ಮುತ್ಯಾಲಮಡುವಿನ ಜಲ ಸವಾಲು

7
ಸುತ್ತಾಣ

ಮುತ್ಯಾಲಮಡುವಿನ ಜಲ ಸವಾಲು

Published:
Updated:

‘ಜಗತ್ತಿನಲ್ಲಿ ಜಾದೂ ಇರುವುದಾದರೆ ಅದು ನೀರಿನಲ್ಲಿ’ ಎನ್ನುತ್ತಿದ್ದರು ಅಮೆರಿಕಾದ ಪ್ರಸಿದ್ಧ ದಾರ್ಶನಿಕ ಲೊರೆನ್ ಐಸ್ಲೆ. ಇದಕೆ ನಿದರ್ಶನವೆನ್ನುವಂತಿದೆ ‘ಮುತ್ಯಾಲಮಡುವು’. ಬೆಂಗಳೂರಿನ ದಕ್ಷಿಣಕ್ಕೆ ಕೇವಲ  ೪೦ ಕಿ. ಮೀ. ದೂರದಲ್ಲಿರುವ, ಕಿರಿದಾದರೂ  ಅತ್ಯಾಕರ್ಷಕವಾದ ಜಲಪಾತವಿದು. ತನ್ನ ಮೇಲೆ ಸೂರ್ಯರಶ್ಮಿ ಬಿದ್ದಾಗ ದೊಡ್ಡ ಬಳ್ಳದಿಂದ ಮುತ್ತುಗಳೇ ಸುರಿಯುತ್ತಿವೆಯೇನೊ ಎಂದು ಅನಿಸುತ್ತದೆ.ಕೆಲವೊಮ್ಮೆ ನೀರನ್ನೇ ಎಳೆಗಳನ್ನಾಗಿಸಿಕೊಂಡು ಹಗ್ಗ ಹೊಸೆದು ಯಾರೊ ಇಳಿಬಿಡುತ್ತಿರುವಂತೆ ಭಾಸವಾಗುತ್ತದೆ. ‘ಮುತ್ತುಗಳ ಕಣಿವೆ’ ಅಂತಲೂ ಕರೆಯಲಾಗುವ ಈ ರಮಣೀಯ ತಾಣ ವಾರಾಂತ್ಯದ ಏಕದಿನ ಪ್ರವಾಸಕ್ಕೆ ಹೇಳಿಮಾಡಿಸಿದಂತಿದೆ. ಜಲಧಾರೆಯ ಕೆಳಗೆ ಮೂಡಿರುವ ಸಣ್ಣ ಕೊಳದಲ್ಲಿ ಈಜು ಕೌಶಲ ಪರೀಕ್ಷಿಸಿಕೊಳ್ಳಬಹುದು. ಸೋಪಾನಪಾತದ ಎದುರಿನಿಂದ ನಮ್ಮದೊಂದೇ ದಾರಿ ಎನ್ನುವಂತೆ ಕಲ್ಲುಬಂಡೆಗಳನ್ನು ಲೆಕ್ಕಿಸದೆ ರಭಸದಿಂದ ನೀರು ಮುನ್ನುಗ್ಗಿ ಬರುತ್ತದೆ.ಬೆಂಗಳೂರಿನಿಂದ ಎಲೆಕ್ಟ್ರಾನ್ ಸಿಟಿ, ಚಂದಾಪುರ ಮಾರ್ಗವಾಗಿ ಆನೇಕಲ್ ಬಸ್ ನಿಲ್ದಾಣ ತಲುಪಿ. ಅದೇ ರಸ್ತೆಯಲ್ಲಿ ಒಂದು ಕಿ. ಮೀ. ಕ್ರಮಿಸಿದರೆ ಸಿಗುವ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಬಲಕ್ಕೆ ಹರಿವ ಹಾದಿಯಲ್ಲಿ ಎರಡು ಕಿ.ಮೀ. ಸಾಗಿದರೆ ಮುತ್ಯಾಲಮಡುವು ತಲುಪುತ್ತೀರಿ. ಆಟೋ ಲಭ್ಯ. ನಡಿಗೆ, ಚಾರಣಪ್ರಿಯರಿಗಂತೂ ದಾಪುಗಾಲಿಡುವುದೇ ಒಂದು ಹಬ್ಬ. ದಾರಿಯುದ್ದಕ್ಕೂ ಬಗೆಬಗೆ ಬೆಳೆಗಳ ಹೊಲ, ತೋಟಗಳ ನೋಟ ನಮ್ಮ ಆಯಾಸ ನೀಗುತ್ತವೆ. ಬನ್ನೇರುಘಟ್ಟ, ಜಿಗಣಿ ಮೂಲಕವೂ ಆನೇಕಲ್ ತಲುಪಬಹುದು. ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಕೆ. ಆರ್. ಮಾರ್ಕೆಟ್‌ನಿಂದ ಸಾಕಷ್ಟು ಬಸ್ಸುಗಳು ಹೊರಡುತ್ತವೆ. ಸ್ವಂತ ವಾಹನವಿದ್ದರೆ ಒಳಿತು.ಜಲಪಾತ ನೋಡಲು ಅಷ್ಟೇನೂ ಇಕ್ಕಟ್ಟಲ್ಲದ 250 ಮೆಟ್ಟಿಲುಗಳನ್ನು ಇಳಿದರಾಯಿತು. ಹಸಿರು ಹೊದ್ದ ಬೆಟ್ಟಗಳ ನಡುವೆ ಅವಿತುಕುಳಿತ ಜಲಪಾತ ಧುತ್ತನೆ ಗೋಚರಿಸುತ್ತದೆ. ನಾಲ್ಕು ಕಿ. ಮೀ. ಸಮೀಪದ ವಣಕನಹಳ್ಳಿ ಕೆರೆಯೇ ಈ ದಬದಬೆಯ ಮೂಲ. ಆಗಸ್ಟ್–ನವೆಂಬರ್ ಅವಧಿಯಲ್ಲಿ ಜಲಪಾತ ಮೈದುಂಬಿರುತ್ತದೆ. ಸುಮಾರು 300 ಅಡಿ ಎತ್ತರದಿಂದ ನೀರು ಧುಮ್ಮಿಕ್ಕಿ ಹರಿಯುತ್ತದೆ. ನೋವಿನ ಉಪಶಮನಕ್ಕೆ ಮತ್ತು ಉಲ್ಲಾಸಕ್ಕೆ ಈ ಜಲಧಾರೆಗೆ ಬೆನ್ನೊಡ್ಡುವವರುಂಟು. ಬದಿಯಲ್ಲೇ ಮುತ್ಯಾಲ ಈಶ್ವರ ಗುಡಿಯಿದೆ.ಅಂದಹಾಗೆ, ಪ್ರವೇಶದ್ವಾರದ ಬಳಿ ಒಂದು ಹೋಟೆಲ್ ಇದೆ. ಯಥಾಪ್ರಕಾರ ಬುತ್ತಿ ಒಯ್ಯುವವರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಯದಿರುವ ಶಿಸ್ತನ್ನು ಸ್ವಪ್ರೇರಿತರಾಗಿ ಪಾಲಿಸುವುದು ಒಳಿತು.ಜಲಪಾತ ವೀಕ್ಷಿಸಲು ಶುಲ್ಕವಿಲ್ಲ. ಕೋತಿಗಳ ಹಾವಳಿ ವಿಪರೀತ ಇದೆ. ಹಾಗಾಗಿ ಮಕ್ಕಳೊಂದಿಗೆ ಸಂದರ್ಶಿಸುವವರು ವಿಶೇಷ ಜಾಗರೂಕತೆ ವಹಿಸಬೇಕು. ಕುಡಿಯುವ ನೀರು ಜೊತೆಗಿರಲಿ. ಕತ್ತಲು ಆವರಿಸುವುದರಿಂದ ಗೋಧೂಳಿ ಮುಹೂರ್ತಕ್ಕೆ ಮೊದಲೇ ಮಡು ವೀಕ್ಷಣೆ ಮುಗಿಸಿ ಮೆಟ್ಟಿಲು ಆರೋಹಣಕ್ಕೆ ಮುಂದಾಗುವುದು ಕ್ಷೇಮಕರ.ನಗರದ ಸುತ್ತ ಪಿಕ್‌ನಿಕ್‌ ಹೋಗಬಲ್ಲ ತಾಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಒಂದೇ ದಿನದಲ್ಲಿ ಹೋಗಿ,

ಸಂತಸದ ಕ್ಷಣಗಳನ್ನು ಮೊಗೆದುಕೊಂಡು ಬರಬಹುದಾದ ಕೆಲವು ತಾಣಗಳು ಅಪ್‌ಡೇಟ್‌ ಆಗಿವೆ. ತಲೆಯೆತ್ತಿರುವ ಹೊಸ ಪಿಕ್‌ನಿಕ್‌ ಸ್ಪಾಟ್‌ಗಳೂ ಇವೆ. ವಾರಾಂತ್ಯದ ಓದಿಗೆ ಪ್ರತಿ ಶನಿವಾರದ ಸಂಚಿಕೆಯಲ್ಲಿ ಒಂದು ‘ಸುತ್ತಾಣ’ ಪ್ರಕಟವಾಗಲಿದೆ. ಓದುಗರೂ ಉತ್ತಮ ಗುಣಮಟ್ಟದ ಚಿತ್ರಗಳ ಸಹಿತ 500 ಪದಗಳಿಗೆ ಮೀರದಂತೆ ತಾಣಗಳ ಪರಿಚಯ ಮಾಡಿಕೊಡಬಹುದು. ಬರಹ, ನುಡಿ ಅಥವಾ ಯೂನಿಕೋಡ್‌ನಲ್ಲಿ ಬರೆದು metropv@prajavani.co.in ಇ–ಮೇಲ್‌ಗೆ ಕಳುಹಿಸಿ.


ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry