂಗಾಳ ಮೂಲದ ಸಂಜಯದಾಸ್ ಗುಪ್ತ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಲಾಟರಿ ಮೂಲಕ ಮುತ್ತೂರು ಆಯ್ಕೆಯಾದಾಗ ಗ್ರಾಮಕ್ಕೆ ಬಂದರು. ಆ ಸಂದರ್ಭದಲ್ಲಿ ಊರ ಜನರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದರು.ಗ್ರಾಮದಲ್ಲಿ ಮೂರು ದಿನ ಅವರು ಮೊಕ್ಕಾಂ ಹೂಡಿದ್ದರು. ಕೆರೆ ಹೂಳೆತ್ತುವ ಕಾಮಗಾರಿ ಮುಗಿದ ಮೇಲೂ ಅವರು ಮುತ್ತೂರಿನ ನಂಟನ್ನು ಕಡಿದುಕೊಳ್ಳಲಿಲ್ಲ. ಅವರು ಜಿಲ್ಲೆಯಲ್ಲಿದ್ದ ಅವಧಿಯಲ್ಲಿ ತಿಂಗಳಿಗೊಮ್ಮೆ ಗ್ರಾಮಕ್ಕೆ ಭೇಟಿ ನೀಡುತ್ತಿದ್ದರು.ಕುಗ್ರಾಮವಾಗಿದ್ದ ಮುತ್ತೂರಿಗೆ ಕುಡಿಯುವ ನೀರು ಪೂರೈಸಲು ನಲ್ಲಿ ವ್ಯವಸ್ಥೆ ಮಾಡಿದರು. ದೂಳು ತುಂಬಿದ್ದ ಊರಿನ ರಸ್ತೆಗಳಿಗೆ ಕಲ್ಲಿನ ಬಿಲ್ಲೆಗಳನ್ನು ಹೊದಿಸಿದರು. ಗ್ರಾಮದ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ಒದಗಿಸಿದರು. ಹೂಳು ತುಂಬಿದ್ದ 158 ಎಕರೆ ವಿಸ್ತೀರ್ಣದ ಕೆರೆಯನ್ನು ಅಭಿವೃದ್ಧಿ ಪಡಿಸಿದರು.ಪಕ್ಕದ ಗುಡ್ಡ ಪ್ರದೇಶದಿಂದ ಕೆರೆಗೆ ನೀರು ಹರಿದು ಬರಲು ಮೂರೂವರೆ ಕಿಲೋಮೀಟರ್ ಉದ್ದದ ಕಾಲುವೆ ತೋಡಿಸಿದರು. ಇದರಿಂದಾಗಿ ಸ್ವಲ್ಪ ಮಳೆ ಬಂದರೂ ಗ್ರಾಮದ ಕೆರೆ ತುಂಬುತ್ತಿತ್ತು. ಸುತ್ತಲಿನ 4,5ಹಳ್ಳಿಗಳ ಅಂತರ್ಜಲ ಮಟ್ಟ ಉತ್ತಮಗೊಂಡಿತು. 1994ರಲ್ಲಿ ಮುತ್ತೂರಿನಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಸಂಘಟಿಸಿದ್ದರು.ಶಿಕ್ಷಣದಿಂದ ಮಾತ್ರ ಗ್ರಾಮಗಳನ್ನು ಸುಧಾರಿಸಬಹುದು ಎಂದು ನಂಬಿದ್ದ ದಾಸ್ ಗುಪ್ತ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು ಮಾಡಿಸಿದರು. ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮಸ್ಥರೊಂದಿಗೆ ಬೆರೆತರು.ಗ್ರಾಮದ ಅಭಿವೃದ್ಧಿಗೆ ಸಂಜಯ್ ದಾಸ್ ಗುಪ್ತ ತೋರಿಸಿದ ಕಾಳಜಿಯನ್ನು ಊರ ಜನರು ಮೆಚ್ಚಿಕೊಂಡರು. ಅಷ್ಟೇ ಅಲ್ಲ ಊರ ಜನರಲ್ಲಿ ಅವರು ನಮ್ಮ ಊರಿನವರೇ ಎಂಬ ಭಾವನೆ ಬೆಳೆಯಿತು. ಸಂಜಯ್ ಅವರೂ ಮುತ್ತೂರು ತಮ್ಮ ಹುಟ್ಟೂರು ಎಂದೇ ಭಾವಿಸಿದ್ದರು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ  ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ವಾರಕ್ಕೆ ಎರಡು ಸಲ ಮುತ್ತೂರಿಗೆ ಬಂದು ಜನರ ಆರೋಗ್ಯ ತಪಾಸಣೆ ಮಾಡುವ ವ್ಯವಸ್ಥೆ ಮಾಡಿಸಿದ್ದರು ಎಂದು ಈಗಲೂ  ನೆನಪು ಮಾಡಿಕೊಳ್ಳುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆಂಪೇಗೌಡ. ಗ್ರಾಮದ ಜನರಿಗೆ ಉದ್ಯೋಗ ದೊರಕಿಸಲು  ಹಲವು ಯೋಜನೆಗಳನ್ನು ಹಾಕಿಕೊಂಡಿದ್ದರು.

 

ಸಂಜಯ್‌ದಾಸ್ ಗುಪ್ತರನ್ನು ಸರ್ಕಾರ ಬೇರೆಡೆಗೆ ವರ್ಗ ಮಾಡಿದ ನಂತರವೂ ಅವರು ಊರಿನ ಸಂಬಂಧ ಕಳೆದುಕೊಳ್ಳಲಿಲ್ಲ. ತಿಂಗಳಿಗೊಮ್ಮೆ ಗ್ರಾಮಕ್ಕೆ ಭೇಟಿ ನೀಡುವುದನ್ನು ತಪ್ಪಿಸಲಿಲ್ಲ. 2005ರಲ್ಲಿ ಸಂಜಯ್‌ದಾಸ್‌ಗುಪ್ತ ಅವರು ಮರಣ ಹೊಂದಿದಾಗ ಮುತ್ತೂರಿನ ಜನರು ಬಸ್ ಮಾಡಿಕೊಂಡು ಬೆಂಗಳೂರಿಗೆ ಹೋಗಿ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು.

 

ಅವರ ಚಿತಾಭಸ್ಮವನ್ನು ತಂದು ಗ್ರಾಮದ ಕೆರೆಯಲ್ಲಿ ವಿಸರ್ಜಿಸಿದ್ದರು. ಅಷ್ಟೇ ಅಲ್ಲ ಅವರ ತಿಥಿಯನ್ನೂ ಗ್ರಾಮದಲ್ಲಿ ಮಾಡಿದ್ದರು ಎಂದು ಕೆಂಪೇಗೌಡರು ನೆನಪಿಸಿಕೊಳ್ಳುತ್ತಾರೆ.ಊರಿನ ಅನೇಕ ಅನಕ್ಷರಸ್ಥ ಹಿರಿಯ ಮಹಿಳೆಯರು ಗುಪ್ತರನ್ನು ತಮ್ಮ ಮಗನೆಂದೇ ಭಾವಿಸಿದ್ದರು. ಊರ ಜನರಿಗೆ ಅವರ ಬಗ್ಗೆ ಇದ್ದ ಗೌರವದ ಪ್ರತೀಕವಾಗಿ ಸಂಜಯದಾಸ್‌ಗುಪ್ತ ಕೆರೆ ಅಭಿವೃದ್ಧಿ ಸಂಘ, ಸಂಜಯದಾಸ್‌ಗುಪ್ತ ಯುವಕ ಸಂಘ, ಸಂಜಯದಾಸ್‌ಗುಪ್ತ ರಸ್ತೆ ಇತ್ಯಾದಿಗಳನ್ನು ಇಂದಿಗೂ ನೋಡಬಹುದು.ಗ್ರಾಮದಲ್ಲಿ ಪ್ರತಿವರ್ಷ ಸಂಜಯದಾಸ್ ಗುಪ್ತ ಹೆಸರಿನಲ್ಲಿ ಕ್ರೀಡಾ ಪಂದ್ಯಗಳು ನಡೆಯುತ್ತವೆ. ಊರ ಜನರಲ್ಲಿ  ಏನೇ ಭಿನ್ನಾಭಿಪ್ರಾಯಗಳಿದ್ದರೂ ಗುಪ್ತರ ಅವರ ನೆನಪಿನ ಕಾರ್ಯಕ್ರಮಗಳೆಂದರೆ ಎಲ್ಲರೂ ಒಗ್ಗೂಡುತ್ತಾರೆ.

 

ಗುಪ್ತ ಅವರ ಕುಟುಂಬದವರಿಗೂ ಮುತ್ತೂರಿನ ಮೇಲಿನ ಮಮತೆ ಕಡಿಮೆಯಾಗಿಲ್ಲ. ಗುಪ್ತ ಅವರೊಂದಿಗೆ ಅವರ ಪತ್ನಿ ಶಾಂಗೋನ್ ದಾಸ್ ಗುಪ್ತರೊಂದಿಗೆ ಮುತ್ತೂರಿಗೆ ಬರುತ್ತಿದ್ದರು.ಈಗ ಶ್ರೀಮತಿ ಗುಪ್ತ ಹಾಗೂ ಮತ್ತು ಅವರ ಒಡನಾಡಿ ಉಷಾ ಶೆಟ್ಟಿ ಗ್ರಾಮದ ಶಾಲೆಯನ್ನು ದತ್ತು ತೆಗೆದುಕೊಂಡು ಸೌಲಭ್ಯ ಕಲ್ಪಿಸುತ್ತಿದ್ದಾರೆ. ಶಾಲೆಗೆ ಸೋಲಾರ್ ವ್ಯವಸ್ಥೆ ಕಲ್ಪಿಸಿದ್ದಾರೆ. ಅಲ್ಲದೇ ವಿದ್ಯುತ್ ಅಭಾವದಿಂದ ಮಕ್ಕಳ ಶಿಕ್ಷಣ ಕುಂಠಿತವಾಗಬಾರದು ಎನ್ನುವ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸೋಲಾರ್ ಬಲ್ಪ್‌ಗಳನ್ನು ನೀಡಿದ್ದಾರೆ.ವಿದ್ಯಾರ್ಥಿಗಳನ್ನು ನಿತ್ಯ ಬಲ್ಪನ್ನು ಶಾಲೆಗೆ ತಂದು ಚಾರ್ಜ್ ಮಾಡಿಕೊಂಡು ಹೋಗುತ್ತಾರೆ. ಅದರ ಬೆಳಕಿನಲ್ಲಿ ರಾತ್ರಿ ಮನೆಯಲ್ಲಿ ಓದು-ಬರಹ ಮಾಡುತ್ತಾರೆ. ಶ್ರೀಮತಿ ಗುಪ್ತ ಪರಿಸರ ಜಾಗೃತಿ, ಆರೋಗ್ಯ ಶಿಬಿರಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸಂಘ, ಸಂಸ್ಥೆಗಳ ನೆರವು ಪಡೆದು ಗ್ರಾಮದಲ್ಲಿ ಜಾಗೃತಿ ಕೈಗೊಂಡಿದ್ದಾರೆ.ಸರ್ಕಾರಿ ಅಧಿಕಾರಿಗಳನ್ನು ಹಳ್ಳಿಗಳ ಜನರು ಮರೆತೇ ಬಿಡುವ ಸಾಧ್ಯತೆ ಹೆಚ್ಚು. ಆದರೆ ಮುತ್ತೂರು ಗ್ರಾಮಸ್ಥರು ಸಂಜಯದಾಸ್ ಗುಪ್ತರನ್ನು ಮನೆಯ ಮಗನೆಂದೇ ಭಾವಿಸಿ ಇಂದಿಗೂ ಸ್ಮರಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry