ಮುತ್ತೂರ ನಡುಗಡ್ಡೆ ಕೃಷ್ಣಾನದಿ ಪ್ರವಾಹದಿಂದ ಜಲಾವೃತ

ಜಮಖಂಡಿ: ತಾಲ್ಲೂಕಿನ ಮುತ್ತೂರ ಗ್ರಾಮದ ನಡುಗಡ್ಡೆ ಕೃಷ್ಣಾನದಿ ಪ್ರವಾಹದಿಂದ ಜಲಾವೃತಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅಥವಾ ಪ್ರವಾಹ ನಿರ್ವಹಣೆ ನೋಡಲ್ ಅಧಿಕಾರಿ ನಡುಗಡ್ಡೆಗೆ ಭೇಟಿ ನೀಡಿಲ್ಲ ಎಂದು ಪ್ರವಾಹ ಸಂತ್ರಸ್ತರು ದೂರಿದ್ದಾರೆ. ಪ್ರವಾಹ ಸಂತ್ರಸ್ತರಿಗಾಗಿ ಗಂಜಿಕೇಂದ್ರ ತೆರೆಯಲಾಗಿದೆ. ಜಾನುವಾರುಗಳಿಗೆ ಮೇವು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
ಪ್ರವಾಹ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದರೆ, ಯಾವೊಬ್ಬ ಅಧಿಕಾರಿಯೂ ಸಂತ್ರಸ್ತರನ್ನು ಸ್ಥಳಾಂತರಿಸಲು ಬಂದಿಲ್ಲ. ಸ್ಥಳಾಂತರಿಸಲು ಸಂತ್ರಸ್ತರ ಮನವೊಲಿಕೆಗೆ ಮುಂದಾಗಿಲ್ಲ ಎಂದು ಭೀಮಪ್ಪ ಹಿಪ್ಪರಗಿ ಆರೋಪಿಸಿದ್ದಾರೆ.
ಈ ಮೊದಲು 15–20 ದಿನಗಳ ಹಿಂದೆ ಕೃಷ್ಣಾನದಿಗೆ ಬಂದಿದ್ದ ಪ್ರವಾಹಕ್ಕಿಂತ ಒಂದುವರೆ ಅಡಿಯಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಆದರೆ, ಅಧಿಕಾರಿಗಳು ಪ್ರವಾಹ ಕುರಿತು ನಿಗಾ ಇಟ್ಟಿಲ್ಲ. ನೀಡಿದ್ದ ಯಾವೊಂದು ಭರವಸೆ ಈಡೇರಿಸಿಲ್ಲ. ಅದಕ್ಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಕಾರಣ ಎಂದು ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಂತ್ರಸ್ತರನ್ನು ಸ್ಥಳಾಂತರಿಸುವುದು ದೂರದ ಮಾತಾಯಿತು. ದಿನನಿತ್ಯ ಬೇಕಾಗುವ ಅಗತ್ಯ ವಸ್ತುಗಳನ್ನು ತರಲು ನಡುಗಡ್ಡೆಯಿಂದ ನದಿ ದಾಟಿಸಲು ಬೋಟ್ಗಳಿಗೆ ಬೇಕಾಗುವ ಸೀಮೆಎಣ್ಣೆ ಪೂರೈಸುತ್ತಿಲ್ಲ. ನದಿ ದಾಟುವ ಗ್ರಾಮಸ್ಥರಿಂದ ಪಯಣದರ ಹಣ ಸಂಗ್ರಹಿಸಿ ಸ್ವಂತ ಸಂಪನ್ಮೂಲ ಕ್ರೋಡೀಕರಿಸಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಲ್ಲಿ ₹ 13 ಕೋಟಿ ಹಣವಿದೆ. ಸಂತ್ರಸ್ತರ ಸ್ಥಳಾಂತರಕ್ಕೆ, ಗಂಜಿ ಕೇಂದ್ರ ತೆರೆಯಲು ಅನುದಾನದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿಗಳು ನೀಡಿರುವ ಪತ್ರಿಕಾ ಹೇಳಿಕೆ ಹಾಸ್ಯಾಸ್ಪದ ಎನಿಸುತ್ತದೆ ಎಂದು ಸಂತ್ರಸ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ನಡುಗಡ್ಡೆಯಲ್ಲಿ ಸುಮಾರು 40 ಕುಟುಂಬಗಳ ಅಂದಾಜು 150 ಮಂದಿ ಇದ್ದಾರೆ. ನಡುಗಡ್ಡೆಯಲ್ಲಿರುವ ಸುಮಾರು 300 ಎಕರೆ ಜಮೀನು ಪೈಕಿ 250ಎಕರೆ ಜಮೀನು ಪ್ರವಾಹದಲ್ಲಿ ಮುಳುಗಿದೆ.
ಬೆಳೆದು ನಿಂತ ಕಬ್ಬು, ಬಾಳೆ ಮುಂತಾದ ಬೆಳೆಗಳು ನೀರಿನಲ್ಲಿ ಮುಳುಗಿ ಹೋಗಿವೆ ಎಂಬುದು ಸಂತ್ರಸ್ತರ ಅಳಲಾಗಿತ್ತು. ಒಂದು ಸಲ ಪ್ರವಾಹ ಬಂದು ಬೆಳೆದು ನಿಂತ ಮೇವು ನೀರಿನಲ್ಲಿ ಮುಳುಗಡೆಯಾದರೆ, ಮುಂದೊಂದು ತಿಂಗಳ ವರೆಗೆ ಮೇವು ಸಿಗುವುದಿಲ್ಲ. ಒಂದು ಚೀಲ ಹೊಟ್ಟಿಗೆ ₹ 600 ಬೆಲೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.
ನಡುಗಡ್ಡೆಯ ಮಕ್ಕಳು ತುಬಚಿ ಗ್ರಾಮದ ಶಾಲೆಗೆ ಹೋಗುತ್ತಾರೆ. ಆದರೆ, ಪ್ರವಾಹದಿಂದಾಗಿ ಎಲ್ಲ ರಸ್ತೆಗಳು ಮುಚ್ಚಿ ಹೋಗಿವೆ. ಮಕ್ಕಳು ಶಾಲೆಗೆ ಹೋಗದಂತಾಗಿದೆ. ಹುಳು ಹುಪ್ಪಡಿಗಳ ಕಾಟ ವಿಪರೀತವಾಗಿದೆ. ರಾತ್ರಿ 10 ಗಂಟೆಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಆಗ, ಅತ್ಯಂತ ಭಯಾನಕ ವಾತಾವರಣ ನಿರ್ಮಾಣ ಆಗುತ್ತದೆ.
ತಾಲ್ಲೂಕಿನ ಕಂಕಣವಾಡಿ–ಜಮಖಂಡಿ ರಸ್ತೆ ಪ್ರವಾಹದ ನೀರಿನಲ್ಲಿ ಮುಳುಗಿದೆ. ಕಂಕಣವಾಡಿ ಗ್ರಾಮಸ್ಥರು ಕಡಕೋಳ ಮಾರ್ಗವಾಗಿ ಸುತ್ತು ಬಳಸಿ ಜಮಖಂಡಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.
ಮುತ್ತೂರ ಗ್ರಾಮದ ನಡುಗಡ್ಡೆ ನಿವಾಸಿಗಳಾದ ಲಕ್ಷ್ಮಣ ಹಿಪ್ಪರಗಿ, ಶಿವಮೂರ್ತಿ ಹಿಪ್ಪರಗಿ, ರಾಮಪ್ಪ ಕರವಳ್ಳಿ, ಧರೆಪ್ಪ ನಾಟೀಕಾರ, ಹನಮಂತ ನಾಟೀಕಾರ, ಶಿವಕ್ಕ ನಾಟೀಕಾರ, ಗೀತಾ ನಾಟೀಕಾರ, ಶಿವಪುತ್ರ ಬಾಗೇವಾಡಿ, ರಾಮಪ್ಪ ತಳವಾರ, ಸಿದ್ದು ಮಾಳಿ, ಶಿವಾನಂದ ಆಲಬಾಳ, ಬಾಹುಬಲಿ ನ್ಯಾಮಗೌಡ, ರಾಜು ಮಗದುಮ ಮತ್ತಿತರರು ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.